ಪಾಲಿಬೆಟ್ಟ, ಜ. 28: ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಭಾಗದ ಕ್ಲಸ್ಟರ್‍ನ ಒಂಟಿಯಂಗಡಿ ಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿಗಳು, ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಒಂಟಿಯಂಗಡಿ ಶಾಲಾ ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಮುಂದೆ ತರುವ ಪ್ರಯತ್ನಕ್ಕೆ ಶಿಕ್ಷಕರು ಮುಂದಾಗಿದ್ದು ಅಮ್ಮತ್ತಿ ಕ್ಲಸ್ಟರ್‍ನ ಸುಷಾ ಅವರು ವಿಶೇಷ ಪ್ರಯತ್ನದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಗಮನಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭಾಗದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು. ರಾಜ್ಯ ಸಮಗ್ರ ಶಿಕ್ಷಣ ಹಿರಿಯ ಸಮಾಲೋಚಕ ಬೆಳ್ಳಶೆಟ್ಟರು ಮಾತನಾಡಿ, ನಲಿಕಲಿ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ರಾಜ್ಯದಲ್ಲೇ ಪ್ರಥಮ ಕಾರ್ಯಕ್ರಮವಾಗಿದೆ. ಗ್ರಾಮೀಣ ಭಾಗದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲಾ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡು ವಿಶಿಷ್ಟ ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ರಾಜ್ಯದ ಇತರ ಶಾಲೆಗಳಿಗೂ ಪರಿಚಯಿಸ ಲಾಗುವುದು ಎಂದು ಹೇಳಿದರು. ಎಲ್ಲಾ ಶಿಕ್ಷಕರುಗಳು ಇಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡಬೇಕೆಂದು ಸಲಹೆ ನೀಡಿ ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್‍ನ ಸುಷಾ ಅವರನ್ನು ಅಭಿನಂದಿಸಿದರು.

ಶಿಕ್ಷಣ ಇಲಾಖೆಯ ನಲಿ ಕಲಿ ರಾಜ್ಯ ನಿರ್ದೇಶಕ ರವೀಂದ್ರ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಶಾಲೆಗಳಲ್ಲೂ ನಲಿಕಲಿ ಕಲಿನಲಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿರುವುದರಿಂದ ಪ್ರತಿ ಶಾಲೆಯಲ್ಲೂ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ. ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಒಂಟಿಯಂಗಡಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿ ಗಮನಸೆಳೆದಿದ್ದಾರೆ.

ಉನ್ನತ ವ್ಯಾಸಂಗ ಮಾಡಿ ಪದವಿ ಸ್ವೀಕರಿಸುವ ಕಾರ್ಯಕ್ರಮದ ರೀತಿಯಲ್ಲಿಯೇ 3ನೇ ತರಗತಿ ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಗಳನ್ನು ಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

ಡಯಟ್ ಉಪನ್ಯಾಸಕ ಸಿದ್ದೇಶ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಮುಂದೆ ತರುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಕೆಂದರು

ಪ್ರಾರ್ಥನೆ ಸಂದರ್ಭ ಶಾಲೆಯ ವಿದ್ಯಾರ್ಥಿಯೋರ್ವ ಸುಂದರವಾದ ಗಣಪತಿ ಚಿತ್ರವನ್ನು ತನ್ನ ಕಲಾ ಕುಂಚದಿಂದ ಬಿಡಿಸಿ ಗಮನ ಸೆಳೆದರೆ. ಕೆಲ ಪುಟಾಣಿ ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿ ಶಾಲೆ, ಶಿಕ್ಷಕರು, ಸಾಧನೆ, ಗುಣಮಟ್ಟದ ಶಿಕ್ಷಣದ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಅಚ್ಚುಕಟ್ಟಾಗಿ ಭಾಷಣಮಾಡಿ ಗಮನ ಸೆಳೆದರು,

ಕೆಲವು ಕ್ಲಸ್ಟರ್ ನ ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ, ಕೊಲಾಟ, ಪರಿಸರ ಜಾಗೃತಿಯ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರದಿದ್ದವರ ಗಮನ ಸೆಳೆಯಿತು.

ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ಕಲ್ಪೇಶ್, ನಿತಿನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಹುಲ್, ರೀಬಿಲ್ಡ್ ಸಂಸ್ಥೆಯ ಸಂಚಾಲಕ ಅನೀಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೀತಾಂಜಲಿ, ಉತ್ತಪ್ಪ, ಯಲ್ಲಪ್ಪ ಪೂಜಾರಿ, ಜೈಸಿ ಜೋಸೆಫ್, ಕೇಶವಮೂರ್ತಿ, ವಿಶೇಷ ಚೇತನರ ಇಲಾಖೆಯ ಅಧಿಕಾರಿ ಅಜಿತ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶ್, ಶ್ರೀನಿವಾಸ್, ನವೀನ್, ಜೀವನ್, ಪುಷ್ಪ, ವಿಶಾಲಕ್ಷಿ, ಕರುಂಬಯ್ಯ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕ, ಶಿಕ್ಷಕಿಯರು, ಪೋಷಕರು ಹಾಗೂ ಅಧಿಕರಿಗಳು ಉಪಸ್ಥಿತರಿದ್ದರು.

- ಪುತ್ತಮ್ ಪ್ರದೀಪ್