ಶನಿವಾರಸಂತೆ, ಜ. 27: ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಯನ್ನು ಹೊರಹೊಮ್ಮಿಸುವಲ್ಲಿ ಶಿಕ್ಷಕರ ಪ್ರಾಮಾಣಿಕ ಪರಿಶ್ರಮವಿದೆ ಎಂದು ಲೇಖಕಿ ಹಾಗೂ ಪತ್ರಕರ್ತೆ ನಯನತಾರಾ ಪ್ರಕಾಶ್ಚಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ದಶಮಾನೋತ್ಸವ ಪ್ರಯುಕ್ತ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗುರು-ಶಿಷ್ಯರ ಸಂಬಂಧ ಚೆನ್ನಾಗಿದ್ದು ಆ ಸಂಬಂಧ ಉಳಿಯಲು ಶಿಕ್ಷಕರು ಶಿಸ್ತು-ಕ್ಷಮೆ-ಕರುಣೆಯ ಸಂಗಮ ವಾಗಿರಬೇಕು. ಶಿಕ್ಷಣದ ಜತೆ ರೂಢಿಗತ ಸಂಸ್ಕಾರ-ಸಂಸ್ಕøತಿಕ ಅರಿವು ಮೂಡಿಸಬೇಕು. ವಿದ್ಯೆಗೆ ವಿನಯವೇ ಭೂಷಣ. ಹಿಂದುತ್ವ ಸಾರಿದ ಸ್ವಾಮಿ ವಿವೇಕಾನಂದರು ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗ ಬೇಕು. ಮಕ್ಕಳಿಗೆ ತರಬೇತಿ ನೀಡುವಂತೆ ಪೋಷಕರಿಗೂ ತರಬೇತಿಯ ಅಗತ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಣದಿಂದ ಮಾತ್ರ ಮಕ್ಕಳು ಸಮಾಜದಲ್ಲಿ ಛಾಪು ಮೂಡಿಸಲು ಸಾಧ್ಯ. ವ್ಯಕ್ತಿತ್ವ ರೂಪಿಸುವ ವಿದ್ಯೆಯನ್ನು ಪ್ರಾಮಾಣಿಕ ವಾಗಿ ಕಲಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಗುರುಕುಲ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ, ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಾಗಿ ದ್ದರೂ ಕನ್ನಡ ಭಾಷಾ ಕಲಿಕೆಗೂ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರು ಆಂಗ್ಲ ಭಾಷೆಗೆ ಸರಿಸಮಾನವಾಗಿ ಕನ್ನಡ ಭಾಷೆಗೂ ಪ್ರಾಧಾನ್ಯತೆ ನೀಡಿ ಕಲಿಸುತ್ತಿದ್ದಾರೆ ಎಂದರು.

ಪಠ್ಯ, ಕ್ರೀಡೆ, ಕರಾಟೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ಹಾಗೂ ದಶಮಾನೋತ್ಸವ ಪ್ರಯುಕ್ತ ಪೋಷಕರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಪೋಷಕರಿಗೂ ಬಹುಮಾನಗಳನ್ನು ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ಮುಖ್ಯ ಶಿಕ್ಷಕಿ ಹೆಚ್.ಕೆ. ಕೆಂಚಮ್ಮ ಇತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಆಶಾ ನಿರೂಪಿಸಿ, ಚೈತ್ರಾ ಸ್ವಾಗತಿಸಿದರು.