ಇಂದು (ತಾ. 28) ದೇಶದ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಜನ್ಮದಿನ. ಸ್ವತಂತ್ರ ಭಾರತ ದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ, ದೇಶಸೇವೆ, ರಾಷ್ಟ್ರಭಕ್ತಿ ಯಂತಹ ಉದಾತ್ತ ಗುಣ ಗಳಿಗೆ ಹೆಚ್ಚಿನ ಮಹತ್ವ ನೀಡಿದ ರಾಷ್ಟ್ರ ಮಟ್ಟದ ಕೆಲವೇ ಕೆಲವು ಮುಖಂಡರುಗಳಲ್ಲಿ ಕೊಡಂದೇರ ಎಂ. ಕಾರ್ಯಪ್ಪ ಅವರು ಅಗ್ರಗಣ್ಯರು. “ಶಿಸ್ತು ಅಂದರೆ ಕಾರ್ಯಪ್ಪ, ಕಾರ್ಯಪ್ಪ ಅಂದರೆ ಶಿಸ್ತು” ಎನ್ನುವಷ್ಟರ ಮಟ್ಟಿಗೆ ಇವರು ಶಿಸ್ತನ್ನು ರೂಢಿಸಿಕೊಂಡ ಸಮರ್ಥ ಸರದಾರ ಆಗಿದ್ದರು. ಕಾರ್ಯಪ್ಪ ಅವರು 28-1-1899 ರಂದು ಜನಿಸಿದರು ತಂದೆ ಕೊಡಂದೇರ ಮಾದಪ್ಪ ತಾಯಿ ಕಾವೇರಮ್ಮ.
ಕೆ. ಎಂ. ಕಾರ್ಯಪ್ಪ ಅವರು 19ನೇ ಪ್ರಾಯದಲ್ಲಿ ಭಾರತೀಯ ಸೇನೆಯ “ಸೆಕೆಂಡ್ ಲೆಫ್ಟಿನೆಂಟ್” ಹುದ್ದೆಗೆ ಆಯ್ಕೆಯಾದರು. ಅಲ್ಲಿಂದ ಮುಂದೆ ಕಾರ್ಯಪ್ಪನವರು ಬದುಕಿನ ಮಾರ್ಗದಲ್ಲಿ ಹಿಂದೆ ತಿರುಗಿ ನೋಡಿದ್ದಿಲ್ಲ. ಲೆಫ್ಟಿನೆಂಟ್ - ಕ್ಯಾಪ್ಟನ್ - ಮೇಜರ್ - ಲೆಫ್ಟಿನೆಂಟ್ ಕರ್ನಲ್-ಕರ್ನಲ್-ಬ್ರಿಗೇಡಿಯರ್-ಮೇಜರ್ ಜನರಲ್-ಲೆಫ್ಟಿನೆಂಟ್ ಜನರಲ್-ಜನರಲ್-ಕಮಾಂಡರ್ ಇನ್ ಚೀಫ್-ಫೀಲ್ಡ್ ಮಾರ್ಷಲ್... ಹೀಗೇ ಸ್ವ ಸಾಮಥ್ರ್ಯದ ಬಲದಿಂದ ಒಂದೊಂದೇ ಮೆಟ್ಟಿಲುಗಳನ್ನು ಏರಿ, ಸೇನಾ ಪರಂಪರೆಯಲ್ಲಿ ಅಪರೂಪದ ದಾಖಲೆಗೆ ನಾಂದಿಯಾದರು.
15-1-1948 ರಂದು ಕಾರ್ಯಪ್ಪನವರು... ಆಗ ಭಾರತ ಸೇನೆಯ ಮುಖ್ಯಸ್ಥರಾಗಿದ್ದ ಬ್ರಿಟನಿನ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ “ಜನರಲ್” ಪದವಿಯ ಅಧಿಕಾರವನ್ನು ಪಡೆದುಕೊಂಡರು. ಈ ಸುದಿನವನ್ನು ಸೇನಾಸ್ಫೂರ್ತಿಯ ದಿನವನ್ನಾಗಿ ನೆನಪಿಸಿಕೊಳ್ಳಲು ಭಾರತ ರಾಷ್ಟ್ರಮಟ್ಟದಲ್ಲಿ “ಸೇನಾದಿನ” (ಂಡಿmಥಿ ಆಚಿಥಿ) ಎಂದು ವರ್ಷಂಪ್ರತಿ ಆಚರಿಸಲಾಗುತ್ತಿದೆ.
