ಮಡಿಕೇರಿ, ಜ. 27: ಮರ್ಕರ ಯೂತ್ ಕ್ರಿಕೆಟ್ ಕ್ಲಬ್(ಎಂವೈಸಿಸಿ) ವತಿಯಿಂದ ಸೀಮಿತ ತಂಡಗಳ ನಡುವೆ ಫೆ.14ರಿಂದ 23ರವರೆಗೆ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಎಂವೈಸಿಸಿಯ ಉಪಾಧ್ಯಕ್ಷ ಪೊನ್ನಚ್ಚನ ಮಧು ಪಂದ್ಯಾವಳಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೊಡಗು ವ್ಯಾಪ್ತಿಯ 16 ತಂಡಗಳಿಗೆ ಸೀಮಿತವಾಗಿ ನಾಕ್ ಔಟ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಮೊದಲು ನೋಂದಾಯಿಸಲ್ಪಟ್ಟ ತಂಡಗಳಿಗೆ ಅವಕಾಶವನ್ನು ನೀಡಲಾಗುತ್ತಿದ್ದು, ಪಂದ್ಯಗಳು 20 ಓವರ್‍ಗಳಿಗೆ ಸೀಮಿತವಾಗಿ ನಡೆಯಲಿದೆ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಜಿಲ್ಲೆಯ ಮೂಲದ ಆಟಗಾರರಿಗೆ ಹಾಗೂ ಪ್ರಸ್ತುತ ಜಿಲ್ಲೆಯಲ್ಲೆ ನೆಲೆಸಿರುವ ಆಟಗಾರರಿಗೆ ಮಾತ್ರ ಆಡಲು ಅವಕಾಶವನ್ನು ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ಹಾಜರು ಪಡಿಸಬೇಕೆಂದು ಹೇಳಿದರು.
ಆಸಕ್ತ ತಂಡಗಳು ಫೆ.5 ರೊಳಗಾಗಿ ಹೆಸರನ್ನು ನಿಗದಿತ ಮೈದಾನ ಶುಲ್ಕದೊಂದಿಗೆ ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಕೆ.ಎಂ. ಉತ್ತಪ್ಪ ಮೊ.9480318213, ಪ್ರಿನ್ಸ್ ಮೊ.8660723170, ರಾಜು ಮೊ.8861684348ನ್ನು ಸಂಪರ್ಕಿಸ ಬಹುದು. ಪಂದ್ಯಾವಳಿ ವಿಜೇತ ಮತ್ತು ರನ್ನರ್ಸ್ ಅಪ್ ತಂಡಗಳಿಗೆ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ಸುದ್ದಿಗೋಷ್ಠಿಯಲ್ಲಿ ಎಂವೈಸಿಸಿ ಅಧ್ಯಕ್ಷ ಕೆ.ಎಂ. ಉತ್ತಪ್ಪ, ಕಾರ್ಯದರ್ಶಿ ಎಂ.ಎಂ. ಸುನಿಲ್, ಸದಸ್ಯರುಗಳಾದ ಪ್ರಿನ್ಸ್, ರಾಜು ಉಪಸ್ಥಿತರಿದ್ದರು.