ಮಡಿಕೇರಿ, ಜ. 27: ಇಂದು ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಎಡವಟ್ಟಿನಿಂದಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರುಗಳು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರತಿರೋಧ ಎದುರಿಸುವಂತಾಯಿತು.ಬೋಧಕ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆಯುತ್ತಿದ್ದ ಜಿಲ್ಲಾಸ್ಪತ್ರೆಯ ಆವರಣಕ್ಕೆ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರೊಂದಿಗೆ ಬಂದಿದ್ದ ವೀಣಾ ಅಚ್ಚಯ್ಯ ಅವರಿಗೆ ಅಚ್ಚರಿ ಕಾದಿತ್ತು. ಆಮಂತ್ರಣ ಪತ್ರಿಕೆಯಲ್ಲಿ ವೀಣಾ ಅವರ (ಮೊದಲ ಪುಟದಿಂದ) ಹೆಸರಿದ್ದರೂ ಆಸ್ಪತ್ರೆ ಆವರಣದಲ್ಲಿ ಹಾಕಿದ್ದ ಫ್ಲೆಕ್ಸ್‍ನಲ್ಲಿ ವೀಣಾ ಅಚ್ಚಯ್ಯ ಅವರೊಬ್ಬರನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಜನಪ್ರತಿನಿಧಿಗಳ ಭಾವಚಿತ್ರವಿತ್ತು. ಇದನ್ನು ಪ್ರಶ್ನಿಸಿದ ವೀಣಾ ಅವರು, ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು. ‘ಇದೇನು ಬಿಜೆಪಿಯ ಕಾರ್ಯಕ್ರಮ ಅಲ್ಲ. ಸರಕಾರದ ಕಾರ್ಯಕ್ರಮ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆ ಬಳಿ ವೀಣಾ ಅಚ್ಚಯ್ಯ ಅವರು ಹರಿ ಹಾಯುತ್ತಿದ್ದ ವಿಚಾರ ತಿಳಿದ ಸುದರ್ಶನ ವೃತ್ತದಲ್ಲಿ ಮುಖ್ಯಮಂತ್ರಿಗಳೊಂದಿಗೆ ಇದ್ದ ಶಾಸಕ ರಂಜನ್ ಅವರು ದೂರವಾಣಿ ಮೂಲಕ ವೀಣಾ ಅವರನ್ನು ಸಂಪರ್ಕಿಸಿ ಸಮಾಧಾನ ಹೇಳಿದರು. ಸಚಿವ ಸೋಮಣ್ಣ ಅವರು ಕೂಡ ಸಮಾಧಾನಪಡಿಸಲು ಪ್ರಯತ್ನಿಸಿದರು. ‘ಜಿಲ್ಲಾಡಳಿತ ಈ ರೀತಿ ಕಡೆಗಣನೆ ಮಾಡಬಾರದು, ನಾವು ಕಾಂಗ್ರೆಸ್ ಪಕ್ಷದವರಿರಬಹುದು ಆದರೆ ನಾನೂ ಕೂಡ ಓರ್ವ ಚುನಾಯಿತ ಪ್ರತಿನಿಧಿ. ನಮಗೂ ಗೌರವ ಇಲ್ಲವೇ, ಕಾಂಗ್ರೆಸ್ಸಿನವರೇನು ಪಾಕಿಸ್ತಾನದವರಾ?’ ಎಂದು ಖಾರವಾಗಿಯೇ ಪ್ರಶ್ನಿಸಿದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಎಸ್‍ಪಿ ಡಾ. ಸುಮನ್ ಅವರು, ‘ಮೇಡಂ ನೆಗ್ಲೆಟ್ ಆಗಿದೆ; ಈಗ ಸರಿ ಮಾಡಿದ್ದಾರೆ. ಕ್ರಿಸ್ಟಲ್‍ಕೋರ್ಟ್ ಸಭಾಂಗಣದಲ್ಲಿ ನಿಮ್ಮ ಫೋಟೋ ಹಾಕಿದ್ದಾರೆ’ ಎಂದು ಸಮಾಧಾನಪಡಿಸಲೆತ್ನಿಸಿದರು. ಈ ಸಂದರ್ಭದಲ್ಲಿ ಕೆರಳಿದ ಚಂದ್ರಕಲಾ ‘ನಿಮಗೆ ಅಷ್ಟೂ ಗೊತ್ತಿಲ್ವ, ಫ್ರೋಟೋಕಾಲ್ ಗೊತ್ತಿಲ್ವ ನಿಮಗೆ, ಬಿಜೆಪಿ ಗ್ರೂಪ್ ಮಾತ್ರ ಇರಬೇಕಾ, ಇದೇ ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿದ್ದಿದ್ದರೆ ಬಿಜೆಪಿಯವರು ಫ್ಲೆಕ್ಸ್‍ಗೆ ಕಲ್ಲು, ಸೆಗಣಿ ಎಸೆದಿರೋರು; ನಾವು ಹಾಗೆ ಮಾಡಲ್ಲ’ ಎಂದು ಹೇಳಿದರು. ನಂತರ ಮುಖ್ಯಮಂತ್ರಿಗಳು ಬಂದಾಗ ವೀಣಾ ಅವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ‘ಗೊತ್ತಾಯ್ತಮ್ಮಾ..., ಎಲ್ಲಾ ಮಾತಾಡಿದ್ರಲ್ಲಾ, ಎಲ್ಲ ಸರಿಯಾಯ್ತು ಬಿಡಮ್ಮ’ ಎಂದು ಸಮಾಧಾನಪಡಿಸಿದರು.

