ವೀರಾಜಪೇಟೆ, ಜ. 27: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪಾರದರ್ಶಕವಾಗಿ ಆಡಳಿತ ನಡೆಸು ವವರ ಪರ ಮತ ಚಲಾಯಿಸಿದರೆ ಮಾತ್ರ ಸದೃಢ ಸರ್ಕಾರ ರಚನೆಗೆ ಸಾಧ್ಯ ಎಂದು ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ ರಮಾ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಪುರಭವನದಲ್ಲಿ ಆಯೋಜಿಸ ಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ರಮಾ ಅವರು ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಮಾತ್ರ ಶಾಂತಿಯುತ ಜಾತ್ಯತೀತ ಬದುಕನ್ನು ಸಾಗಿಸಲು ಸಾಧ್ಯ. ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೆ ಸಾಮಾಜಿಕವಾಗಿ ನ್ಯಾಯ ಸಮ್ಮತವಾಗಿ ಆಡಳಿತಕ್ಕೆ ಅವಕಾಶ ನೀಡುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ದೇಶದ ಭವಿಷ್ಯವನ್ನು ನಿರ್ಧರಿಸಬಹುದು. ಸದೃಡ ವ್ಯಕ್ತಿ ದೇಶದ ಮುಖ್ಯಸ್ಥರಾದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಅಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ದೇಶ ಯಾವ ಸ್ಥಿತಿಗೆ ತಲುಪುತ್ತದೆ ಎಂಬುದನ್ನು ನಾವೇ ಊಹಿಸಿ ಕೊಳ್ಳಬಹುದಾಗಿದೆ ಎಂದರು.
ಪ್ರಧಾನ ಸಿವಿಲ್ ಜೆ.ಎಂಎಫ್ಸಿ ನ್ಯಾಯಾಧೀಶ ಎನ್.ವಿ ಕೋನಪ್ಪ ಮಾತನಾಡಿ ಹಿಂದೆ ಯಾವುದೇ ವ್ಯಕ್ತಿ ಮತ ಚಲಾಯಿಸಲು 21 ವರ್ಷ ಆಗಿರಬೇಕಿತ್ತು. ಸರ್ಕಾರ ಸಂವಿಧಾನಕ್ಕೆ 61ನೇ ತಿದ್ದುಪಡಿ ತಂದ ನಂತರ 18 ವರ್ಷಕ್ಕೆ ಮತದಾನದ ಹಕ್ಕನ್ನು ನೀಡಿದೆ. ದೇಶದಲ್ಲಿ 91 ಕೋಟಿ ಮತದಾರರಿ ದ್ದಾರೆ. ಉತ್ತಮ ಸದೃಢ ಹಾಗೂ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಅಧಿಕಾರ ಮತದಾರರಲ್ಲಿದೆ ಎಂದು ಹೇಳಿದರು.
ಅಪರ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಮಹಾಲಕ್ಷ್ಮಿ ಮಾತನಾಡಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರೀಕರು ಮತದಾನದ ಹಕ್ಕಿಗೆ ಅರ್ಹರಾಗಿರುತ್ತಾರೆ. ಮತದಾನದಂದು ಪ್ರವಾಸ ಇತ್ಯಾದಿಗಳನ್ನು ಕೈಗೊಂಡು ಮತದಾನ ಮಾಡದೆ ಇರುವುದು ಅಪರಾಧ. ನಮ್ಮಲ್ಲಿರುವ ಅಸ್ತ್ರವನ್ನು ಬಳಸಿಕೊಂಡು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಭಾರ ತಹಶೀಲ್ದಾರ್ ಮಹೇಶ್, ಕಂದಾಯ ಇಲಾಖೆ ತಾಲೂಕು ಅಧ್ಯಕ್ಷ ಪಳಂಗಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಸಾರ್ವಜನಿಕರಿಗೆ ಮತದಾನದ ಜಾಗೃತಿ ಬಗ್ಗೆ ಪ್ರತಿಜ್ಞಾವಿಧಿ ಭೋದಿಸಿದರು.