ಸಿಎಎ ವಿರುದ್ಧ ಪ.ಬಂಗಾಳ ನಿರ್ಣಯ
ನವದೆಹಲಿ, ಜ. 27: ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಸಾಲಿಗೆ ಇದೀಗ ಪಶ್ಚಿಮ ಬಂಗಾಳ ರಾಜ್ಯ ಸಹ ಸೇರಿಕೊಂಡಿದೆ. ಕೇರಳ, ಪಂಜಾಬ್ ಮತ್ತು ರಾಜಸ್ಥಾನಗಳ ನಂತರ ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಪೌರತ್ವ ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ವಿಧಾನಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ನಾವು ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿಗಳಿಗೆ ಅನುಮತಿ ನೀಡುವುದಿಲ್ಲ. ಇವುಗಳ ವಿರುದ್ಧ ನಾವು ಶಾಂತಿಯುತವಾಗಿಯೇ ಹೋರಾಡತ್ತೇವೆ ಎಂದರು.
ವಿಮಾನ ಪತನಗೊಂಡು 83 ಸಾವು
ಘಜ್ನಿ, ಜ. 27: ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ಸೋಮವಾರ ವಿಮಾನವೊಂದು ಪತನಗೊಂಡಿದ್ದು, ಸುಮಾರು 83 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಬೋಯಿಂಗ್ ವಿಮಾನವು ಅರಿಯಾನ ಆಫ್ಘಾನ್ ಏರ್ಲೈನ್ಗೆ ಸೇರಿದ್ದಾಗಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್ ಏಕ್ ಜಿಲ್ಲೆಯ ಸಾಡೋ ಖೇಲ್ ಏರಿಯಾದಲ್ಲಿ ಪತನವಾಗಿದೆ ಎಂದು ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್ ಕಚೇರಿಯ ವಕ್ತಾರ ಆರೀಫ್ ನೂರಿ ಹೇಳಿದ್ದಾರೆ. ಘಜ್ನಿಯ ಪೆÇಲೀಸ್ ವರಿಷ್ಠಾಧಿಕಾರಿ ಪ್ರಕಾರ, ಹೇರತ್ ನಿಂದ ಕಾಬೂಲ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಏಕಾಏಕಿ ಪತನಗೊಂಡಿದೆ. ಈ ಅವಘಡಕ್ಕೆ ಸೂಕ್ತ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವು ತಾಲಿಬಾನ್ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಲಾಗುತ್ತಿದೆ.
ಎರಡು ದಿನ ಬ್ಯಾಂಕ್ ಮುಷ್ಕರ
ನವದೆಹಲಿ, ಜ. 27: ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಕಾರ್ಮಿಕ ಸಂಘಗಳ ವೇದಿಕೆಯಾದ ಬ್ಯಾಂಕ್ ನೌಕರರ ಸಂಘಗಳ ಸಂಯುಕ್ತ ಒಕ್ಕೂಟ (ಯುಎಫ್ ಬಿಯು) ಜ. 31 ರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರ ದೆಹಲಿಯ ನಿವಾಸದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿರುವುದರಿಂದ ಸಭೆ ವಿಫಲವಾಗಿದೆ. ಸಭೆಯಲ್ಲಿ ಭಾರತೀಯ ಬ್ಯಾಂಕ್ ಗಳ ಸಂಘ (ಐಬಿಎ) ಮತ್ತು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಯುಎಫ್ ಬಿಯು ಕಡೆಯಿಂದ ಬ್ಯಾಂಕ್ ನೌಕರರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಯುಎನ್ಐಗೆ ತಿಳಿಸಿದ್ದಾರೆ. ಶೇ. 20ರಷ್ಟು ಏರಿಕೆಯೊಂದಿಗೆ ವೇತನ ಪರಿಷ್ಕರಣೆ ಇತ್ಯರ್ಥ ಮತ್ತು ಇತರ ಬೇಡಿಕೆಗಳಿಗೆ ಒತ್ತಾಯಿಸಿ ಕರೆ ನೀಡಲಾಗಿರುವ ಎರಡು ದಿನಗಳ ಮುಷ್ಕರದಲ್ಲಿ ಸುಮಾರು 10 ಲಕ್ಷ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರತಿಭಟನೆಗೆ ಪಿಎಫ್ಐ ಹಣದ ನಂಟು
ನವದೆಹಲಿ, ಜ. 27: ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ನಡುವೆ ಹಣಕಾಸಿನ ನಂಟು ಇರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ. ಸಂಸತ್ತಿನಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ ಅಂಗೀಕಾರಗೊಂಡ ದಿನದಿಂದ ಇಂದಿನವರೆಗೆ ನೂತನ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಮಧ್ಯೆ, ಪಿಎಫ್ಐ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಇಡಿ ತನಿಖೆ ನಡೆಸುತ್ತಿದ್ದು, ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಹೊಸ ವಿಷಯಗಳು ಬಹಿರಂಗಗೊಂಡಿವೆ. ಸಂಸತ್ತಿನಲ್ಲಿ ಸಿಎಎ ಅಂಗೀಕಾರಗೊಂಡ ನಂತರ ಪಶ್ಚಿಮ ಉತ್ತರ ಪ್ರದೇಶದ ವಿವಿಧ ಬ್ಯಾಂಕ್ ಖಾತೆಗಳಿಗೆ ಕನಿಷ್ಠ 120 ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದ್ದು, ಈ ಹಣವನ್ನು ಸಿಎಎ ವಿರೋಧಿ ಪ್ರತಿಭಟನೆಗೆ ಬಳಸಿಕೊಳ್ಳಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ಮತ್ತು ಪಿಎಫ್ಐ ನಡುವಿನ ಆರ್ಥಿಕ ನಂಟಿನ ಕುರಿತು ಜಾರಿ ನಿರ್ದೇಶನಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ವೈಮಾನಿಕ ಸಂಸ್ಥೆ ಮಾರಾಟ ದೇಶದ್ರೋಹ
