ಮಡಿಕೇರಿ, ಜ.28: ಕೊಡಗು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಹಲವು ವರ್ಷಗಳಿಂದ ಜನರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ರೈಲ್ವೆ ಹಳಿ ಮುಖಾಂತರ ತಡೆಗಟ್ಟುವ ಕಾರ್ಯಕ್ರಮಕ್ಕೆ ಇನ್ನೂ ಚಾಲನೆ ದೊರಕಿರುವುದಿಲ್ಲ. ಆದ್ದರಿಂದ ಆನೆಗಳ ಉಪಟಳದಿಂದ ಹಾಡು-ಹಗಲೇ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಭಯ-ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜನ ಸಾಮಾನ್ಯರು ಈ ವಿಷಯವನ್ನು ನಮ್ಮಲ್ಲಿ ಪ್ರಸ್ತಾಪಿಸಿದಾಗ ಇದಕ್ಕೆ ಏನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ ಸಂದರ್ಭ; ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರುಗಳ, ಉತ್ತಮ ಗುಣಮಟ್ಟದ ಯಾಂತ್ರಿಕ ಚಿಕಿತ್ಸಾ ಉಪಕರಣ ಹಾಗೂ ಟೆಕ್ನಿಕಲ್ ಆಪರೇಟರ್ಗಳ ಕೊರತೆಯಿದ್ದು, ಇದರಿಂದ ರೋಗಿಗಳು ಸಣ್ಣ-ಪುಟ್ಟ ತಪಾಸಣೆಗಳಿಗಾಗಿ ಮೈಸೂರು-ಮಂಗಳೂರು ಹೀಗೆ ಬೇರೆ ಕಡೆಗಳಿಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ ಎಂದು ನೆನಪಿಸಿದ್ದಾರೆ. ಸರ್ಕಾರಿ ಆಸ್ಪತ್ರ್ರೆಗಳನ್ನು ಮೇಲ್ದರ್ಜೆಗೇರಿಸುವ ಜೊತೆಗೆ ವೈದ್ಯರುಗಳ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇಲ್ಲದೆ ಸಾಮಾನ್ಯ ಜನರು ಪರಿತಪಿಸುತ್ತಿದ್ದಾರೆ. ಜನರು ಸಣ್ಣ-ಪುಟ್ಟ ವೈದ್ಯಕೀಯ ಅವಶ್ಯಕತೆಗಳ ಪೂರೈಕೆಗೆ ಪರದಾಡುವ ಪ್ರಸಂಗ ಸಾಮಾನ್ಯವಾಗಿದೆ. ಆದ್ದರಿಂದ ಸರ್ಕಾರಿ ಮೆಡಿಕಲ್ ಕಾಲೇಜು, ವೈದ್ಯರ ಕಲಿಕಾ ತಂಡದೊಂದಿಗೆ; ತಜ್ಞರು ಹೋಬಳಿಗಳಲ್ಲಿ ಸಂತೆ ನಡೆಯುವ ದಿವಸ ಪ್ರಾಥಮಿಕ ಕೇಂದ್ರಗಳಲ್ಲಿ ಜನಸಾಮಾನ್ಯರ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಕ್ರಮ ವಹಿಸುವಂತೆ ಕೋರಿದರು.
ಕೊಡಗು ಪ್ರವಾಸಿ ತಾಣವಾಗಿದ್ದು, ಪ್ರವಾಸೋದ್ಯಮದಲ್ಲಿ ತೀವ್ರಗತಿಯಲ್ಲಿ ಮುಂದುವರೆಯುತ್ತಿರುವ ಜಿಲ್ಲೆಯಾಗಿದೆ. ಪ್ರವಾಸೋದ್ಯಮ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ. 100 ಲಕ್ಷ, ರೈಲು ನಿಲ್ದಾಣಗಳಲ್ಲಿ ಇರುವಂತಹ ರೀತಿ ತಲಕಾವೇರಿ- ಭಾಗಮಂಡಲ, ಓಂಕಾರೇಶ್ವರ ದೇವಸ್ಥಾನ-ರಾಜಾಸೀಟು, ಅಬ್ಬಿ ಜಲಪಾತ, ನಿಸರ್ಗಧಾಮ-ನಾಗರಹೊಳೆಗಳಲ್ಲಿ ಕ್ರಮ ಕೈಗೊಳ್ಳಲು ಕೋರಿದರು.
ಪ್ರವಾಸಿ ಕೇಂದ್ರಗಳಿಗೆ ಹೋಗುವ ರಸ್ತೆಗಳು ತುಂಬಾ ಕಿರಿದಾಗಿದ್ದು, ರಸ್ತೆ ಅಭಿವೃದ್ಧಿಗೆ ರೂ. 500 ಲಕ್ಷ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಹಲವಾರು ಪಂಚಾಯತ್ ರಾಜ್ ಅಧೀನದಲ್ಲಿ ಬರುವ ರಸ್ತೆಗಳು ಪ್ರವಾಹ, ಮಳೆಯಿಂದಾಗಿ ಹಾಗೂ ನಿರ್ವಹಣೆ ಇಲ್ಲದೆ ಹಾಳಾಗಿದೆ. ಆದ್ದರಿಂದ ಇಂತಹ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಅಭಿವೃದ್ಧಿ ಪಡಿಸಲು ಅಂದಾಜು ರೂ. 100 ಕೋಟಿ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನಿಗದಿಪಡಿಸಿ ಮಲೆನಾಡು ಪ್ರದೇಶವಾದ ಕೊಡಗಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಿಂದ ರಾಜಾಸೀಟ್ ಮಾರ್ಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಖಾಂತರ ಜಿಲ್ಲಾ ಪಂಚಾಯತ್ ಆಡಳಿತ ಭವನಕ್ಕೆ 5 ಕಿ.ಮೀ ದೂರವಿರುತ್ತದೆ. ರಸ್ತೆ ಸಂಪರ್ಕ ತುಂಬಾ ಹಳೆಯದಾಗಿದ್ದು, ಜನಸಾಮಾನ್ಯರಿಗೆ, ತೊಂದರೆಯಾ ಗುತ್ತಿದೆ. ಆದ್ದರಿಂದ ಈ ಸಂಬಂಧ ಸುಸಜ್ಜಿತ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಅಂದಾಜು ರೂ. 10 ಕೋಟಿ ಅನುದಾನ ನಿಗಧಿಪಡಿಸಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.
ಕೊಡಗು ಜಿ.ಪಂ.ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಜನರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರೆಲ್ಲರೂ 2020ರಲ್ಲಿ ನಿವೃತ್ತಿ ಹೊಂದಲಿದ್ದಾರೆ. ಈಗ ಜಿ.ಪಂ. ಆಡಳಿತ ವ್ಯವಸ್ಥೆ ಹೊರ ಸಂಪನ್ಮೂಲ. ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ನಿಂತಿದೆ. ಇವರುಗಳಿಗೆ ಸೇವಾ ಭಧ್ರತೆ ಇಲ್ಲದಿರುವುದರಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಣೆಗೆ ಅನಾನುಕೂಲವಾಗಿದೆ.
ಸಚಿವರ ಆಪ್ತ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಕರ್ನಾಟಕ ಸಚಿವಾಲಯದಲ್ಲಿ ವಿಲೀನಗೊಳಿಸಿದ ರೀತಿ ಕೊಡಗು ಜಿಲ್ಲಾ ಪಂಚಾಯತ್ನಲ್ಲಿ ಹೊರ ಸಂಪನ್ಮೂಲ, ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ನೌಕರರನ್ನು ಜಿಲ್ಲಾ ಪಂಚಾಯತ್ ಆಡಳಿತಕ್ಕೆ ವಿಲೀನಗೊಳಿಸಿ ಸೇವಾ ಭಧ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಆಡಳಿತ ಭವನದಲ್ಲಿ ಕಟ್ಟಡ, ಕಚೇರಿಗಳ ಸುರಕ್ಷತೆಯ ದೃಷ್ಟಿಯಿಂದ 10 ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೂ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮನವಿ
ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ವಾಸವಿರುವ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾದ ಜಿಲ್ಲಾ ಘಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಮಡಿಕೇರಿಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಹಾಸಭಾದ ಪ್ರಮುಖರು, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 60ಕ್ಕೂ ಹೆಚ್ಚು ವಸತಿ ರಹಿತ ಕುಟುಂಬಗಳಿದ್ದು, ಬಾಳುಗೋಡು ಗ್ರಾಮದ 337/1ರ 37.58 ಎಕ್ರೆ ಜಾಗದ ಪೈಕಿ 3.50 ಎಕ್ರೆ ಜಾಗದಲ್ಲಿ ದಲಿತರು, ಆದಿವಾಸಿ ಗಳು ಮತ್ತು ಓಬಿಸಿ ನಿರಾಶ್ರಿತ ಕುಟುಂಬಗಳು ವಾಸಿಸುತ್ತಿದ್ದಾರೆ. ಇವರಿಗೆ ನಿವೇಶನದ ಹಕ್ಕುಪತ್ರ ವಿತರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಹಾಸಭಾದ ರಾಜಾಧ್ಯಕ್ಷ ಆರ್.ಕೃಷ್ಣ, ರಾಜ್ಯ ಉಪಾಧ್ಯಕ್ಷ ಕೆ.ಪಳನಿ ಪ್ರಕಾಶ್, ಜಿಲ್ಲಾಧ್ಯಕ್ಷ ಎ.ಮಹದೇವ್, ಹಾಸನ ಜಿಲ್ಲಾಧ್ಯಕ್ಷ ಸಿ.ಎಂ. ಶ್ರೀನಿವಾಸ್, ಸದಸ್ಯರುಗಳಾದ ಹೆಚ್.ವಿ. ರಾಮದಾಸ್, ರವಣಯ್ಯ, ಸುಂಟಿಕೊಪ್ಪ ಅಧ್ಯಕ್ಷ ಆರ್. ರಂಗಸ್ವಾಮಿ ಮತ್ತಿತರರು ಹಾಜರಿದ್ದರು.