1947 ರಲ್ಲಿ ಭಾರತವು ಬ್ರಿಟೀಷರಿಂದ ಸ್ವತಂತ್ರವಾದ ಸಂದರ್ಭದಲ್ಲಿ... ಭಾರತೀಯ ಸೇನಾಪಡೆ ಸ್ವಲ್ಪಮಟ್ಟಿಗೆ ಅತಂತ್ರವಾಗಿತ್ತು. ಬ್ರಿಟೀಷರ ದೀರ್ಘಕಾಲದ ಆಡಳಿತ ವ್ಯವಸ್ಥೆಯ ಪರಿಣಾಮದಿಂದ ಸೈನ್ಯ ಹಾಗೂ ಸೈನ್ಯಾಡಳಿತ ಇಂಗ್ಲಿಷರ ಪ್ರಭಾವಾದಿಗಳಿಗೆ ಒಗ್ಗಿ ಹೋಗಿತ್ತು. ಈ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶೀಯ ಸೈನ್ಯವನ್ನು ಭಾರತೀಕರಣಗೊಳಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು. ಜೊತೆಗೆ ಅಖಂಡ ಭಾರತ ದೇಶವು ಭಾರತ-ಪಾಕಿಸ್ತಾನ ಎಂದು ಇಬ್ಭಾಗವಾಗಿ, ಅದಕ್ಕನುಸಾರವಾಗಿ ಸೈನ್ಯವನ್ನೂ-ಸೈನಿಕರನ್ನೂ ವಿಭಜಿಸಬೇಕಾಗಿತ್ತು. ಅತ್ಯಂತ ಕ್ಲಿಷ್ಟವೂ, ಮಹತ್ತರವೂ, ಸೂಕ್ಷ್ಮವೂ, ಸವಾಲೂ ಆಗಿದ್ದ ಈ ಕಾರ್ಯವನ್ನು ಕಾರ್ಯಪ್ಪನವರು ತನ್ನ ದಿಟ್ಟ ನಿಲುವು, ಅಪ್ರತಿಮ ಧೈರ್ಯ, ನಿಷ್ಪಕ್ಷಪಾತ ಧೋರಣೆ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ... ಪ್ರಪಂಚವೇ ನಿಬ್ಬೆರಗಾಗುವಂತೆ ಸಾಧಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಎಲ್ಲೆಡೆ ಅರಾಜಕತೆ ಎದ್ದು ಕಾಣುತ್ತಿದ್ದರೂ, ಸೇನಾಪಡೆಗಳ ಮುಂದಾಲೋಚನೆ, ಅವಿಶ್ರಾಂತ ಪ್ರಯತ್ನ, ಅತಿಯಾದ ಸಂಯಮ, ಶಿಸ್ತುಬದ್ಧ ನಡಾವಳಿಕೆಯ ಫಲದಿಂದ ಅಲ್ಪಾವಧಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದು, ಉಭಯ ದೇಶಗಳ ಜನರು ನಿಟ್ಟುಸಿರು ಬಿಡುವಂತಾಯಿತು. ಈ ಎಲ್ಲಾ ಕ್ಲಿಷ್ಟ ಸನ್ನಿವೇಶಗಳಲ್ಲಿ ಸೇನಾನಾಯಕ ಕಾರ್ಯಪ್ಪನವರ ಪಾತ್ರ ಅವಿಸ್ಮರಣೀಯವಾದುದು.
ಸೇವಾವಧಿಯಲ್ಲಿ ಕಾರ್ಯಪ್ಪನವರು 2ನೇ ಮಹಾಯುದ್ಧ, ಭಾರತ-ಪಾಕಿಸ್ತಾನ ಸಮರ, ಜಮ್ಮು ಕಾಶ್ಮೀರದ ಜಟಿಲ ಸಮಸ್ಯೆ... ಇತ್ಯಾದಿಗಳನ್ನು ಅತೀವ ಚಾಕಚಕ್ಯತೆಯಿಂದ ಎದುರಿಸಿದ್ದರು. ಹೀಗೆ, 1918 ರಿಂದ 1953 ರ ವರೆಗೆ ಸರಿಸುಮಾರು 35 ವರ್ಷಗಳ ಸುದೀರ್ಘ ಸೇವೆಯ ನಂತರ ಜನರಲ್ ಕಾರ್ಯಪ್ಪನವರು ಸೇವೆಯಿಂದ ನಿವೃತ್ತರಾದರು. ನಿವೃತ್ತ ಬದುಕಿಗೆ ಡೆಲ್ಲಿ, ಮುಂಬಯಿ, ಲಂಡನ್, ಪ್ಯಾರಿಸ್... ಇಂತಹ ಯಾವುದೇ ರಂಗಿನ ನಗರದ ಆಕರ್ಷಣೆಗೆ ಒಳಗಾಗದೆ, ನೇರವಾಗಿ ಮಡಿಕೇರಿಯ “ರೋಶನಾರ” ಮನೆಗೆ ಬಂದು ನೆಲೆಸಿದರು.
