(ಅಂಚೆಮನೆ ಸುಧಿ)

*ಸಿದ್ದಾಪುರ ಜ. 27 : ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಬಸವನಹಳ್ಳಿಯ ನಿವಾಸಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ನೀಡ ಲಾಗುವ ಉಚಿತ ವಿದ್ಯುತ್ ಸೌಲಭ್ಯ ದಿಂದ ಗ್ರಾಮಸ್ಥರು ವಂಚಿತರಾಗಿದ್ದು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಕತ್ತಲೆಯಲ್ಲೇ ಕಾಲ ಕಳೆಯಬೇಕಾದ ದುಸ್ಥಿತಿ ಇದೆ.

ಗಿರಿಜನರ ಸಂಖ್ಯೆಯೇ ಹೆಚ್ಚಾಗಿರುವ ಬಸವನಹಳ್ಳಿ ಗ್ರಾಮ ದಲ್ಲಿ ಕೊಡವ, ಗೌಡ ಹಾಗೂ ಮುಸ್ಲಿಮರು ಕೂಡ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣರಿಗೆ ಉಚಿತ ವಿದ್ಯುತ್ ಕಲ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸೌಭಾಗ್ಯ ಯೋಜನೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಅನುಷ್ಠಾನಗೊಂಡು ಗ್ರಾಮಸ್ಥರು ಬೆಳಕಿನ ಭಾಗ್ಯ ಕಂಡಿದ್ದಾರೆ. ಬಸವನ ಹಳ್ಳಿ ಗ್ರಾಮದ ಅಕ್ಕಪಕ್ಕದ ಬಡಾವಣೆ ಗಳಲ್ಲೂ ಈ ಯೋಜನೆ ಯಶಸ್ವಿ ಯಾಗಿ ಅನುಷ್ಠಾನಗೊಂಡಿದೆ.

ಆದರೆ ಬಸವನಹಳ್ಳಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿದ್ದರೂ ಸೌಭಾಗ್ಯ ಯೋಜನೆಯ ಮೂಲಕ ವಿದ್ಯುತ್ ಕಂಬ ಅಳವಡಿಸಲು ಮತ್ತು ತಂತಿಗಳನ್ನು ಎಳೆಯಲು ಸಾಧ್ಯವಾಗು ತ್ತಿಲ್ಲ. ಅರಣ್ಯ ಇಲಾಖೆ ಅಡ್ಡಿ ಪಡಿಸಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ಗ್ರಾಮದ ಹಿರಿಯ ರಾದ ಡಿ.ಪಿ. ಪೂಣಚ್ಚ ಆರೋಪಿಸಿ ದ್ದಾರೆ. ಅನೇಕ ಅರ್ಜಿಗಳನ್ನು ಸಲ್ಲಿಸಿ ಮನವಿ ಮಾಡಿಕೊಂಡಿದ್ದರೂ ಇಲ್ಲಿಯವರೆಗೆ ವಿದ್ಯುತ್ ಭಾಗ್ಯ ದೊರೆತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಕದಲ್ಲೇ ಇರುವ ಗಿರಿಜನರೇ ಹೆಚ್ಚಾಗಿ ವಾಸಿಸುತ್ತಿರುವ ದಿಡ್ಡಳ್ಳಿ, ಚಿಕ್ಕರೇಷ್ಮೆ ಹಡ್ಲು, ದೊಡ್ಡರೇಷ್ಮೆ ಹಡ್ಲು, ಚೊಟ್ಟೆಪಾರೆ ಗ್ರಾಮಗಳಲ್ಲಿ ಸೌಭಾಗ್ಯ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಸಮೀಪದ ಬಸವನಹಳ್ಳಿ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ದೂರಿಕೊಂಡಿ ದ್ದಾರೆ. ಸ್ಥಿತಿವಂತರು ಜನರೇಟರ್ ಮತ್ತು ಸೋಲಾರ್ ವ್ಯವಸ್ಥೆಯ ಮೂಲಕ ಬೆಳಕು ಕಾಣುತ್ತಿದ್ದಾರೆ, ಆದರೆ ಆರ್ಥಿಕವಾಗಿ ಹಿಂದುಳಿ ದವರು ಇಂದಿಗೂ ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೂ ಅಧಿಕಾರಿಗಳಿಗೆ ಕರುಣೆ ಬರುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸೌಭಾಗ್ಯ ಯೋಜನೆಗೆ ಎದುರಾಗಿರುವ ಅಡ್ಡಿಗಳನ್ನು ದೂರ ಮಾಡಬೇಕು ಮತ್ತು ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.