*ಗೋಣಿಕೊಪ್ಪಲು, ಜ. 28: ತಂಬಾಕು ಮಾರಾಟ ಮತ್ತು ಸೇವನೆ ಆರೋಗ್ಯಕ್ಕೆ ಹಾನಿಕರ. ಶಾಲೆಯ ಆವರಣದ ಸುತ್ತ ತಂಬಾಕು ಮಾರಾಟ ಮಾಡದಂತೆ ಗೋಣಿಕೊಪ್ಪಲು ಸರ್ಕಾರಿ ಪ್ರೌಢಾಶಾಲೆ ವಿದ್ಯಾರ್ಥಿಗಳು ಗೋಣಿಕೊಪ್ಪಲುವಿನ ವ್ಯಾಪಾರಸ್ಥರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಆಂದೋಲನ ನಡೆಸಿದರು.
ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ತಂಬಾಕು ನಿಯಂತ್ರಣ ಕೋಶ, ಸರ್ವೇಕ್ಷಣಾ ಘಟಕ, ವೀರಾಜಪೇಟೆ ತಾಲೂಕು ಪಂಚಾಯತ್, ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಪೊ ಕಾಯ್ದೆ ಅಡಿಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿ ತಂಬಾಕಿನ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡಿದರು.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ, ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್, ಠಾಣಾಧಿಕಾರಿ ಸುರೇಶ್ ಬೋಪಣ್ಣ, ಸಹಾಯಕ ಠಾಣಾಧಿಕಾರಿ ಮೇದಪ್ಪ, ಸಿಬ್ಬಂದಿ ಮಣಿಕಂಠ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ, ಶಿಕ್ಷಕ ನೂತನಕುಮಾರ್ ಹಾಜರಿದ್ದರು.