ಮಡಿಕೇರಿ, ಜ. 27: ಪಶು ಸಂಗೋಪನೆ ರೈತರಿಗೆ ಪ್ರಮುಖ ಉಪ ಕಸುಬಾಗಿದ್ದು, ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆ ದಿಸೆಯಲ್ಲಿ ರೈತರಿಗೆ ಹೈನುಗಾರಿಕೆ ಮತ್ತು ಪಶುಪಾಲನೆ ಕೈಗೊಳ್ಳಲು ಪ್ರೋತ್ಸಾಹ ನೀಡಲು ಸರ್ಕಾರವು ಹಲವಾರು ಯೋಜನೆಗಳನ್ನು ತಂದಿದೆ.

ಜಾನುವಾರು ಸಂಪತ್ತಿಗೆ ಅರೋಗ್ಯ ರಕ್ಷಣೆ ನೀಡುವ ಹೊಣೆಗಾರಿಕೆಯ ಜೊತೆಗೆ ಜಾನುವಾರು ಅಭಿವೃದ್ಧಿ ಚಟುವಟಿಕೆ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ, ಮಾದರಿ ಸಮೀಕ್ಷೆ ಮತ್ತು ಗಣತಿ ಮುಂತಾದ ಕಾರ್ಯಾಕ್ರಮಗಳನ್ನು ಇಲಾಖೆಯು ಕಾರ್ಯನಿರ್ವಹಿಸುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ತಮ್ಮಯ್ಯ ತಿಳಿಸಿದ್ದಾರೆ.

ಜಿಲ್ಲಾ ಪಾಲಿಕ್ಲಿನಿಕ್-1, ಜಿಲ್ಲಾ ಮಟ್ಟದ ಪಶುವೈದ್ಯ ಆಸ್ಪತ್ರೆ-1, ತಾಲೂಕು ಮಟ್ಟದ ಪಶುವೈದ್ಯ ಆಸ್ಪತ್ರೆ-2, ಪಶುವೈದ್ಯ ಆಸ್ಪತ್ರೆ-15, ಪಶು ಚಿಕಿತ್ಸಾಲಯ-22, ಪ್ರಾಥಮಿಕ ಪಶು ಚಿಕಿತ್ಸಾಲಯ-32, ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ-1, ಕೋಳಿ ವಿಸ್ತರಣಾ ಕೇಂದ್ರ-1, ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 55,926 ಸ್ಥಳೀಯ, 32,833 ಮಿಶ್ರ ತಳಿಗಳು, 1,697 ಎಮ್ಮೆಗಳು ಸೇರಿ ಒಟ್ಟು 1,05,746 ಜಾನುವಾರುಗಳು ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಜಾನುವಾರುಗಳಿಗೆ 16 ನೇ ಸುತ್ತಿನ ಕಾಲು ಬಾಯಿ ಜ್ವರ ರೋಗದ ನಿರೋದಕ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಅಂದಾಜು 22 ವಾರಗಳಿಗೆ 80,576 ಮೇಟ್ರಿಕ್‍ಟನ್ ಮೇವಿನ ಲಭ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

2019-20ನೇ ಸಾಲಿನಲ್ಲಿ ಕುಕ್ಕುಟ ಅಭಿವೃದ್ಧಿ ಕಾರ್ಯಕ್ರಮದಡಿ ಜಿಲ್ಲೆಗೆ ಆರ್ಥಿಕ ಗುರಿ 6 ಲಕ್ಷ ಹಾಗೂ ಭೌತಿಕ ಗುರಿ 6 ಸಾವಿರ ಕೋಳಿ ಮರಿಗಳ ಸಾಕಾಣಿಕೆ ಮತ್ತು ವಿತರಣೆ ಗುರಿ ಇದ್ದು, ಗಿರಿರಾಜ ಕೋಳಿ ಮರಿಗಳನ್ನು ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಕೂಡಿಗೆ ಹಾಗೂ ಕೋಳಿ ವಿಸ್ತರಣಾ ಕೇಂದ್ರ ಪೊನ್ನಂಪೇಟೆಯಲ್ಲಿ ಆರು ವಾರಗಳ ಕಾಲ ಪಾಲನೆ ಮಾಡಿ ಪರಿಶಿಷ್ಟ ಜಾತಿ/ ಪಂಗಡ ದವರಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 90 ರಷ್ಟು ಸಹಾಯ ಧನದಲ್ಲಿ ವಿತರಿಸುವ ಕ್ರಮ ವಹಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2019-20ನೇ ಸಾಲಿನಲ್ಲಿ ಜಲಕೃಷಿ ಹಸಿರು ಮೇವು ಉತ್ಪಾದನಾ ಘಟಕ ಕಾರ್ಯಕ್ರಮದಡಿ ಜಿಲ್ಲೆಗೆ ಆರ್ಥಿಕ ಗುರಿ ರೂ. 7.36 ಲಕ್ಷ ಹಾಗೂ 14 ಭೌತಿಕ ಗುರಿ ನಿಗದಿಯಾಗಿದ್ದು ಘಟಕಗಳ ಅನುಷ್ಠಾನಕ್ಕಾಗಿ ಘಟಕ ವೆಚ್ಚ ರೂ.57,400 ಆಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ ರೂ. 56,400 ಸಹಾಯ ಧನ ಹಾಗೂ ಸಾಮಾನ್ಯ ವರ್ಗದವರಿಗೆ ರೂ. 51,660 ಸಹಾಯ ಧನ ಆಗಿದ್ದು ತಾಲೂಕು ಕಚೇರಿ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

2019-20ನೇ ಸಾಲಿನಲ್ಲಿ ಮಹಿಳೆಯರಿಗಾಗಿ ಅಮೃತ ಯೋಜನೆಯಡಿ ಜಿಲ್ಲೆಗೆ ಆರ್ಥಿಕ ಗುರಿ 9.64ಲಕ್ಷ ಹಾಗೂ 49 ಭೌತಿಕ ಗುರಿ ನಿಗದಿಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಭೂ ರಹಿತ ಕೃಷಿ ಕಾರ್ಮಿಕರ ಮಹಿಳೆಯರು (ಅಲ್ಪಸಂಖ್ಯಾತರು ಶೇ. 15, ವಿಶೇಷಚೇತನರು ಶೇ. 5) ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಘಟಕಗಳ ಅನುಷ್ಠಾನಕ್ಕಾಗಿ ವಾಣಿಜ್ಯ ಬ್ಯಾಂಕುಗಳಿಂದ ಸಾಲಪಡೆದು ತಾಲೂಕು ಕಚೇರಿ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

2019-20ನೇ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಹಸು, ಹಂದಿ, ಆಡು-ಕುರಿ ಸಾಕಾಣಿಕಾ ಯೋಜನಾ ಕಾರ್ಯಕ್ರಮದಡಿ ಅನುಷ್ಠಾನಕ್ಕಾಗಿ ಆರ್ಥಿಕ ಗುರಿ 7.83 ಲಕ್ಷ ಹಾಗೂ 14 ಭೌತಿಕ ಗುರಿ ನಿಗದಿಯಾಗಿದ್ದು ಘಟಕಗಳ ಅನುಷ್ಠಾನಕ್ಕಾಗಿ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಕಾರ್ಯಕ್ರಮ ಅನುಷ್ಠ್ಟಾನಗೊಳಿಸಲಾಗುತ್ತಿದೆ. ಹುಲ್ಲು ಕತ್ತರಿಸುವ ಯಂತ್ರ ವಿತರಿಸಲು ಶೇ. 50 ರ ಸಹಾಯಧನದಲ್ಲಿ 13 ಫಲಾನುಭವಿಗಳಿಗೆ ರೂ. 1.28 ಲಕ್ಷ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ಉಚಿತ ಜಾನುವಾರು ವಿಮಾ ಯೋಜನೆಯಡಿ ವಿಶೇಷ ಘಟಕ ಯೋಜನೆಯಲ್ಲಿ ಭೌತಿಕ 393 ಜಾನುವಾರುಗಳಿಗೆ ಆರ್ಥಿಕ ರೂ. 7.347 ಲಕ್ಷ ಹಾಗೂ ಗಿರಿಜನ ಉಪ ಯೋಜನೆಯಡಿಯಲ್ಲಿ ಭೌತಿಕ 316 ಜಾನುವಾರುಗಳಿಗೆ ಆರ್ಥಿಕ ರೂ. 5.494 ಲಕ್ಷ ಮತ್ತು ಫಲಾನುಭವಿಯ ವಂತಿಕೆ ಯೋಜನೆಯಡಿ 11 ಜಾನುವಾರುಗಳಿಗೆ ರೂ. 0.04 ಲಕ್ಷ ಪ್ರಗತಿ ಸಾಧಿಸಲಾಗಿದೆ. ಹೀಗೆ ಜಿಲ್ಲೆಯಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯು ವಿವಿಧ ಕಾರ್ಯಕ್ರಮವನ್ನು ಅರ್ಹರಿಗೆ ತಲುಪಿಸುತ್ತಿದೆ ಎಂದು ತಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ.