ಸೋಮವಾರಪೇಟೆ,ಜ.28: ಪಟ್ಟಣ ಸಮೀಪದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ರೂ. 2 ಕೋಟಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗಿದೆ. ತಾ. 30ರಂದು ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ ಎಂದು ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸೀತಾರಾಂ ತಿಳಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾ. 30ರಂದು ಪೂರ್ವಾಹ್ನ 8.30ರಿಂದ 9.30ರವರೆಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.
2 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. 35 ಲಕ್ಷ ವೆಚ್ಚದಲ್ಲಿ ಗರ್ಭ ಗುಡಿಯನ್ನು ನಿರ್ಮಿಸಲಾಗುವದು. ಇದರೊಂದಿಗೆ ಪರಿವಾರ ದೇವತೆಗಳ ದೇವಾಲಯ, ಸಭಾಂಗಣ ನಿರ್ಮಾಣ ಮಾಡಲಾಗುವದು. ಈಗಾಗಲೇ ಕ್ಷೇತ್ರದ ಶಾಸಕ ರಂಜನ್ ಅವರು ರಾಜ್ಯ ಮುಜರಾಯಿ ಇಲಾಖೆಯಿಂದ 5 ಲಕ್ಷ ಅನುದಾನ ಒದಗಿಸಿದ್ದು, ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕವಾಗಿ ನಿರ್ಮಾಣ ವಾಗುತ್ತಿರುವ ದೇವಾಲಯಕ್ಕೆ ಸಾರ್ವಜನಿಕರೂ ಸಹ ಧನ ಸಹಾಯ ನೀಡಬೇಕಿದೆ ಎಂದು ಸೀತಾರಾಂ ಮನವಿ ಮಾಡಿದರು.
ದೇವಾಲಯ ನಿರ್ಮಾಣಕ್ಕೆ ನಗದು ಸೇರಿದಂತೆ ವಸ್ತುವಿನ ರೂಪದಲ್ಲಿಯೂ ಸೇವೆ ಸಲ್ಲಿಸಬಹುದು. ಸಾರ್ವಜನಿಕ ಭಕ್ತಾದಿಗಳು ಹಾಗೂ ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಾಣಕ್ಕೆ ಸಮಿತಿ ಮುಂದಾಗಿದೆ. ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸಮಿತಿ, ಖಾತೆ ಸಂಖ್ಯೆ 115601011000871, ಐಎಫ್‍ಎಸ್‍ಸಿ-ವಿಐಜೆಬಿ 00011561 ಈ ಖಾತೆಗೆ ಧನಸಹಾಯ ಮಾಡಬಹುದು ಎಂದರು.
ಗೋಷ್ಠಿಯಲ್ಲಿದ್ದ ಸಮಿತಿಯ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಭಕ್ತರ ಹಲವು ವರ್ಷಗಳ ಕನಸು ಈಡೇರುವ ಕಾಲ ಸನ್ನಿಹಿತವಾಗಿದೆ. ಆಂಜನೇಯ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಭಕ್ತರ ಅಭಿಲಾಷೆಯಂತೆ ದೇವಾಲಯ ನಿರ್ಮಾಣವಾಗಲಿದೆ. ಈಗಾಗಲೇ ಕೆತ್ತನೆ ಕಾರ್ಯ ಪ್ರಾರಂಭವಾಗಿದ್ದು, ದೇವಾಲಯವನ್ನು ಕಾರ್ಕಳದ ಶಿಲ್ಪಿಗಳು ನಿರ್ಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ಮಾತನಾಡಿ, 1949ರಲ್ಲಿ ಡಿ. ಸಿದ್ದಣ್ಣ ಅವರು 3.13 ಎಕರೆ ಜಾಗವನ್ನು ಖರೀದಿಸಿ ಆಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದೀಗ ಹೆಚ್.ಕೆ. ಮುತ್ತಣ್ಣ ಅವರು 11 ಸೆಂಟ್ಸ್ ಜಾಗವನ್ನು ಕೊಟ್ಟಿದ್ದಾರೆ ಎಂದರು.
ನೂತನ ದೇವಾಲಯದಲ್ಲಿ ಈಗಿರುವ ಮೂಲ ವಿಗ್ರಹವನ್ನೇ ಪ್ರತಿಷ್ಠಾಪಿಸಲಾಗುವದು. ಉಳಿದಂತೆ ಪರಿವಾರ ದೇವರುಗಳ ಗುಡಿಗಳನ್ನು ನಿರ್ಮಿಸಲಾಗುವದು. ಮುಂದಿನ 1 ವರ್ಷದೊಳಗೆ ಗರ್ಭಗುಡಿಯ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಜಿ.ಎ. ಉದಯ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪಿ.ಬಿ. ಶೆಟ್ಟಿ, ಪದಾಧಿಕಾರಿಗಳಾದ ಸಿ.ಸಿ. ನಂದ, ಸುರೇಶ್, ದೇವಾಲಯದ ಅರ್ಚಕ ನಂಜುಂಡೇಶ್ವರ ಅವರುಗಳು ಉಪಸ್ಥಿತರಿದ್ದರು.