ನಾನು ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಮಾಮೂಲಿ ಯಂತೆ ತಿಂಗಳಿಗೊಮ್ಮೆ ನಮ್ಮ ವಿಭಾಗದ ಸಿಬ್ಬಂದಿ ಸಭೆ ನಡೆಯುತ್ತಿತ್ತು. ಯಾವ-ಯಾವ ಕೆಲಸ ಯಾವ ಹಂತದಲ್ಲಿದೆ ಮತ್ತು ಪ್ರಗತಿ ಏನಿದೆ ಹಾಗೂ ಕೆಲಸದ ನಿರ್ವಹಣೆ ಹೇಗೆ ಸಾಗಿದೆ ಎಂಬುದರ ವಿವರದ ಬಗ್ಗೆ ಆ ಸಭೆಯಲ್ಲಿ ಚರ್ಚೆ ಆಗುತಿತ್ತು. ಸಿಬ್ಬಂದಿ ಸಭೆಗಳು ಹಿಂದಿಯಲ್ಲಿ ನಡೆದು, ಅದರ ಸಂಕ್ಷಿಪ್ತ ವಿವರವನ್ನು ಹಿಂದಿಯಲ್ಲಿ ಬರೆದು ರಾಷ್ಟ್ರ ಭಾಷಾ ವಿಭಾಗಕ್ಕೆ ಕಳಿಸಬೇಕೆಂಬ ಲಿಖಿತ ಆದೇಶ ಬಂದ ಕಾರಣ ಆ ದಿನ ಸ್ವಲ್ಪ ತಯಾರಿ ಮಾಡಿಕೊಂಡಿದ್ದು ಸತ್ಯ.
ಆ ದಿನದ ಸಭೆಯಲ್ಲಿ ನಮ್ಮ ಪ್ರಬಂಧಕರು ತಮಗೆ ಬರುತಿದ್ದ ಹರುಕು ಮುರುಕು ಹಿಂದಿಯಲ್ಲಿ ಸ್ವಾಗತ ಕೋರಿ, ಚರ್ಚಿಸಬೇಕಾದ ವಿಷಯದ ಬಗ್ಗೆ ಹೇಳಿದರು. ಹಾಜರಿ ಪುಸ್ತಕದಲ್ಲಿ ಹಿಂದಿಯಲ್ಲೇ ಬರೆಯೋಣ ಎನ್ನುವ ಸಲಹೆಯನ್ನೂ ನೀಡಿದರು. ಎಲ್ಲ ಸಿಬ್ಬಂದಿಯೂ ‘ಆಗಲಿ’ ಎಂದು ಗೋಣು ಅಲ್ಲಾಡಿಸಿದರು.
ಅಂದಿನಿಂದ ಹಾಜರಿ ಪುಸ್ತಕದಲ್ಲಿ ಸಿಬ್ಬಂದಿಯ ಹೆಸರು, ಹುದ್ದೆ ಹಾಗೂ ರಜಾ ವಿವರಗಳನ್ನು ನಾನು ಬರೆದೆ.
ಮೂರು ತಿಂಗಳ ನಂತರದ ಸಿಬ್ಬಂದಿ ಸಭೆಯಲ್ಲಿ ಶಿವಪ್ರಸಾದ ಹೇಳಿದ,’ ಹಾಜರಿ ಪುಸ್ತಕದಲ್ಲಿ ಹೆಸರು ಮತ್ತು ವಿವರ ಬರೆಯುವದು ತಮಗೆ ಮಾತ್ರ ಸಾಧ್ಯ ಅಂತ ಯಾರಾದರೂ ತಿಳಿದುಕೊಂಡಿದ್ದರೆ ಅದು ತಪ್ಪು... ಮುಂದಿನ ತಿಂಗಳಿನಿಂದ ನನಗೂ ಬರೆಯಲು ಅವಕಾಶ ಕೊಡಿ... ನಾನೂ ಹಿಂದಿಯ ಪ್ರಬೋಧ್ ತರಗತಿಗೆ ಹೋಗುತ್ತಿದ್ದೇನೆ... ‘
ಶಿವಪ್ರಸಾದ ಪರೋಕ್ಷವಾಗಿ ನನ್ನ ಬಗ್ಗೆ ಮಾತನಾಡಿದ ಎನ್ನುವದು ಅಲ್ಲಿನ ಎಲ್ಲರಿಗೂ ತಿಳಿದಿತ್ತು.
‘ಉತ್ಸಾಹ ಎಂದರೆ ಅದು...’ ಶಿವಪ್ರಸಾದನನ್ನು ಪ್ರೋತ್ಸಾಹಿಸಿದರು ಪ್ರಬಂಧಕರು.
