ಗೋಣಿಕೊಪ್ಪ ವರದಿ, ಜ. 28 : ಭಾಷಾ ಸಾಮಥ್ರ್ಯದೊಂದಿಗೆ ಧನಾತ್ಮಕ ಚಿಂತನೆ ಸೇನೆ ಸೇರುವವರಿಗೆ ಅವಶ್ಯ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಹೇಳಿದರು.

ಫೀ. ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಫೀ. ಮಾ. ಕಾರ್ಯಪ್ಪ ಅವರ ಹುಟ್ಟುಹಬ್ಬದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸೇನೆಯಲ್ಲಿ ಭೂಸೇನೆ, ವಾಯುಸೇನೆ, ನೌಕಪಡೆ ವ್ಯಾಪ್ತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಫಿ. ಮಾ. ಕಾರ್ಯಪ್ಪ ಅವರ ಶಿಸ್ತು, ಬದ್ಧತೆ ಮೈಗೂಡಿಸಿಕೊಳ್ಳಬೇಕೆಂದರು.

ಭಾಷಾ ಸಾಮಥ್ರ್ಯ ಕೂಡ ಉತ್ತಮ ಸೈನಿಕನಾಗಲು ಅವಶ್ಯಕ ಎಂದರು. ಯುವಜನತೆ ಸೇನೆ ಸೇರಲು ಮುಂದೆ ಬರಬೇಕಿದೆ. ಸೈನಿಕರಿಗೆ ಹೆಚ್ಚು ಅವಕಾಶಗಳಿವೆ. ಬಯಸಿದಲ್ಲಿ ತರಬೇತಿ ಮೂಲಕ ಪ್ರೇರಣೆ ನೀಡಲಾಗುವುದು ಎಂದು ಅವರು ಹೇಳಿದರು. ಮಕ್ಕಳು ಸೇನೆಗೆ ಸೇರಲು ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರು ಸ್ಪೂರ್ತಿ ಎಂದು ಅಭಿಪ್ರಾಯಪಟ್ಟರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚೆರಿಯಪಂಡ ಉತ್ತಪ್ಪ ಮಾತನಾಡಿ, ಕಾರ್ಯಪ್ಪ ಅವರು ಹಿಂದೂಸ್ಥಾನ ಮಾತ್ರವಲ್ಲದೆ ಕೊಡವ ಜನಾಂಗಕ್ಕೂ ವಿಶೇಷ ಗೌರವ ತಂದುಕೊಟ್ಟವರು. ನಮ್ಮ ಜನಾಂಗಕ್ಕೆ ಹೆಚ್ಚಿನ ಹೆಸರು ಬರಲು ಕೂಡ ಕಾರಣ ಅವರು, ಇದು ಯುವ ಸಮೂಹಕ್ಕೆ ಸ್ಪೂರ್ತಿಯಾಗಬೇಕು ಎಂದರು.

ನಿವೃತ್ತ ಸೇನಾಧಿಕಾರಿಗಳು, ಎನ್‍ಸಿಸಿ ಕೆಡೆಟ್‍ಗಳು, ಎನ್‍ಸಿಸಿ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಕಾರ್ಯಪ್ಪ ಅವರನ್ನು ನೆನಪಿಸಿಕೊಂಡರು. ಸಿಹಿ ಹಂಚಿ ಸಂಭ್ರಮಿಸಿದರು.

ಹಿರಿಯ ವೈದ್ಯ ಡಾ. ಕಾಳಿಮಾಡ ಕೆ. ಶಿವಪ್ಪ ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರಿಗೆ ಇಷ್ಟವಾಗಿದ್ದ ‘ಉಕ್ಕಿಯಂಡ್ ಬಾ ನೀನ್ ಕಾವೇರಿ.. ಕುಂದ್‍ರಡಿಲಿಂಜ.. ಕುಂದ್‍ರ ಕೊಡಿಲಿಂಜ ಎಂಬ ಹಾಡನ್ನು ಹಾಡಿದರು.

ಗೋಣಿಕೊಪ್ಪ ಕಾವೇರಿ ಕಾಲೇಜು ಎನ್.ಎನ್.ಸಿ. ಕೆಡೆಟ್‍ಗಳು ಕಾರ್ಯಕ್ರಮ ನಡೆಸಿಕೊಟ್ಟರು. ಚಿರಾಗ್ ಪ್ರಾರ್ಥಿಸಿ, ಯಶಿಕಾ ಸ್ವಾಗತಿಸಿದರು. ಕವನರೈ ಫೀ.ಮಾ. ಕಾರ್ಯಪ್ಪ ಅವರ ಬಗ್ಗೆ ಮಾಹಿತಿ ನೀಡಿದರು. ಮೋನಿಶಾ ಹಾಗೂ ತಂಡ ದೇಶಭಕ್ತಿ ಗೀತೆ ಹಾಡಿದರು. ಕಾವ್ಯಶ್ರೀ ಪರಿಚಯ ಮಾಡಿದರು. ತೇನ್ಸಿ, ದರ್ಶಿನಿ ನಿರೂಪಿಸಿದರು. ಎನ್‍ಸಿಸಿ ಅಧಿಕಾರಿಗಳಾದ ಬ್ರೈಟಕುಮಾರ್ ಹಾಗೂ ಲೇಪಾಕ್ಷಿ ಮುಂದಾಳತ್ವ ವಹಿಸಿದ್ದರು.

ಈ ಸಂದರ್ಭ ಫೀ. ಮಾ. ಕಾರ್ಯಪ್ಪ ಫೋರಂ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಪ್ರಾಂಶುಪಾಲ ಕೆ.ವಿ. ಕುಸುಮಾಧರ್, ಸಣ್ಣುವಂಡ ಎಸ್. ಮಾದಯ್ಯ, ಕೊಡಂದೇರ ಕುಟುಂಬ ಅಧ್ಯಕ್ಷ ಕೊಡಂದೇರ ಸುಬ್ಬಯ್ಯ, ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸದಸ್ಯ ಕಳ್ಳಿಚಂಡ ರಾಬಿನ್, ಅನೀಶ್ ಮಾದಪ್ಪ, ಆರ್‍ಎಸ್‍ಎಸ್ ಜಿಲ್ಲಾ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಇಗ್ಗುತ್ತಪ್ಪ ಕೊಡವ ಸಂಘ ಉಪಾಧ್ಯಕ್ಷೆ ಕೊಣಿಯಂಡ ಬೋಜಮ್ಮ, ಲಯನ್ಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಕೊಂಗಂಡ ನಂಜಪ್ಪ, ಪ್ರಮುಖರಾದ ಗಣಪತಿ, ಸಿ.ಡಿ. ಮಾದಪ್ಪ ಇದ್ದರು. ಪ್ರತಿಕ್ಷಾ ವಂದಿಸಿದರು.