ಮಡಿಕೇರಿ, ಜ. 27: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯನ್ನು ಮೊದಲ ಸ್ಥಿತಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವದಾಗಿ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಜಿಲ್ಲಾಡಳಿತ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದಲ್ಲಿರುವ ಬೋಧಕ ಆಸ್ಪತ್ರೆಯ ಆವರಣದಲ್ಲಿ ರೂ. 100 ಕೋಟಿ ವೆಚ್ಚದ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.ಕಳೆದ ಎರಡು ವರ್ಷ ಪ್ರವಾಹದಿಂದಾಗಿ ದಕ್ಷಿಣದ ಕಾಶ್ಮೀರ ಕೊಡಗಿನ ಜನತೆ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. 2018ರಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 250 ಮನೆಗಳು ಪೂರ್ಣವಾಗಿವೆ. ಇನ್‍ಫೋಸಿಸ್ ಸಂಸ್ಥೆಯವರು 200 ಮನೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು. 2019ರಲ್ಲಿ 2033 ಮನೆಗಳಿಗೆ ಹಾನಿಯಾಗಿವೆ. ಈಗಾಗಲೇ ರೂ. 12.46 ಕೋಟಿ ಬಿಡುಗಡೆ ಮಾಡಲಾಗಿದೆ. ಎನ್‍ಡಿಆರ್ ಎಫ್‍ನಡಿ ರೂ. 10 ಕೋಟಿ ಹಾಗೂ ರಾಜ್ಯ ಸರಕಾರದಿಂದ ರೂ. 300 ಕೋಟಿ ಅನುದಾನಕ್ಕೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದ ಮುಖ್ಯಮಂತ್ರಿಗಳು; ಕೊಡಗನ್ನು ಹಿಂದಿನ ಸ್ಥಿತಿಗೆ ತರಲು ಸರಕಾರದ ಬೆಂಬಲ ಸದಾ ಇದ್ದೇ ಇರುತ್ತದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೂ ಅವಕಾಶವಿದ್ದು; ಕೊಡಗು ಮೊದಲಿ ನಂತಾಗಲೂ ಎಷ್ಟು ಬೇಕಾದರೂ ಅನುದಾನ ಒದಗಿಸುವದಾಗಿ ಭರವಸೆ ನೀಡಿದರು.

ಆರೋಗ್ಯ, ಕೃಷಿ, ಶಿಕ್ಷಣಕ್ಕೆ ಸರಕಾರದ ಪ್ರಥಮ ಆದ್ಯತೆಯಿದ್ದು; ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕೆಂಬದು ಸರಕಾರದ ಗುರಿಯಾಗಿದೆ. ಕೇಂದ್ರ ಸರಕಾರದ ಸಹ ಯೋಗದೊಂದಿಗೆ ಚಿಕ್ಕಮಗಳೂರು, ಬೆಳಗಾವಿ, ಹಾವೇರಿ ಮುಂತಾದೆಡೆ ಹೊಸ ವೈದ್ಯಕೀಯ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ಗಳಿರಬೇಕೆಂಬದು ಸರಕಾರದ ಅಪೇಕ್ಷೆ ಯಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮಡಿಕೇರಿಯಲ್ಲಿ ಈಗಾಗಲೇ 320 ಹಾಸಿಗೆಗಳ ಸಾಮಥ್ರ್ಯ ಉಳ್ಳ ಆಸ್ಪತ್ರೆಯಿದ್ದು; ಉನ್ನತೀಕರಣ ಗೊಳಿಸುವ ಉದ್ದೇಶದೊಂದಿಗೆ ರೂ. 100 ಕೋಟಿ ವೆಚ್ಚದಲ್ಲಿ 450 ಹಾಸಿಗೆಗಳ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸ ಲಾಗಿದೆ. ಬಡವರಿಗೆ ಸರಕಾರಿ ಸೇವೆ ಸುಲಭದಲ್ಲಿ ಸಿಗುವಂತಾಗಬೇಕು. ಆದಷ್ಟು ಶೀಘ್ರ ಕಟ್ಟಡ ಪೂರ್ಣಗೊಳಿಸುವದರೊಂದಿಗೆ ಉತ್ತಮ ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ಹೇಳಿದರು.