ಶಿವಪ್ರಸಾದ ನನ್ನ ಹಾಗೆ ಗುಮಾಸ್ತನಾಗಿದ್ದ. ನಾವಿಬ್ಬರೂ ಮಧ್ಯಾಹ್ನ ನಮ್ಮ ಪ್ರಧಾನ ಕಚೇರಿಯಲ್ಲೇ ನಡೆಸುತ್ತಿದ್ದ ‘ಪ್ರಬೋಧ್’ ಹಿಂದಿ ತರಗತಿಗೆ ಹೋಗುತ್ತಿದ್ದೆವು. ನನಗೆ ಹಿಂದಿಯಲ್ಲಿ ಮಾತನಾಡುವ ಸಾಧಾರಣ ಅಭ್ಯಾಸವಿತ್ತು. ಹಾಗಾಗಿ ನಾನು ಹಾಳೂರಿಗೆ ಉಳಿದವನೆ ಗೌಡ ಎಂಬಂತಿದ್ದೆ.
ಶಿವಪ್ರಸಾದನಿಗೆ ಹಿಂದಿ ಏನೂ ತಿಳಿಯುತ್ತಿರಲಿಲ್ಲ. ಆದರೂ ನಮ್ಮ ಶಿಕ್ಷಕರಾಗಿದ್ದ ತಾತಾಚಾರರಿಗೆ ಅವನ ಬಗ್ಗೆ ಬಹಳ ಕಾಳಜಿ. ಅವನಿಗೆ ಹಿಂದಿ ಕಲಿಸಿಯೇ ಸಿದ್ಧ ಎನ್ನುವ ಹಠಕ್ಕೆ ಬಿದ್ದಿರಬಹುದಾದ ಸಾಧ್ಯತೆ ಇತ್ತು.
ಮೇಷ್ಟ್ರು ಪಠ್ಯದಲ್ಲಿನ ಪ್ರಶ್ನೆಯನ್ನು ಹಿಂದಿಯಲ್ಲೇ ಶಿವಪ್ರಸಾದನಿಗೆ ಕೇಳುತ್ತಿದ್ದರು. ಆತನೇನು ಭಯಪಡುತ್ತಿರಲಿಲ್ಲ. ಹಿಂದಿಯಲ್ಲೇ ಉತ್ತರ ರೂಪವಾಗಿ ಏನೊ ಹೇಳುತ್ತಿದ್ದ. ಮೇಷ್ಟ್ರು ಪುನಃ ಹಿಂದಿಯಲ್ಲಿ ವಿವರಿಸುತ್ತಿದ್ದರು. ಆಗ ಶಿವಪ್ರಸಾದ ಪಕ್ಕದಲ್ಲೆ ಕೂತಿರುತಿದ್ದ ನನ್ನ ಕಾಲರ್ ಎಳೆದು ಕೇಳುತಿದ್ದ ,’ಏ ಇವನೆ... ನನ್ನ ಉತ್ತರ ಕೇಳಿ ಮೇಷ್ಟ್ರು ನನ್ನನ್ನು ಹೊಗಳ್ತಾ ಇದ್ದಾರೊ ಇಲ್ಲಾ ಬೈತಾ ಇದ್ದಾರೊ..?’
ಹೀಗಿರುವಾಗ ಆ ತಿಂಗಳು ಶಿವಪ್ರಸಾದ ಹಾಜರಿ ಪುಸ್ತಕದಲ್ಲಿ ಸಿಬ್ಬಂದಿಯ ಹೆಸರು ಮತ್ತು ವಿವರಗಳನ್ನು ಹಿಂದಿಯಲ್ಲಿ ಬರೆದ. ‘ಹಿಂದಿ ಯಾರೊಬ್ಬರ ಸ್ವತ್ತೂ ಅಲ್ಲ...’ ಅಂತ ಕೆಲವೊಬ್ಬರ ಮುಂದೆ ಹೇಳಿದ. ಅದು ನನ್ನ ಬಗ್ಗೆ ಹೇಳಿದ್ದು ಅನ್ನುವದು ಗೊತ್ತಾಗುತಿತ್ತು.
ಶಿವಪ್ರಸಾದ ಬರೆದ ಹಿಂದಿಯನ್ನು ಬೇರೆಯವರು ಗಮನಿಸದಿದ್ದರೂ, ಹಾಜರಿ ಹಾಕುವಾಗ ನಾನು ಗಮನಿಸಿದೆ. ಅದರಲ್ಲಿ ಸಾಕಷ್ಟು ತಪ್ಪುಗಳಿದ್ದು, ಅವನ ಮೇಲೆ ಸೇಡು ತೀರಿಸಿಕೊಳ್ಳಬಹುದಾದ ಒಂದು ಅಂಶ ನನಗೆ ದೊರಕಿತು.
ರಜಾದಲ್ಲಿದ್ದ ನಮ್ಮ ವಿಭಾಗದ ಜಗಳಗಂಟಿ ಮೇಡಮ್ ಗೀತಾ ಆರನೆಯ ತಾರೀಖಿಗೆ ಹಾಜರಾದರು. ಹಾಜರಿ ಪುಸ್ತಕದಲ್ಲಿ ಸಹಿಯನ್ನೂ ಹಾಕಿದರು.
