“ಮುಂದಿನ ವರ್ಷದಲ್ಲಿ ಇಸ್ರೋ ಸ್ವದೇಶೀ ಕ್ರಯೋಜನಿಕ್ ಇಂಜಿನ್ ಹೊತ್ತ ಮತ್ತೊಂದು ನೌಕೆ ಯನ್ನು ಸಿದ್ಧಪಡಿಸುತ್ತಿದೆ. ಇಡೀ ಜಗತ್ತು ನಿಬ್ಬೆರಗಾಗುವಂತೆ ಭಾರತ ಬಾಹ್ಯಾಕಾ&divlusmn; ಯಶೋಗಾಥೆಯನ್ನು ಬರೆಯುತ್ತದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ನುಡಿದಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ನಂತರದ ದಿನಗಳಲ್ಲಿ ಮಾಡಿದ ಸಾಧನೆಗಳು ಹಲವು.

ಜುಲೈ 22-2019. ಭಾರತದ ಪಾಲಿಗೆ ಸುವರ್ಣಾಕ್ಷರ ಗಳಲ್ಲಿ ಬರೆದಿಡಬಹುದಾದ ದಿನ. ಬಾಹ್ಯಾಂತರಿಕ್ಷ ಯಾತ್ರೆಯಲ್ಲಿ ಇದೊಂದು ಐತಿಹಾಸಿಕ ದಿನವಾಯಿತು. ಜುಲೈ 22 ರಂದು ಚಂದ್ರಯಾನ 2 ಆಂಧ್ರಪ್ರದೇಶದ ಶ್ರೀಹರಿ ಕೋಟದ ಸತೀಶ್‍ಧವನ್ ಸ್ಪೇಸ್ ಸೆಂಟರ್‍ನಿಂದ ಆಕಾಶಕ್ಕೆ ಉಡಾವಣೆ ಮಾಡಿತು. ಭಾರತೀಯ ಅಂತರಿಕ್ಷ ಸಾಧನೆಗಳ ಹೊಸತೊಂದು ಐತಿಹಾಸಿಕ ಮೈಲಿಗಲ್ಲಾಯಿತು ಚಂದ್ರಯಾನ-2

2008ರ ಅಕ್ಟೋಬರ್ 22ರಂದು ಪಿಎಸ್‍ಎಲ್‍ವಿ ರಾಕೆಟ್ ಚಂದ್ರಯಾನ-1ನ್ನು ಹೊತ್ತು ಅಂತರಿಕ್ಷಕ್ಕೆ ಉಡಾಯಿಸಿದಾಗ ವಿಶ್ವದ ಕಣ್ಣೆಲ್ಲ ಶ್ರೀಹರಿಕೋಟದ ಮೇಲಿತ್ತು. ಅದೊಂದು ಐತಿಹಾಸಿಕ ಕ್ಷಣ. ಭಾರತದ ಬಾಹ್ಯಾಕಾಶ ಸಾಧನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳ ಸಾಧನೆ ಯಾಗಿತ್ತು. ಜಗತ್ತಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನುರಿತ ಕೆಲವೇ ಕೆಲವು ದೇಶಗಳ ಸಾಲಿಗೆ ಸೇರಿಕೊಂಡ ಭಾರತದ ಹೆಮ್ಮೆಯ ಸಾಧನೆಯ ಹಿಂದೆ ಇರುವ ಹೆಸರು ಇಸ್ರೋ.ಇಸ್ರೊ ಕೈಗೆತ್ತಿಕೊಂಡಿರುವ ಅತ್ಯಂತ ಕ್ಲಿಷ್ಟ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಎಂದು ಇಸ್ರೋ ಅಧ್ಯಕ್ಷ ಡಾ.ಶಿವನ್ ಹೇಳಿದ್ದರು.ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ವಿಫಲವಾದರೂ ಅದು ಇಸ್ರೋ ಮತ್ತಷ್ಟು ಸಾಧನೆ ಮಾಡಲು ಮುನ್ನುಡಿ ಬರೆದಂತಾಗಿದೆ.