(ಮೊದಲ ಪುಟದಿಂದ)

ಎಲ್ಲರಿಗೂ ಆರೋಗ್ಯ ಸೇವೆ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಉಪಮುಖ್ಯ ಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು, ಮಡಿಕೇರಿ ಯಲ್ಲಿ 450 ಹಾಸಿಗೆಗಳ ಹೆಚ್ಚುವರಿ ಕೊಠಡಿಗಳ ಕಟ್ಟಡಕ್ಕೆ ಚಾಲನೆ ನೀಡಲಾಗಿದ್ದು; ಶೀಘ್ರದಲ್ಲಿ ಕೆಲಸ ಆಗಲಿದೆ. ಕೊಡಗು ವೈದ್ಯಕೀಯವಾಗಿ ವಿಸ್ತøತವಾಗಿ ಬೆಳೆದ ಜಿಲ್ಲೆ. ಇಲ್ಲಿ ಸೌಲಭ್ಯ ಪಡೆದುಕೊಳ್ಳಲು ಅಡೆತಡೆ ಗಳು, ಸವಾಲುಗಳು ಇರುತ್ತವೆ; ಸವಾಲುಗಳನ್ನು ಬಗೆಹರಿಸಿಕೊಂಡು ಆರೋಗ್ಯ ಸೇವೆ ನೀಡಬೇಕಾಗಿದೆ. ಕಟ್ಟಿರುವ ಆಸ್ಪತ್ರೆ ಸದ್ಬಳಕೆಯಾಗ ಬೇಕೆಂದು ಹೇಳಿದರು.

ಆಸ್ಪತ್ರೆಗಳಲ್ಲಿ ಇಲೆಕ್ಟ್ರಾನಿಕಲ್ ಮೆಡಿಕಲ್ ರೆಕಾರ್ಡ್ ವ್ಯವಸ್ಥೆ ಯೊಂದಿಗೆ ಬಡವರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗಬೇಕೆಂಬ ಚಿಂತನೆ ಹರಿಸಲಾಗಿದೆ. ಸರಕಾರ ಟೆಲಿಮೆಡಿಸಿನ್ ಹಾಗೂ ಟೆಲಿ ಕನ್ಸಲ್ಟೇಶನ್‍ಗೆ ಹೆಚ್ಚಿನ ಆದ್ಯತೆ ನೀಡಿದೆ. ಟೆಲಿ ಕನ್ಸಲ್ಟೇಶನ್ ಅತಿ ಅಗತ್ಯವಾಗಿದ್ದು; ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು.