ಫೀಲ್ಡ್ ಮಾರ್ಷಲ್ ಗೌರವ ಪದವಿ
ಭಾರತ ಸರಕಾರ 1986 ರಲ್ಲಿ ಕೊಡಂದೇರ ಎಂ. ಕಾರ್ಯಪ್ಪÀ ಅವರಿಗೆ 87 ನೇ ವರ್ಷ ಪ್ರಾಯದಲ್ಲಿ “ಫೀಲ್ಡ್ ಮಾರ್ಷಲ್” ಗೌರವ ಪದವಿಯನ್ನು ನೀಡಿತು. ಇದು ಭೂಸೇನೆಯಲ್ಲಿ ಪರಮೋಚ್ಛವಾದ, ಬಹಳ ಅಪರೂಪದ, ವ್ಯಕ್ತಿ ಬದುಕಿರುವವರೆಗೂ ಇರುವಂತಹ ಅದ್ವಿತೀಯ ಪದವಿ. ಈ ಪದವಿಯನ್ನು ಸುಮಾರು ವರ್ಷ ಅನುಭವಿಸಿದ ಕೆ. ಎಂ. ಕಾರ್ಯಪ್ಪನವರು... ಅನಾರೋಗ್ಯದಿಂದ ತನ್ನ 94ನೇ ವರ್ಷ ಪ್ರಾಯದಲ್ಲಿ 15.5.1993 ರಂದು ವಿಧಿವಶರಾದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ನೆನಪು... ಗೌರವದ ಕುರುಹಾಗಿ ಮಡಿಕೇರಿ ಸೇರಿದಂತೆ ರಾಷ್ಟ್ರದ ಹಲವು ನಗರ, ಪಟ್ಟಣ, ಊರುಗಳಲ್ಲಿ ಅವರ ಹೆಸರಿನಲ್ಲಿ ರಸ್ತೆ, ವೃತ್ತ, ಉಪನಗರ, ಕಟ್ಟಡ, ಗೋಪುರ, ಕಾಲೇಜು, ಕ್ಯಾಂಪಸ್, ಸ್ಟೇಡಿಯಂ, ಕವಾಯತು ಮೈದಾನ... ಇತ್ಯಾದಿಗಳು... ಅಗಲಿದ ನಾಯಕನ ಸ್ಮರಣೆಗೆ ತಲೆಎತ್ತಿ ನಿಂತಿವೆ. 30-12-2016 ರಲ್ಲಿ ಭಾರತೀಯ ಸೇನಾಪರಂಪರೆಯಲ್ಲೊಂದು ಸ್ಮರಣಾರ್ಥ ದಿನ. ಸೇನೆಗೆ ಸೇರಿದ ದೆಹಲಿಯ ಐತಿಹಾಸಿಕ ಕವಾಯತು ಮೈದಾನಕ್ಕೆ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಗ್ರೌಂಡ್” ಎಂದು ಅಧಿಕೃತ ನಾಮಕರಣ ಮಾಡಿದ ಸುದಿನ.
ವಿಶ್ವದರ್ಜೆಯ ವೀರ ಸೇನಾ ನಾಯಕ..., ಸದಾ ಶುಭ್ರವಾದ ಟಿಪ್ಟಾಪ್ ಉಡುಪಿನಲ್ಲಿ ಕಂಗೊಳಿಸುವುದು, ಜನ್ಮ ನೀಡಿದ ಮಾತಾಪಿತರನ್ನು ಗೌರವಿಸುವುದು, ಬೆಳಗ್ಗೆ ಎದ್ದ ಕೂಡಲೇ ಸೈನಿಕನ ಫೆÇೀಟೋಕ್ಕೆ ಸಲ್ಯೂಟ್ ಹಾಕಿ ವಂದಿಸುವುದು, ನುಡಿದಂತೆ ನಡೆಯುವುದು, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುವುದು, ಕೊನೆಯುಸಿರಿನವರೆಗೂ ಅಪ್ಪಟ ದೇಶಭಕ್ತನಾಗಿ ಬದುಕಿದುದು, ಸತ್ಯ, ಪ್ರಾಮಾಣಿಕತೆಯ ಸಾಕಾರಮೂರ್ತಿಯಾಗಿ ಜೀವನ ಸಾಗಿಸುವುದು... ಇಂತಹ ಹಲವು ಅಪರೂಪದ ಗುಣ ವಿಶೇಷತೆಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ವಿಶ್ವದರ್ಜೆಯ ಸೇನಾ ನಾಯಕ, ಸಮಾಜ ಸುಧಾರಕನ ಸ್ಥಾನದಲ್ಲಿ ನಿಲ್ಲಿಸಿದೆ. - ಆಧಾರ