ನಾಪೋಕ್ಲು, ಜ. 27: ಮಕ್ಕಳನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು. ಇಲ್ಲಿನ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಷನ್ ವತಿಯಿಂದ ನಾಪೋಕ್ಲು ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಕರು ಮಕ್ಕಳಲ್ಲಿರುವ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಬೇಕು. ಹೆತ್ತ ತಾಯಿ ಹಾಗೂ ಜನ್ಮಕೊಟ್ಟ ನಾಡು ಸ್ವರ್ಗಕ್ಕಿಂತ ಮಿಗಿಲಾದುದು. ಮಕ್ಕಳಲ್ಲಿ ನಾಡಿನ ಬಗ್ಗೆ ಪ್ರೀತಿಸುವ, ದೇಶಪ್ರೇಮವನ್ನು ಬೆಳೆಸುವ ಕೆಲಸ ಶಿಕ್ಷಕರಿಂದ ಆಗಬೇಕು ಎಂದ ಅವರು ಸಮಾಜದಿಂದ ತಾನು ಏನು ಪಡೆದೆ ಎನ್ನುವುದಕ್ಕಿಂತ ತಾನು ಸಮಾಜಕ್ಕೆ ಏನು ಕೊಟ್ಟಿದ್ದೇನೆ ಎನ್ನುವುದು ಮುಖ್ಯ. ಮಕ್ಕಳಿಗೆ ಅವರ ಕರ್ತವ್ಯಗಳ ಬಗ್ಗೆ. ಗುರುತರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಪೋಷಕರಿಂದ ಆಗಬೇಕು ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಸೈನಿಕ, ಕಾಫಿ ಬೆಳೆಗಾರ ಕೊಂಡೀರ ಸುಬ್ರಮಣಿ ಮಾತನಾಡಿ 1955ರಲ್ಲಿ ಕೊಡಗು ಜಿಲ್ಲೆಯಲ್ಲಿ ಐದು ಪ್ರೌಢಶಾಲೆಗಳಿದ್ದವು. ಏಕೈಕ ಕಾಲೇಜು ಇತ್ತು. ಇಂದು ನಾಪೋಕ್ಲುವಿನ ಪುಟ್ಟ ಊರಿನಲ್ಲಿಯೇ ನಾಲ್ಕು ಪ್ರೌಢಶಾಲೆಗಳಿವೆ.

ಹೆಚ್ಚು ಶಾಲೆ. ಹೆಚ್ಚು ಆಸ್ಪತ್ರೆಗಳನ್ನು ತೆರೆದಷ್ಟು ಅನುಕೂಲಗಳು ಹೆಚ್ಚು. ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು. ಬಳಿಕ ಶಾಲೆಯ ಅಭಿವೃದ್ಧಿಗಾಗಿ 10 ಸಾವಿರ ರೂ.ಗಳ ದೇಣಿಗೆಯನ್ನು ನೀಡಿದರು.

ಎಕ್ಸೆಲ್ ಸ್ಕೂಲ್ ಆಫ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಕುಟ್ಟಂಚೆಟ್ಟೀರ ಎಂ.ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ರಸಪ್ರಶ್ನೆ ಸರ್ಧೆಯಲ್ಲಿ ಕ್ಲಸ್ಟರ್ ಹಂತ, ತಾಲೂಕು ಹಂತ ಹಾಗೂ ಜಿಲ್ಲಾ ಹಂತದಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು. ಶಿಕ್ಷಕ ಪೋಷಕ ಸಂsಘದ ಅಧ್ಯಕ್ಷ ಜಯಪ್ರಕಾಶ್, ಶಾಲಾ ಆಡಳಿತ ಮಂಡಳಿ ನಿರ್ದೇಶಕಿ ವಿದ್ಯಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಭವ್ಯಾ ವರದಿ ವಾಚಿಸಿದರು. ಶಿಕ್ಷಕರಾದ ಶರತ್ ಹಾಗೂ ಸುರೇಶ್ ಅತಿಥಿಗಳ ಪರಿಚಯ ಮಾಡಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.