ಮಡಿಕೇರಿ, ಜ. 28: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಐಮಂಡ ಜಗದೀಶ್ ಅವರ ‘ಕತ್ತಲೆಯ ಕಿರಣ’ ಪುಸ್ತಕದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಉದ್ಘಾಟಿಸಿ ಮಾತನಾಡಿ, ಇದೊಂದು ಅಪರೂಪ ಹಾಗೂ ವಿಶೇಷವಾದ ಕಾರ್ಯಕ್ರಮ. ಮುಂದಿನ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಚಿಂತನೆ ಮಾಡುವ ಕಾರ್ಯಕ್ರಮ.
ಜಿಲ್ಲೆಯಲ್ಲಿ ಬಹಳಷ್ಟು ಜನ ಸಾಹಿತಿಗಳಿದ್ದಾರೆ. ಆದರೆ ಕೆಲವರು ಮಾತ್ರ ಮೌಲ್ಯವರ್ದಿತ ಸಾಹಿತಿಗಳಾಗಿದ್ದಾರೆ. ಪುಸ್ತಕದ ಬಗ್ಗೆ ವಿಮರ್ಶೆ, ಚರ್ಚೆಯಾದಾಗ ಸಾಹಿತ್ಯದ ಮೌಲ್ಯ ಹೆಚ್ಚಾಗುತ್ತದೆ ಎಂದರು.
ಇದೇ ಸಂದರ್ಭ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ‘ಕತ್ತಲೆಯ ಕಿರಣ’ ಪುಸ್ತಕದ ಕುರಿತು ವಿಮರ್ಶೆ ಬರೆದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತೀರ್ಪುಗಾರ ಕಿಗ್ಗಾಲು ಗಿರೀಶ್, ಕಾದಂಬರಿಯಲ್ಲಿ ಪಾತ್ರದ ವೇಗ ಒಂದೇ ತೆರನಾಗಿರಬೇಕು. ಪಾತ್ರಗಳೂ ಕಾದಂಬರಿಗೆ ಪೂರಕವಾಗಿರಬೇಕು. ಭಾಷಾ ಪ್ರಾಬಲ್ಯವಿರಬೇಕು ಎಂದರು.
ಕತ್ತಲೆಯ ಕಿರಣ ಪುಸ್ತಕದ ಲೇಖಕ ಐಮಂಡ ಜಗದೀಶ್ ಮಾತನಾಡಿ, ಪ್ರತಿಯೊಬ್ಬನ ಜೀವನದಲ್ಲೂ ಹಲವಾರು ಸಮಸ್ಯೆಗಳು ಇರುತ್ತದೆ. ಅದನ್ನೆಲ್ಲಾ ಮೆಟ್ಟಿ ನಿಂತು ಬುದ್ಧಿವಂತಿಕೆಯಿಂದ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳು ‘ಕತ್ತಲೆಯ ಕಿರಣ’ ಪುಸ್ತಕ ಓದಿದ ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರಬಂಧ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೌಫಿನಾ ಕೆ.ಎಂ., ದ್ವಿತೀಯ ಸ್ಥಾನವನ್ನು ಸಂಧ್ಯಾ ಎಂ.ಎ., ತೃತೀಯ ಸ್ಥಾನವನ್ನು ಯೋಗಿತ ಎಂ.ಎನ್. ಪಡೆದುಕೊಂಡರು. ನಾಲ್ಕನೇ ಸ್ಥಾನವನ್ನು ಮಂಗಳ ಹೆಚ್.ಎಲ್. ಹಾಗೂ ಪದ್ಮಾವತಿ ಜೆ. ಹಂಚಿಕೊಂಡಿದ್ದಾರೆ. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಡೆಕಲ್ ಸಂತೋಷ್, ತೀರ್ಪುಗಾರ ಅಲ್ಲಾರಂಡ ವಿಠಲ ನಂಜಪ್ಪ, ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕಿ ಉಷಾರಾಣಿ, ಕ.ಸಾ.ಪ. ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಡಾ. ಕೂಡಕಂಡಿ ದಯಾನಂದ ಮತ್ತಿತರರು ಇದ್ದರು.