‘ಕಟ್ ಅಂಡ್ ಪೇಸ್ಟ್’

ಶಂಕುಸ್ಥಾಪನೆ ನೆರವೇರಿಸಿ ಕ್ರಿಸ್ಟಲ್ ಕೋರ್ಟ್ ಸಭಾಂಗಣಕ್ಕೆ ತೆರಳಿದ ವೀಣಾ ಅವರಿಗೆ ಹಾಗೂ ಸಭಿಕರಿಗೂ ಮತ್ತೊಂದು ಅಚ್ಚರಿ ಕಾದಿತ್ತು. ವೇದಿಕೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಫ್ಲೆಕ್ಸ್‍ನಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಬಿಜೆಪಿ ಜನಪ್ರತಿನಿಧಿಗಳ ಭಾವಚಿತ್ರಗಳಿದ್ದವು. ಇತ್ತ ಆಸ್ಪತ್ರೆ ಬಳಿ ವೀಣಾ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಅತ್ತ ಬುದ್ಧಿವಂತಿಕೆ ಪ್ರದರ್ಶಿಸಿದ ಜಿಲ್ಲಾಡಳಿತದ ಅಧಿಕಾರಿಗಳ ಶಾಸಕ ಆಯನೂರು ಮಂಜುನಾಥ್ ಅವರ ಭಾವಚಿತ್ರ ಇದ್ದ ಜಾಗಕ್ಕೆ ವೀಣಾ ಅಚ್ಚಯ್ಯ ಅವರ ಭಾವಚಿತ್ರವನ್ನು ಅಂಟಿಸಿದ್ದರು. ಅದೊಂದು ರೀತಿಯಲ್ಲಿ ‘ಕಟ್ ಅಂಡ್ ಪೇಸ್ಟ್’ ಮಾಡಿದ ಹಾಗೆ ಕಾಣುತ್ತಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಯವರನ್ನು ಹಾಗೂ ಸಚಿವರನ್ನು ಸನ್ಮಾನಿಸಲಾಯಿತು. ಶಾಸಕರುಗಳಿಗೂ ಶಾಲು ಹೊದಿಸಿ ಗೌರವಿಸಲಾಯಿತು. ಆದರೆ, ಸಿಡಿಮಿಡಿಯಿಂದಿದ್ದ ವೀಣಾ ಅವರು ಸನ್ಮಾನವನ್ನು ನಯವಾಗಿಯೇ ತಿರಸ್ಕರಿಸಿದರು. ‘ಪ್ರತಿಪಕ್ಷದ ಒಬ್ಬರೇ ಜನಪ್ರತಿನಿಧಿಯಾಗಿ ವೇದಿಕೆಯಲ್ಲಿದ್ದ ವೀಣಾ ಅವರಿಗೆ ಕನಿಷ್ಟ ಎರಡು ಮಾತುಗಳನ್ನಾಡಲಾದರೂ ಅವಕಾಶ ನೀಡಬಹುದಿತ್ತು’ ಎಂದು ಸಭೆಯಲ್ಲಿದ್ದವರು ಆಡಿಕೊಳ್ಳುತ್ತಿದ್ದುದು ಕೇಳಿಸಿತು...!

-ಸಂತೋಷ್