ಮಡಿಕೇರಿ, ಜ. 28: ಬೊಳ್ಳಿಮಡ ಡಾಟಿ ಉತ್ತಪ್ಪ ನಿರ್ಮಿಸಿರುವ ಕೊಡವ ಭಾಷೆಯ ಪ್ರಥಮ ಮಕ್ಕಳ ಚಲನಚಿತ್ರ ‘ಮಕ್ಕಡ ಮನಸ್ಸ್’ ಫೆ.3 ಮತ್ತು 4 ರಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ವಿತರಕÀ ಜಾನ್ ಪುಲಿಕಲ್ ತಿಳಿಸಿದ್ದಾರೆ.

ಜೀವನೋಪಾಯಕ್ಕಾಗಿ ಮನೆ ಮಂದಿ ಮಾಡುವ ಕೆಲಸಗಳು ಪುಟಾಣಿ ಮನಸ್ಸಿನ ಮೇಲೆ ಮೂಡುವ ಪರಿಣಾಮಗಳನ್ನು ಆಧರಿಸಿದ ಕೊಡವ ಭಾಷೆಯ ಪ್ರಥಮ ಚಲನಚಿತ್ರ ಇದಾಗಿದ್ದು, ಚಲನಚಿತ್ರವನ್ನು ಸೋಲೋಮನ್ ಕುರಿಯನ್ ನಿರ್ದೇಶಿಸಿದ್ದಾರೆ. ಪ್ರಶಸ್ತಿ ವಿಜೇತ ಖ್ಯಾತ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ ಮಾಡಿದ್ದು, ಚಿತ್ರದಲ್ಲಿ ಕೊಡವ ಭಾಷೆಯೊಂದಿಗೆ ವ್ಯಾವಹಾರಿಕ ಭಾಷೆಯಾದ ಕನ್ನಡ ಮತ್ತು ಇಂಗ್ಲಿಷ್‍ನ್ನು ಬಳಸಿಕೊಳ್ಳಲಾಗಿದೆ.

ಈ ಚಿತ್ರವನ್ನು ಅಥ್ಲಿಟ್ ಅರ್ಜುನ್ ದೇವಯ್ಯ ಮತ್ತು ಅಶ್ವಿನಿ ನಾಚಪ್ಪ ಅವರನ್ನು ಸ್ಫೂರ್ತಿಯಾಗಿಟ್ಟು ಕೊಂಡು ಮಾಡಲಾಗಿದ್ದು, ಕೊಡವ ಮತ್ತು ಕನ್ನಡ ಭಾಷೆಯ ಎರಡು ಹಾಡುಗಳಿವೆ. ಕೊಡಗಿನ ಕಲಾವಿದರೂ ಅಭಿನಯಿಸಿರುವ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ, ಇವರು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರೊಂದಿಗೆ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ ಎಂದರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಗಂಗಾಧರ ನೀಡಿದ್ದು, ಚಿತ್ರದ ನಾಯಕನಾಗಿ ಬಾಲಕ ವರುಣ್ ಗೌಡ, ನಾಯಕಿಯಾಗಿ ಬೊಳಿಯಾಡಿರ ದಕ್ಷಿತ ನಟಿಸಿದ್ದಾರೆ. ಕೊಡಗಿನ ಕಲಾವಿದರಾದ ಸಂತೋಷ್ ಮಾದಪ್ಪ, ಬೊಳ್ಳಿಮಾಡ ಪ್ರಜ್ಞಾ, ವಾಂಚೀರ ನಾಣಯ್ಯ, ಜಯ ಮಂಜಪ್ಪ, ಕೊಟ್ಟುಕತ್ತಿರ ಪ್ರಕಾಶ್ ಸೇರಿದಂತೆ ಹಲವರು ನಟಿಸಿದ್ದಾರೆ.

ಕೊಡಗಿನ ಕಕ್ಕಬ್ಬೆ, ವೀರಾಜಪೇಟೆ ಶಾಲೆ ಸೇರಿದಂತೆ ವಿವಿಧ ಭಾಗಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆÀ. ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ “ಮಕ್ಕಡ ಮನಸ್” ಪ್ರದರ್ಶನಗೊಳ್ಳಲಿದೆ. ಕೊಡಗಿನ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಸಂಭಾಷಣೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚಿತ್ರದ ವಿತರಕÀ ಜಾನ್-9141808495, ಬಿಎಸ್‍ಆರ್ ರಾಕಿ- 9448217377 ಸಂಪರ್ಕಿಸ ಬಹುದಾಗಿದೆ.