ಇದೀಗ ಡಿಸೆಂಬರ್ 2021ರಲ್ಲಿ ಮಾನವಸಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಮಹದೋದ್ದೇಶ ಇರಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸುವ ಮುನ್ನ ಮಾನವ ರಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದೆ. ಈ ವೇಳೆ ಅದು ವ್ಯೋಮಮಿತ್ರ ಎಂಬ ಮಹಿಳಾ ರೋಬೋಟ್‍ನ್ನು ಕಳುಹಿಸಲಿದೆ. ಇತ್ತೀಚೆಗೆ ಇಸ್ರೋ ಮಾನವ ಸಹಿತ ಬಾಹ್ಯಾಕಾಶಯಾನ ಈಗಿನ ಸವಾಲುಗಳು ಹಾಗೂ ಭವಿಷ್ಯದ ಗತಿ ಎಂಬ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾತನಾಡಿ ಮಾನವನ ರೀತಿಯ ರೋಬೋಟ್ ಅಂತರಿಕ್ಷ ದಲ್ಲಿ ಕಾರ್ಯನಿರ್ವಹಿಸಲಿದೆ. ವ್ಯೋಮನೌಕೆ ಸರಿಯಾಗಿ ಕಾರ್ಯ ನಿರ್ವಹಿಸಲಿದೆಯೇ ? ಎಂಬುದನ್ನು ಪರಿಶೀಲಿಸಲಿದೆ. ಮಾನವನನ್ನು ಅನುಕರಿಸುವ ಇದು ಮಾನವನೇ ವ್ಯೋಮದಲ್ಲಿ ಹಾರುತ್ತಿದ್ದಾನೆ ಎಂಬ ಅನುಭವ ನೀಡುತ್ತದೆ ಎಂದಿದ್ದರು. ಡಿಸೆಂಬರ್ 2020 ಹಾಗೂ ಜೂನ್ 2021ರಲ್ಲಿ ಎರಡು ಮಾನವ ರಹಿತ ವ್ಯೋಮಯಾತ್ರೆ ನಡೆಯಲಿದೆ. ಇದರಲ್ಲಿ ವ್ಯೋಮಮಿತ್ರ ಅಂತರಿಕ್ಷದಲ್ಲಿ ಹಾರಾಟ ನಡೆಸಲಿದೆ.

ಬಾಹ್ಯಾಕಾಶಕ್ಕೆ ತೆರಳುವುದು, ಅಲ್ಲಿ ಕಾರ್ಯನಿರ್ವಹಿಸು ವುದು ಅತ್ಯಂತ ಕಠಿಣ ಕೆಲಸವಾಗಿದ್ದು ಮಾನವರನ್ನು ಕಳುಹಿಸುವ ಮೊದಲು ಮಾನವ ನಿರ್ಮಿತ ರೋಬೋಟ್ ಕಳುಹಿಸಲು ಇಸ್ರೋ ನಿರ್ಧರಿಸಿದೆ. ಇದು ಬಾಹ್ಯಾಕಾಶದಲ್ಲಿ ಹಲವು ಸಂಶೋಧನೆಗಳನ್ನು ನಡೆಸಲಿದೆ. ಇದು ಹ್ಯೂಮನಾಯ್ಡ್, ಹ್ಯೂಮನಾಯ್ಡ್ ಎಂದರೆ ಮಾನವನನ್ನೇ ಹೋಲುವ ರೋಬೋಟ್. ಸಾಮಾನ್ಯವಾಗಿ ಇವು ಮಾತನಾಡ ಬಲ್ಲ, ಸಂವಹನ ನಡೆಸಬಲ್ಲ ಸಾಮಥ್ರ್ಯ ಹೊಂದಿರುತ್ತವೆ. ಇಸ್ರೋ ಪಕ್ಕಕ್ಕೆ ಮತ್ತು ಮುಂದಕ್ಕೆ ಮಾತ್ರ ಚಲಿಸಬಲ್ಲ ಹಾಫ್ ಹ್ಯೂಮನಾಯ್ಡ್‍ನ್ನು ನಿರ್ಮಿಸಿದೆ. ಬಾಹ್ಯಾಕಾಶಯಾನ ಮಾಡುವ ಈ ವ್ಯೋಮ ಮಿತ್ರ ಹೆಸರಿನ ರೋಬೋಟ್ ಮೊದಲ ಮಾನವ ರಹಿತ ಗಗನಯಾತ್ರಿ ಆಗಲಿದೆ.

- ಸಿ. ಎಸ್. ಸುರೇಶ್