ನವದೆಹಲಿ, ಜ. 27: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡುವ ನರೇಂದ್ರ ಮೋದಿ ಸರ್ಕಾರದ ಯತ್ನವನ್ನು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ತೀವ್ರವಾಗಿ ವಿರೋಧಿಸಿದ್ದು, ಇದು ದೇಶ ವಿರೋಧಿ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ ಇಂಡಿಯಾ ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಸ್ವಾಮಿ ಬೆದರಿಕೆ ಹಾಕಿದ್ದಾರೆ. ಏರ್ ಇಂಡಿಯಾದಲ್ಲಿ ಹೊಂದಿರುವ ಎಲ್ಲ ಷೇರುಗಳನ್ನೂ ಬಿಟ್ಟುಕೊಡಲು ಸರ್ಕಾರ ತೀರ್ಮಾನಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಚಿಸುವವರು ಮಾರ್ಚನಲ್ಲಿ ಇ-ಬಿಡ್ ಸಲ್ಲಿಸಬೇಕು ಎಂದು ಸರ್ಕಾರ ಗಡುವು ನೀಡಿದೆ. ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್ ಸಹ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ವಿರುದ್ದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರದ ಬಳಿ ಹಣ ಇಲ್ಲ. ಸಂಪೂರ್ಣ ದಿವಾಳಿಯಾಗಿದೆ. ಹೀಗಾಗಿ ಏರ್ ಇಂಡಿಯಾ ಮಾರಾಟಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಆರೋಪಿಸಿದ್ದಾರೆ.
ಫ್ರೀ ಕಾಶ್ಮೀರ ನಳಿನಿಗೆ ಜಾಮೀನು
ಮೈಸೂರು, ಜ. 27: ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮಾಡಿದ್ದ ಯುವತಿ ನಳಿನಿ ಬಾಲಕುಮಾರ್ ಗೆ ಮೈಸೂರು ಎರಡನೇ ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಪ್ರಕರಣದ ಮತ್ತೋರ್ವ ಆರೋಪಿ ಮರಿದೇವಯ್ಯನಿಗೂ ನ್ಯಾಯಾಲಯ ಜಾಮೀನು ನೀಡಿದೆ. ಇಬ್ಬರು ತಲಾ 50 ಸಾವಿರ ಬಾಂಡ್ ಜೊತೆ ಒಬ್ಬರು ಶ್ಯೂರಿಟಿ ನೀಡಬೇಕು. ಒಂದು ತಿಂಗಳ ಒಳಗೆ ಪಾಸ್ಪೆÇೀರ್ಟ್ ನ್ನು ಪೆÇಲೀಸರ ವಶಕ್ಕೆ ನೀಡುವುದು. 15 ದಿನಕ್ಕೊಮ್ಮೆ ಪೆÇಲೀಸ್ ಠಾಣೆಗೆ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯೊಳಗೆ ಭೇಟಿ ನೀಡಿ ಸಹಿ ಮಾಡಬೇಕು ಎಂದು ಷರತ್ತನ್ನು ನ್ಯಾಯಾಲಯ ವಿಧಿಸಿದೆ.
ಎನ್ ಡಿಎಫ್ಬಿ ಬಣಗಳೊಂದಿಗೆ ಒಪ್ಪಂದ
ನವದೆಹಲಿ ಜ.27 : ಮಹತ್ವದ ಬೆಳವಣಿಗೆಯೊಂದರಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸುದೀರ್ಘ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಸೋಮವಾರ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ ಡಿಎಫ್ ಬಿ)ನ ಎಲ್ಲ ಬಣಗಳ ಪ್ರತಿನಿಧಿಗಳೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವಾಲಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಬೋಡೋ ಪ್ರತಿನಿಧಿಗಳ ನಡುವಿನ ಒಪ್ಪಂದ ಐತಿಹಾಸಿಕವಾಗಿದೆ. ಒಪ್ಪಂದವು ಅಸ್ಸಾಂ ರಾಜ್ಯ ಮತ್ತು ಬೋಡೋ ಸಮುದಾಯ ಜನರಿಗೆ ಸುವರ್ಣ ಭವಿಷ್ಯ ರೂಪಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬೋಡೋ ಉಗ್ರರ ಸಂಘಟನೆಯ ಅನೇಕ ಬಣಗಳು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಹಿಂಸಾಚಾರ ಈ ಒಪ್ಪಂದದಿಂದ ಕೊನೆಗೊಳ್ಳಲಿದೆ. ಜ 30ರಂದು 1550 ಉಗ್ರ ಸಂಘಟನೆಗಳ ಸದಸ್ಯರು 130 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲಿದ್ದಾರೆ.