ಮಾರ್ಚ್‍ನಲ್ಲಿ ಮನೆ

ಕಳೆದೆರಡು ವರ್ಷಗಳಲ್ಲಿ ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿ ಯಾಗಿದೆ. ಕಳೆದ ವರ್ಷ ಪ್ರವಾಹದಿಂದ ಸಂತ್ರಸ್ತರಾದ 7 ಲಕ್ಷ ಮಂದಿ ನಿರಾಶ್ರಿತರಿಗೆ ಮುಖ್ಯಮಂತ್ರಿಗಳು ಅನುದಾನ ಒದಗಿಸಿದ್ದಾರೆ. ಕೇಂದ್ರದ ನಿಯಮದಂತೆ ರೂ. 97 ಸಾವಿರದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಮನಗಂಡ ಮುಖ್ಯ ಮಂತ್ರಿಗಳು ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷದಲ್ಲಿ ಮನೆ ನಿರ್ಮಿಸಲು ಅನುದಾನ ಒದಗಿಸಿದ್ದಾರೆ. ಇದು ದೇಶದಲ್ಲಿಯೇ ಪ್ರಥಮ ಉದಾಹರಣೆ ಯಾಗಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 2018ರಲ್ಲಿ ಮನೆ ಕಳೆದುಕೊಂಡ 800 ಮಂದಿಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮುಂಬರುವ ಮಾರ್ಚ್ 30ರೊಳಗಡೆ ಮನೆ ಹಸ್ತಾಂತರ ಮಾಡಲಾಗುವದೆಂದು ಸಚಿವರು ಭರವಸೆ ನೀಡಿದರು. ಕೊಡಗು ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಯಾವದೇ ಕಾರಣಕ್ಕೂ ಕೊಡಗನ್ನು ಕಡೆಗಣಿಸುವದಿಲ್ಲ. ಕೊಡಗನ್ನು ಮೊದಲಿನ ಸ್ಥಾನಕ್ಕೆ ಕೊಂಡೊಯ್ಯಲು ಜಿಲ್ಲೆಯ ಈರ್ವರು ಶಾಸಕರುಗಳ ಸಹಕಾರದೊಂದಿಗೆ ಪ್ರಯತ್ನಿಸುವದಾಗಿ ಹೇಳಿದರು. ಕೊಡಗು ಪುನರ್ ನಿರ್ಮಾಣ ಉದ್ದೇಶದೊಂದಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಸತಿ ಯೋಜನೆಯಡಿ ರೂ. 135 ಕೋಟಿ ಅನುದಾನ ಒದಗಿಸಲಾಗಿದೆ. ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ರಸ್ತೆಗಳಿಗೆ ಹಾನಿಯಾಗಿದೆ. ಸರಿಪಡಿಸುವ ಕೆಲಸ ಆಗುತ್ತಿದೆ ಎಂದರು.

ಅಭಿವೃದ್ಧಿಗೆ ಅನುದಾನ

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ; ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಗೆ ಸಿಲುಕಿ ಕೊಡಗು ಜಿಲ್ಲೆ ಸಂಕಷ್ಟಕ್ಕೆ ಒಳಗಾಗಿದ್ದ ಸಂದರ್ಭ ಮುಖ್ಯಮಂತ್ರಿಗಳು ಸಭೆ ಕರೆದು ಜಿಲ್ಲೆಯಿಂದ ಸಲ್ಲಿಸಲ್ಪಟ್ಟ ರೂ. 536 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡಿ; ಕೂಡಲೇ ರೂ. 100 ಕೋಟಿ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಇವರ ಅನುದಾನ ಕೂಡ ಬಿಡುಗಡೆ ಮಾಡಿದ್ದಾರೆ. ಕಾಮಗಾರಿಗಳಿಗೆ ಚಾಲನೆ ನೀಡ ಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾ ರೆಂದು ಹೇಳಿದರು.

ಅಭಿವೃದ್ಧಿಯಾಗುತ್ತಿದೆ

ಸಂಸದ ಪ್ರತಾಪ್‍ಸಿಂಹ ಮಾತನಾಡಿ; 2018ರಲ್ಲಿ ಪ್ರವಾಹ, ಭೂಕುಸಿತ ಉಂಟಾದಾಗ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅವರು; ಭೇಟಿ ನೀಡಿ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು. ಕಳೆದ ವರ್ಷ ಪ್ರವಾಹ ಬಂದಾಗ ಅವರು ಮುಖ್ಯಮಂತ್ರಿ ಯಾಗಿದ್ದರು. 27 ಜಿಲ್ಲೆಗಳಿಗೆ ಭೇಟಿ ಕೊಟ್ಟು ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷ ಪರಿಹಾರ ಘೋಷಿಸಿದರು ಎಂದು ಹೇಳಿದರು.

