*ಸಿದ್ದಾಪುರ, ಜ.27 : ವಿಶೇಷಚೇತನರಿಗೆ ವಸತಿ ಯೋಜನೆ ಯ ಮೂಲಕ ಮನೆಗಳನ್ನು ನೀಡಲಾಗುವುದು ಎಂದು ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಲವು ಸಭೆಗಳಲ್ಲಿ ಮಾಹಿತಿ ನೀಡಿದ ಹಿನ್ನೆಲೆ ಅರ್ಜಿಗಳನ್ನು ಸಲ್ಲಿಸಿದರೂ ಇಲ್ಲಿಯವರೆಗೆ ಮನೆಗಳನ್ನು ನೀಡಲು ಕ್ರಮ ಕೈಗೊಂಡಿಲ್ಲವೆಂದು ವಿಶೇಷ ಚೇತನರ ಸಂಘದ ಅಧ್ಯಕ್ಷ ಬಾಲಕೃಷ್ಣ ಆರೋಪಿಸಿದ್ದಾರೆ. ಸಂಕಷ್ಟದ ಜೀವನ ಸಾಗಿಸುತ್ತಿರುವ ವಿಕಲಚೇತನರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಕುರಿತು ಗ್ರಾ.ಪಂ ಪಿಡಿಒ ಅವರೇ ಮಾಹಿತಿ ನೀಡಿದ್ದರು. ಇದನ್ನು ಆದರಿಸಿ ಅರ್ಹ ವಿಶೇಷಚೇತನರು ಅಗತ್ಯ ದಾಖಲೆಗಳ ಸಹಿತ ಮನೆಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಅರ್ಜಿಗಳು ವಿಲೇವಾರಿಯಾಗಿಲ್ಲ ವಸತಿ ಬಗ್ಗೆ ಪ್ರಸ್ತಾಪಿಸುತ್ತಲೇ ಇಲ್ಲ.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದ ಬಗ್ಗೆ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ಈಗಾಗಲೇ ದೂರು ನೀಡಲಾಗಿದೆ. ತಕ್ಷಣ ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.