ಮಡಿಕೇರಿ, ಜ. 28: ಪ್ರತಿಯೊಂದು ಗ್ರಾಮಕ್ಕೂ ಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳು ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಿರೋದು ಸ್ಮಶಾನ. ಸ್ಮಶಾನವೊಂದು ಇಲ್ಲದಿದ್ದರೆ ಗ್ರಾಮಸ್ಥರು ಶವಸಂಸ್ಕಾರ ಮಾಡೋಕೆ ಹೆಣಗಾಡಬೇಕಾಗುತ್ತೆ. ಸತ್ತ ನಂತರ ತಮ್ಮವರ ಶವಸಂಸ್ಕಾರ ಮಾಡೋಕು ಜಾಗವಿಲ್ಲದೆ ಪರದಾಡಬೇಕಾಗುತ್ತದೆ. ಆದರೆ ಇದೊಂದು ಗ್ರಾಮದಲ್ಲಿ ಹಿಂದೂ ಸಮಾಜ ಬಾಂಧವರಿಗೆ ಸ್ಮಶಾನದ ಸೌಲಭ್ಯ ಇರಲಿಲ್ಲ. ಸಾಕಷ್ಟು ಬಾರಿ ಸ್ಥಳೀಯ ಆಡಳಿತ ಮಂಡಳಿಯವರಿಗೆ ಮನವಿ ಮಾಡಿದರೂ ಯಾವೊಂದು ಪ್ರಯೋಜನ ಆಗಿರಲಿಲ್ಲ.

ಇದೀಗ ದಾನಿಯೊಬ್ಬರ ನೆರವಿನಿಂದ ಈ ಗ್ರಾಮದಲ್ಲಿ ಅಚ್ಚುಕಟ್ಟಾಗಿ ಸ್ಮಶಾನವೊಂದು ನಿರ್ಮಾಣ ಆಗ್ತಿದೆ..ಸ್ಮಶಾನದ ಮುಂದಿನ ಕಾಮಗಾರಿಗಳಿಗೆ ಜಾಗ ಸಮತಟ್ಟುಗೊಳಿಸಿ ಭೂಮಿಪೂಜೆಯನ್ನೂ ನೆರವೇರಿಸಲಾಗಿದೆ. ಮೂರ್ನಾಡಿನ ಕಾಂತೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಹಿಂದೂ ಸಮಾಜದ ರುದ್ರಭೂಮಿಗಾಗಿ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಾಂತೂರು ಮಾರ್ನಾಡಿನ ನಿವಾಸಿ ಕೆರೆಮನೆ ವಿಜಯಲಕ್ಷ್ಮಿ ಪಾಲಾಕ್ಷ ಮಾನವೀಯತೆ ಮೆರೆದಿರೋ ಮಹಿಳೆ. ತಮ್ಮ ಮಾವನಾದ ಅನಂತ ಪದ್ಮನಾಭ ಅವರ ಕೊನೆಯಾಸೆಯಂತೆ ಹಿಂದೂ ಸಮಾಜದ ಏಳಿಗೆಗಾಗಿ ಅರ್ಧ ಎಕರೆ ಜಾಗವನ್ನು ನೀಡಿದ್ದಾರೆ. ಮಾವನವರ ಆಸೆಯನ್ನು ಈಡೇರಿಸುತ್ತಿರುವುದು ಸಂತಸವನ್ನುಂಟು ಮಾಡುತ್ತಿದೆ ಎನ್ನುತ್ತಾರೆ ವಿಜಂiÀiಲಕ್ಷಿ.

ಸ್ಮಶಾನದ ಜಾಗಕ್ಕೆ ಗುತ್ತಿ ಹಾಕುವ ಕಾರ್ಯವನ್ನು ಶೇಖರ್ ನಿರ್ವಹಿಸಿದರು. ಭೂಮಿಪೂಜೆಯನ್ನು ಕೆರೆಮನೆ ರಾಮಮೂರ್ತಿ ನೆರವೇರಿಸಿದರು. ಸ್ಮಶಾನಕ್ಕೆ ಮಾರ್ಗದ ವ್ಯವಸ್ಥೆಯನ್ನು ಗಣೇಶ್ ನಾಯಕ್ ಮಾಡಿಕೊಟ್ಟಿದ್ದಾರೆ. ಕಡಿಮೆ ಸೌದೆ ಬಳಸಿ ಶವಸಂಸ್ಕಾರ ಮಾಡುವಂತಹ ವ್ಯವಸ್ಥೆಯನ್ನು ಅಳವಡಿಸಲು ಇಲ್ಲಿನ ಹಿಂದೂ ಸಮಾಜ ಬಾಂಧವರು, ಸಾರ್ವಜನಿಕರು ನಿರ್ಧರಿಸಿದ್ದಾರೆ. ಅಲ್ಲದೆ ಬಾವಿ, ಕಾಂಪೌಂಡ್, ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ. ಈಗಾಗಲೇ ಕಾಂತೂರು ಮೂರ್ನಾಡು ಹಿಂದೂ ಸಮಾಜ ರುದ್ರಭೂಮಿ ಟ್ರಸ್ಟ್ ಎಂದು ಮಾಡಲಾಗಿದ್ದು ಟ್ರಸ್ಟ್‍ನಡಿಯಲ್ಲಿ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಾಗುವುದು ಎನ್ನುತ್ತಾರೆ ಪ್ರಮುಖರು.

ಭೂಮಿಪೂಜೆ ಸಂದರ್ಭ ಕೆರೆಮನೆ ಭರತ್ ನಾಯಕ್, ಪುದಿಯೊಕ್ಕಡ ರಮೇಶ್, ಸಂಘದ ಅಧ್ಯಕ್ಷ ಅರುಣ್ ರೈ, ಉಪಾಧ್ಯಕ್ಷ ಮೋಹನ್ ಪೂಜಾರಿ, ಕಾರ್ಯದರ್ಶಿ ಈ.ರಾ. ಸುಬ್ಬಯ್ಯ ಇದ್ದರು.