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಆಂದೋಲನ ಆರಂಭವಾದಾಗ ಜಿಲ್ಲೆಯ ಶಾಸಕರುಗಳ ಸಹಿತ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಮುಖ್ಯಮಂತ್ರಿಗಳು ಮಂಜೂರಾತಿ ನೀಡಿದ್ದಾರೆ. ಇದೀಗ ಚಾಲನೆ ನೀಡಲಾಗಿದೆ. ಕೊಡಗು ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದಲ್ಲಿ ಆಸ್ಪತ್ರೆಗಳನ್ನು ರೆಫರಲ್ ಸೆಂಟರ್ ಎಂದು ಪರಿಗಣಿಸಲಾಗಿದೆ. ಇದನ್ನು ತೆಗೆದು ಹಾಕಿ ಬಡವರಿಗೆ ನೇರವಾಗಿ ಸೌಲಭ್ಯ ದೊರಕುವಂತಾಗಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿಗೆ ಮನವಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್; ಜಿಲ್ಲೆಯ ಜನತೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಪ್ರಕೃತಿ ವಿಕೋಪದಲ್ಲಿ ಜಿಲ್ಲೆಯ ಬಹಳಷ್ಟು ಮಂದಿ ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆ ಸುಪರ್ದಿಗೆ ನೀಡಲಾಗಿದ್ದ ಸಿ. &amdiv; ಡಿ. ಜಾಗವನ್ನು ಕಂದಾಯ ಇಲಾಖೆಗೆ ಹಿಂಪಡೆಯ ಲಾಗಿದ್ದು; ಸುಮಾರು 1 ಲಕ್ಷ ಹೆಕ್ಟೇರ್‍ನಷ್ಟಿದೆ. ಈ ಜಾಗವನ್ನು ಜಮೀನು ಕಳೆದುಕೊಂಡವರಿಗೆ ಒದಗಿಸಿಕೊಡುವಂತೆ ಮನವಿ ಮಾಡಿದರು. ಫಾರಂ 54 ಹಾಗೂ 94 ಸಿ ನಡಿ ಅರ್ಜಿ ಸಲ್ಲಿಸಲು ದಿನಾಂಕ ಮುಗಿದು ಹೋಗಿರುತ್ತದೆ. ಚುನಾವಣೆ ಇದ್ದ ಕಾರಣ ಸಾಕಷ್ಟು ಮಂದಿಗೆ ಅರ್ಜಿ ಸಲ್ಲಿಸಲಾಗಿಲ್ಲ. ಅವರುಗಳಿಗೆ ಅವಕಾಶ ನೀಡ ಬೇಕೆಂದು ಕೋರಿದರು.

ಪ್ರಕೃತಿ ವಿಕೋಪದಿಂದಾಗಿ ನದಿಗಳಲ್ಲಿ ಹೂಳು ತುಂಬಿಕೊಂಡಿದೆ. ಕಳೆದ ವರ್ಷ ಹೆಚ್ಚು ಮಳೆಯಾಗ ದಿದ್ದರೂ ಪ್ರವಾಹ ಬಂದು ಕುಶಾಲನಗರ ಮುಳುಗಡೆಯಾಗಿತ್ತು. ಮುಂದಿನ ಮಳೆಗಾಲದೊಳಗಡೆ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದೀಗ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿದೆ. ಮುಂದಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯಕ್ಕೆ ಅನುದಾನ ಒದಗಿಸುವಂತೆ ಕೋರಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ತು ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಚಂದ್ರಕಲಾ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್‍ಪಿ ಡಾ. ಸುಮನ್ ಪಣ್ಣೇಕರ್, ಸಿಇಓ ಲಕ್ಷ್ಮಿಪ್ರಿಯ, ಎಡಿಸಿ ಡಾ. ಸ್ನೇಹ, ವೈದ್ಯಕೀಯ ಸಂಸ್ಥೆಯ ಡೀನ್ ಡಾ. ಕೆ.ಬಿ. ಕಾರ್ಯಪ್ಪ ಇತರರಿದ್ದರು.