ಕುಶಾಲನಗರ, ಜ. 28: ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿ ನಡೆದಿದೆ.
ಯೋಗಾನಂದ ಬಡಾವಣೆ ನಿವಾಸಿ ಕೆ.ವಿ.ವರದರಾಜ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಯೋಗಾನಂದ ಅವರು ತಮ್ಮ ಕುಟುಂಬ ಸಹಿತ ಕಳೆದ ಐದು ದಿನಗಳ ಹಿಂದೆ ಮೈಸೂರಿಗೆ ತೆರಳಿದ್ದು ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳರ ತಂಡ ಮನೆಯ ಮುಂದಿನ ಬಾಗಿಲನ್ನು ಹಾರೆಯಿಂದ ಮೀಟಿ ಒಳನುಗ್ಗಿದೆ. ಮನೆಯೊಳಗೆ ಗಾದ್ರೆಜ್ ಬೀರು, ಕಪಾಟುಗಳನ್ನು ಜಾಲಾಡಿ ಕೈಗೆ ಸಿಕ್ಕ ನಗದು, ಚಿನ್ನ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ವರದರಾಜ್ ಅವರು ತಮ್ಮ ಮನೆಯನ್ನು ನೋಡಿಕೊಳ್ಳುವಂತೆ ಸಮೀಪದಲ್ಲಿ ವಾಸವಿದ್ದ ತನ್ನ ಸಹೋದರ ನಾಗೇಶ್ ಅವರಿಗೆ ತಿಳಿಸಿದ್ದರು. ಮಂಗಳವಾರ ಬೆಳಿಗ್ಗೆ ನಾಗೇಶ್ ಅವರ ಪತ್ನಿ ಮನೆಯ ಗಿಡಗಳಿಗೆ ನೀರು ಹಾಕಲು ಹೋದ ಸಂದರ್ಭ ಕಳ್ಳತನವಾಗಿರುವುದು ತಿಳಿದು ಬಂದಿದೆ. ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಿದ ಮೇರೆಗೆ ನಗರ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದವು. 50 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ದೋಚಿರುವ ಬಗ್ಗೆ ತಿಳಿದುಬಂದಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೆÇಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.