ಅವರು ನನ್ನ ಪಕ್ಕದ ಆಸನದಲ್ಲಿ ಕೂತ ಮೆಲೆ ಕೇಳಿದೆ, ‘ಮೇಡಮ್... ನೀವು ಗೋತಾ ಆಗಿದ್ದೀರೆಂದು ತಿಳಿದು ನಾವೆಲ್ಲ ಬೇಜಾರಾಗಿದ್ದೆವು... ಅಂತೂ ಬಂದ್ರಲ್ಲ...?’
‘ಯಾಕೆ ಹಾಗಂತೀರಾ...?’ ಕೇಳಿದರು ಮೇಡಮ್.
‘ಹಾಜರಿ ಪುಸ್ತಕ ಸರಿಯಾಗಿ ನೋಡಿದ್ದರೆ ಗೊತ್ತಾಗುತಿತ್ತು...’ ನಗುತ್ತಾ ಹೇಳಿದೆ.
ಮೇಡಮ್ ಹಾಜರಿ ಪುಸ್ತಕದಲ್ಲಿ ಸರಿಯಾಗಿ ನೋಡಿ ಎಗರಾಡಲು ಪ್ರಾರಂಭಿಸಿದರು, ‘ಯಾರು ನನ್ನ ಹೆಸರನ್ನು ಗೋತಾ ಕಾಮತ್ ಅಂತ ಹಿಂದಿಯಲ್ಲಿ ಬರೆದಿದ್ದು...? ಗೀತಾಗೂ, ಗೋತಾಗೂ ವ್ಯತ್ಯಾಸ ಗೊತ್ತಿಲ್ವ...?’
‘ಶಿವಪ್ರಸಾದ ಬರೆದಿದ್ದು...’ ಸಿಬ್ಬಂದಿಯೊಬ್ಬರು ಹೇಳಿದರು.
‘ಅವನು ಬೇಕಂತ್ಲೆ ಬರೆದಿರ್ತಾನೆ... ಯಾವಾಗಲೂ ನಾನು ಹೇಳಿದ್ದಕ್ಕೆಲ್ಲ ಉಲ್ಟಾ ಹೇಳ್ತಾನೆ ಅವನು... ನನಗೆ ಅವಮರ್ಯಾದೆ ಮಾಡಬೇಕು ಅಂತಾನೆ ಈ ರೀತಿ ಬರೆದಿದ್ದಾನೆ ಅವನು...’
ಮೇಡಮ್ ಬಯ್ಯುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ ಶಿವಪ್ರಸಾದ ಬೆಪ್ಪಾಗಿ ಕೂತಿದ್ದ.
ನಾನೇ ಹೇಳಿದೆ, ‘ ಬಿಟ್ಬಿಡಿ ಮೇಡಮ್... ಶಿವಪ್ರಸಾದನಿಗೆ ಹಿಂದಿ ಸರಿಯಾಗಿ ಬರೊಲ್ಲ....’
‘ಎಲ್ಲಾ ಬರುತ್ತೆ ಅವನಿಗೆ... ಬೇಕಂತಲೇ ಹಾಗೆ ಬರೆದಿದ್ದಾನೆ...’ ಗರಂ ಆಗಿಯೇ ಹೇಳಿದರು ಮೇಡಮ್.
‘ಅವನ ಹೆಸರನ್ನೂ ಹಾಜರಿ ಪುಸ್ತಕದಲ್ಲಿ ಸರಿಯಾಗಿ ನೋಡಿ...’ ನಾನೆಂದೆ.
ಮೇಡಮ್ ಹಾಜರಿ ಪುಸ್ತಕ ನೋಡಿ ಜೋರಾಗಿ ನಗಲು ಪ್ರಾರಂಭಿಸಿದರು.
‘ಏನಾಯ್ತು ಮೇಡಮ್...’ ಉಳಿದವರು ಕೇಳಿದರು.
‘ನೀವೇ ನೋಡಿ...’ ಅನ್ನುತ್ತ ಹಾಜರಿ ಪುಸ್ತಕ ಕೊಟ್ಟರು ಮೇಡಮ್.
ಎಲ್ಲರೂ ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಅಂತಾದ್ದು ಏನಿತ್ತು ಅಂತೀರಾ?
ಶಿವಪ್ರಸಾದ ತನ್ನ ಹೆಸರನ್ನೂ, ಸಹಿಯನ್ನೂ ಮಾಡಿದ್ದು ‘ಶವಪ್ರಸಾದ್’ ಅಂತ!
? ನರಸಿಂಹ ಹೆಗಡೆ
(ನಿವೃತ್ತ ಬ್ಯಾಂಕ್ ಉದ್ಯೋಗಿ)
ಬೆಂಗಳೂರು. ಮೊ : 9449060077