ಕೂಡಿಗೆ, ಜ. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಬೃಹತ್ ಮೊತ್ತದ ಯೋಜನೆಯು ಕಾರ್ಯಗತವಾಗದೆ ಪ್ರಾರಂಭದ ಪ್ರಕ್ರಿಯೆಯಲ್ಲಿಯೇ ಸ್ಥಗಿತಗೊಂಡಿದೆ. ಈ ಯೋಜನೆಯು ನೀರು ತುಂಬಿದಾಗ ಮಾತ್ರ ಕಾಮಗಾರಿಯನ್ನು ಪ್ರಾರಂಭಿಸುವ ಚಿಂತನೆ ನಡೆದಿತ್ತು. ಆದರೆ, ಇದುವರೆಗೂ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಬರಿ ಭರವಸೆಯಾಗಿಯೇ ಉಳಿದಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಪ್ರಕೃತಿ ವಿಕೋಪದಿಂದ ಆದ ಭಾರೀ ಅನಾಹುತವನ್ನು ಮನಗಂಡು ರಾಜ್ಯ ಸರ್ಕಾರಕ್ಕೆ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ವಿಷಯವಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯ ಅನುಗುಣವಾಗಿ ರಾಜ್ಯ ಮಟ್ಟದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಂದಾಜು ಮೊತ್ತ ರೂ. 130 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳ ಬಹುದೆಂಬ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು.
ಎರಡು ವರ್ಷಗಳಿಂದ ಪ್ರಕೃತಿ ವಿಕೋಪದ ಸಂದರ್ಭ ಹಾರಂಗಿ ಮತ್ತು ಕಾವೇರಿ ನೀರಿನ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಜಲಾವೃತಗೊಂಡು ಭಾರೀ ನಷ್ಟ ಉಂಟಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಡಗಿಗೆ ಭೇಟಿ ನೀಡಿ ಪ್ರಕೃತಿ ವಿಕೋಪದ ಸಮೀಕ್ಷೆಯ ವಿಚಾರವಾಗಿ ಸಮಗ್ರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದಿದ್ದರು. ಹಾರಂಗಿಯ ನೀರಿನ ಸಂಗ್ರಹ ಮಟ್ಟ, ಹರಿಯುವಿಕೆ, ರೈತರಿಗೆ ಉಪಯೋಗವಾಗುತ್ತಿರುವ ನೀರಿನ ಮಟ್ಟದ ವಿವರಗಳನ್ನು ಸಮಗ್ರವಾಗಿ ಪಡೆದು ತೆರಳಿದವರು ಇದುವರೆಗೂ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಯೋಜನೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಸರ್ಕಾರದ ಕಾವೇರಿ ನೀರಾವರಿ ನಿಗಮದ ಉನ್ನತ ಮಟ್ಟದ ಇಂಜಿನಿಯರ್ ಹಾರಂಗಿಗೆ ