ಮಡಿಕೇರಿ, ಜ. 27: ಕೊಡಗಿನಲ್ಲಿ ನಿರಂತರವಾಗಿ ವನ್ಯಪ್ರಾಣಿಗಳ ಧಾಳಿ ನಡೆಯುತ್ತಿದೆ. ಆನೆ, ಚಿರತೆ, ಹುಲಿ ಧಾಳಿಯಿಂದ ಕೊಡಗಿನ ರೈತರು ತತ್ತರಿಸಿ ಹೋಗಿದ್ದಾರೆ ಎಂದು ‘ಶಕ್ತಿ’ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದಿತು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ತಾನು ಈ ಸಮಸ್ಯೆ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳ್ಳುತ್ತೇನೆ ಎಂದು ಭರವಸೆಯಿತ್ತರು.ಇಂದು ಮಧ್ಯಾಹ್ನ ಮುಖ್ಯಮಂತ್ರಿಯವರು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಿದ್ಧಗೊಳಿಸಿದ್ದ ಹೆಲಿಪ್ಯಾಡ್‍ನಲ್ಲಿ ಬಂದಿಳಿದರು. ಆ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತ ನಾಡುತ್ತಿದ್ದರು. ಕೆಲವೊಂದು ರಾಜಕೀಯ ಬೆಳವಣಿಗೆ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಮುಖ್ಯಮಂತ್ರಿ ಅದಕ್ಕೆ ಉತ್ತರಿಸದೆ ಬೇರೆ ಮಾತನ್ನು ಸ್ಥಗಿತಗೊಳಿಸಿ ಕಾರು ಹತ್ತಿದರು. ‘ಶಕ್ತಿ’ ಪ್ರತಿನಿಧಿ ಕಾರಿನತ್ತ ತೆರಳಿ ವನ್ಯಪ್ರಾಣಿಗಳ ಹಾವಳಿ ಕುರಿತು ಗಮನಕ್ಕೆ ತಂದಾಗ ಅವರು ತಕ್ಷಣ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಇದಕ್ಕೆ ಮೊದಲು ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ ತಿಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ವರ್ಷಗಳಲ್ಲಿ ಮಳೆ, ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರ ಬಗ್ಗೆ ಅರಿವಿದೆ. ಆದಷ್ಟು ಶೀಘ್ರ ಅವರಿಗೆಲ್ಲ ವಸತಿ
(ಮೊದಲ ಪುಟದಿಂದ) ಕಲ್ಪಿಸುವದಾಗಿ ತಿಳಿಸಿದರು. ರಾಜ್ಯದ ಚಿಕ್ಕಮಗಳೂರು, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಈಗಾಗಲೆ ವೈದ್ಯಕಿಯ ಕಾಲೇಜುಗಳ ಸ್ಥಾಪನೆಗೆ ಮಂಜೂರಾತಿಯಾಗಿದೆ. ಉಳಿದಂತೆ ರಾಜ್ಯದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಅನುಕೂಲ ವಿರುವ ಎಲ್ಲ ಜಿಲ್ಲೆಗಳಿಗೂ ವೈದ್ಯಕೀಯ ಕಾಲೇಜನ್ನು ಮುಂದಿನ 2-3 ವರ್ಷಗಳಲ್ಲಿ ಕಲ್ಪಿಸಲಾಗುವದು ಎಂದು ಮುಖ್ಯಮಂತ್ರಿ ಆಶ್ವಾಸನೆಯಿತ್ತರು.
‘ಮುಂದಿನ ಮಾರ್ಚ್ 5 ರಂದು ರಾಜ್ಯದ ಬಜೆಟ್ ಮಂಡಿಸುತ್ತಿದ್ದೇನೆ. ಇದರಲ್ಲಿ ಬಹುಪಾಲು ಕೃಷಿ ವಿಭಾಗಕ್ಕೆ ಅದ್ಯತೆ ನೀಡಲಿದ್ದು, ರಾಜ್ಯದ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸುವೆ’ ಎಂದು ಮುಖ್ಯಮಂತ್ರಿ ಘೋಷಿಸಿದರು.
‘ನಾನು ಇತ್ತೀಚೆಗೆ ದಾವೋಸ್‍ಗೆ ಭೇಟಿಯಿತ್ತಿದ್ದೆ. ಆ ಸಂದರ್ಭ ಸುಮಾರು 40 ಮಂದಿ ಪ್ರಮುಖ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿದೆ. ಕರ್ನಾಟಕದಲ್ಲಿ ಈ ಉದ್ಯಮಿಗಳು ಕೈಗಾರಿಕೆಗಳನ್ನು ಹಾಗೂ ಕೃಷಿಗೆ ಪೂರಕ ಉದ್ಯಮಗಳನ್ನೂ ಆರಂಭಿಸಲು ಬಂಡವಾಳ ಹೂಡುವಂತೆ ಕೇಳಿಕೊಂಡಿರುವೆ’ ಎಂದು ಯಡಿಯೂರಪ್ಪ ತಿಳಿಸಿದರು. ಕೇವಲ ಬೆಂಗಳೂರು ಮಾತ್ರವಲ್ಲ; ರಾಜ್ಯದ ವಿವಿಧ ಭಾಗಗಳಲ್ಲಿಯೂ ಉದ್ಯಮ ಆರಂಭಿಸುವಂತೆ ಸಲಹೆ ನೀಡಿರುವದಾಗಿ ನುಡಿದರು.
ಮುಖ್ಯಮಂತ್ರಿಯವರನ್ನು ಹೆಲಿಪ್ಯಾಡ್‍ನಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತಿತರರು ಹೂ ಗುಚ್ಛ ನೀಡುವದರೊಂದಿಗೆ ಬರಮಾಡಿಕೊಂಡರು. ಬಳಿಕ ಕೊಡಗು ಪೊಲೀಸರಿಂದ ಗೌರವ ವಂದನೆ ಯನ್ನು ಸ್ವೀಕರಿಸಿದ ಸಂದರ್ಭ ಎಸ್.ಪಿ. ಸುಮನ್ ಡಿ ಪಣ್ಣೇಕರ್ ಇದ್ದರು.
ಮುಖ್ಯಮಂತ್ರಿಯವರನ್ನು ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸ್ನೇಹ, ಜಿ.ಪಂ. ಸಿಇಒ ಲಕ್ಷ್ಮಿಪ್ರಿಯ, ನಗರಸಭಾ ಆಯುಕ್ತ ರಮೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹಾಗೂ ಅನೇಕ ಬಿಜೆಪಿ ಪ್ರಮುಖರಿದ್ದರು.