ಮಡಿಕೇರಿ, ಜ.28: ಭಾರತದ ರಕ್ಷಣಾ ಪಡೆಗಳನ್ನು ಸೇರುವಂತೆ ನಿವೃತ್ತ ಏರ್ ಚೀಫ್ ಮಾರ್ಷಲ್ ಫಾಲಿ ಮೇಜರ್ ಕರೆ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಒಬ್ಬ ಸ್ಫೂರ್ತಿದಾಯಕ ವ್ಯಕ್ತಿ. ಇಂತಹ ಶ್ರೇಷ್ಠರ ಊರಾದ ಮಡಿಕೇರಿಯನ್ನು ಭೇಟಿ ನೀಡಿದ್ದು ನನಗೆ ಸಂತಸ. ಅವರ “ಮೊದಲಿಗೆ ಭಾರತನಾಗು” ಎಂಬ ಧ್ಯೇಯ ವಾಕ್ಯವನ್ನು ಎಲ್ಲರು ಪಾಲಿಸಬೇಕು ಎಂದು ಕೂಡ ಸಲಹೆ ನೀಡಿದರು. ಭಾರತೀಯ ಸೇನಾಪಡೆಗಳಲ್ಲಿ ಕರ್ತವ್ಯ ನಿರ್ವಹಿಸಲು ದೊರಕುವ ಅವಕಾಶ ನಿಜಕ್ಕೂ ಅವಿಸ್ಮರಣೀಯ. ಸೈನಿಕರದ್ದು, ಬೇರೆ ಯಾರಿಗೂ ದೊರಕದಂತಹ ಸಾಕಷ್ಟು ಸೌಲಭ್ಯಗಳನ್ನು ಹೊಂದಿದ ಜೀವನವಾಗಿರುತ್ತದೆ ಎಂದರು.ನಗರದ ರೋಷನಾರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪÀ್ಪ ಅವರ ಸಮಾಧಿ ಸ್ಥಳದಲ್ಲಿ ಅವರ 121 ನೇ ಹುಟ್ಟುಹಬ್ಬದ ಪ್ರಯುಕ್ತ ಕೊಡಗು ವಿದ್ಯಾಲಯ ವಿದ್ಯಾಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಫೀ.ಮಾ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಪುತ್ರಿ ನಳಿನಿ ಕಾರ್ಯಪ್ಪ ಹಾಗೂ ನಂದಾ ಕಾರ್ಯಪ್ಪ ಅವರ ಪತ್ನಿ ಮೀನಾ ಕಾರ್ಯಪ್ಪ ದೀಪ ಬೆಳಗಿಸಿ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ನಂದಾ ಕಾರ್ಯಪ್ಪ ಅವರು ತನ್ನ ತಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸದಾ ದೇಶ ಮೊದಲು, ಉಳಿದುದೆಲ್ಲವೂ ನಂತರ ಎಂಬ ತತ್ವಕ್ಕೆ ಬದ್ದರಾಗಿದ್ದವರು. ತಾವು ನಂಬಿದ್ದ ಆದರ್ಶದಂತೆಯೇ ಕೊನೆಯವರೆಗೂ ಜೀವಿಸಿದರು ಎಂದು ಸ್ಮರಿಸಿದರು. ಭಾರತದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿ ಸಾಗಿರುವುದು ಪ್ರಶಂಸನೀಯ ಎಂದೂ ಅವರು ಹೆಮ್ಮೆ ವ್ಯಕ್ತಪಡಿಸಿದರು. ಗಣರಾಜ್ಯೋತ್ಸ ವದಂದು ಕ್ರೀಡೆಯಲ್ಲಿ ಸಾಧನೆಗೈದ ಹಲವರು ಪ್ರಶಸ್ತಿಗಳಿಗೆ ಭಾಜನರಾದರು. ಇದರಲ್ಲಿ ಅಧಿಕ ಮಹಿಳೆಯರೇ ಇದ್ದು, ಯುವಕರು ಕೂಡ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹಾಸ್ಯ ಮಾಡಿದರು.

(ಮೊದಲ ಪುಟದಿಂದ) ಈ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಭಜನೆಗಳನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಹಾಡಿದರಲ್ಲದೇ, ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿಯ ಘೋಷವಾಕ್ಯಗಳನ್ನು ವಾಚಿಸಿದರು.

ಫೀಲ್ಡ್ ಮಾರ್ಷಲ್ ಜೀವನದ ಕುರಿತಂತೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಕಾರ್ಯಪ್ಪ ಪುತ್ರಿ ನಳಿನಿ, ಸೊಸೆ ಮೀನಾ ಕಾರ್ಯಪ್ಪ ವಿತರಿಸಿದರು. ಪ್ರಥಮ ಬಹುಮಾನವನ್ನು ಮಡಿಕೇರಿಯ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಬಿ.ಎಂ.ಸುಬ್ರಹ್ಮಣಿ, ದ್ವಿತೀಯ ಬಹುಮಾನವನ್ನು ಸಂತಜೋಸೆಫರ ಕಾನ್ವೆಂಟ್‍ನ ಸಿದ್ದಾಂತ್ ಗಣಪತಿ, ತೃತೀಯ ಬಹುಮಾನವನ್ನು ಕೊಡಗು ವಿದ್ಯಾಲಯದ ಸಾಗರ್ ಮಂದಣ್ಣ ಪಡೆದುಕೊಂಡರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪಿ.ಎನ್.ಚಿನ್ಮಯ, ಕಾರ್ಯಪ್ಪ ಕುರಿತಂತೆ ಮಾತನಾಡಿದರು.

ಜರೀನ್ ಮೇಜರ್, ನಿವೃತ್ತ ಏರ್ ಮಾರ್ಷಲ್ ಓಸ್ಮಾನ್, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಉಜ್ವಲ್ ಗೋರ್ಮಡೆ , ನಿವೃತ್ತ ಕರ್ನಲ್ ಬಿಜಿವಿ ಕುಮಾರ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತಾಧಿಕಾರಿ ವಿದ್ಯಾಹರೀಶ್, ನಿರ್ದೇಶಕ ಸಿ.ಎಸ್. ಗುರುದತ್, ವ್ಯವಸ್ಥಾಪಕ ರವಿ, ಕೂಡಿಗೆ ಸೈನಿಕ ಶಾಲೆಯ ಎನ್.ಸಿ.ಸಿ ಅಧಿಕಾರಿ ಜಿ.ಕೆ.ಮಂಜಪ್ಪ, ಸಿ.ಬಿ.ಸೋಮಯ್ಯ, ಸಿ.ಆರ್.ಮುತ್ತಣ್ಣ, ಪ್ರೇಮ್‍ನಾಥ್, ಪಿ.ಎಸ್.ಗಣಪತಿ, ಕೊಡಗು ವಿದ್ಯಾಲಯದ ಹಾಗೂ ಸೈನಿಕ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿದಂತೆ ನೆರೆದಿದ್ದ ಎಲ್ಲರು ಪುಪ್ಪಾರ್ಚನೆ ಮಾಡಿದರು.