ಸೋಮವಾರಪೇಟೆ,ಜ.27: ಶಾಲೆಗಳಲ್ಲಿ ಮಕ್ಕಳಿಗೆ ಪರಿಸರಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಸಿ ಭವಿಷ್ಯದಲ್ಲಿ ಪರಿಸರ ರಾಯಭಾರಿಗಳನ್ನಾಗಿ ರೂಪಿಸಲು ಶಿಕ್ಷಕರು ಶ್ರಮಿಸಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಕರೆ ನೀಡಿದರು.

‘ರಾಷ್ಟ್ರೀಯ ಹಸಿರು ಪಡೆ’ ಕಾರ್ಯಕ್ರಮದಡಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಾಲೂಕಿನ ಇಕೋ ಕ್ಲಬ್ ಹೊಂದಿರುವ ಶಾಲಾ ಶಿಕ್ಷಕರಿಗೆ ಶಾಲೆಗಳಲ್ಲಿ ಪರಿಸರ ಕಾರ್ಯಕ್ರಮಗಳ ಸಂಘಟನೆ ಹಾಗೂ ಇಕೋ ಕ್ಲಬ್‍ನ ಕಾರ್ಯಚಟುವಟಿಕೆ ಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಶಾಲೆಗಳಲ್ಲಿ ಪ್ಲಾಸ್ಟಿಕ್ ಮುಕ್ತ ಶಾಲಾವರಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಂದರ ಶಾಲಾ ಕೈತೋಟ ಹಾಗೂ ಔಷಧೀಯ ವನ ನಿರ್ಮಾಣ, ಶಾಲಾವರಣ, ಅಡುಗೆ ಮನೆ ಮತ್ತು ಶೌಚಾಲಯದ ಸ್ವಚ್ಛತೆಯೊಂದಿಗೆ ಶಾಲೆಯಲ್ಲಿ ಗಿಡ-ಮರಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಾಣ ಮಾಡುವ ಮೂಲಕ ಪರಿಸರ ಸ್ನೇಹಿ ಶಾಲೆಗಳನ್ನಾಗಿ ರೂಪಿಸಬೇಕು. ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಿ ಅವರನ್ನು ಜವಾಬ್ದಾರಿ ನಾಗರಿಕರನ್ನಾಗಿ ಮಾಡು ವದು ಶಿಕ್ಷಕರ ಹೊಣೆಗಾರಿಕೆಯಾಗಿದೆ ಎಂದರು. ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ. ಜಿ. ಪ್ರೇಮ್‍ಕುಮಾರ್ ಮಾತನಾಡಿ, ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮದಡಿ ಶಾಲೆಗಳಲ್ಲಿ ಇಕೋ ಕ್ಲಬ್‍ಗಳ ಮೂಲಕ ಪರಿಸರ ಚಟುವಟಿಕೆಗಳನ್ನು ಹೇಗೆ ಕೈಗೊಳ್ಳ ಬೇಕು ಎಂಬ ಕುರಿತು ಮಾಹಿತಿ ನೀಡಿದರು.

ಶಾಲೆಗಳಲ್ಲಿ ವಿವಿಧ ಪರಿಸರ ದಿನಾಚರಣೆಗಳು ಹಾಗೂ ಪರಿಸರ ಕಾರ್ಯಚಟುವಟಿಕೆಗಳ ಮೂಲಕ ಸುಸ್ಥಿರ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಎ.ಯೋಗೇಶ್, ಕಾರ್ಯಕ್ರಮ ಸಮನ್ವಯಾಧಿಕಾರಿ ಎ.ಹರೀಶ್, ಸಂಸ್ಥೆಯ ಕಾರ್ಯಕ್ರಮ ಸಹಾಯಕ ಬಿ.ಬಿ.ರಕ್ಷಿತ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿ.ಆರ್. ಶಶಿಧರ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ಇಕೋ ಕ್ಲಬ್‍ಗಳ ಉಸ್ತುವಾರಿ ಶಿಕ್ಷಕರು ಪಾಲ್ಗೊಂಡಿದ್ದರು.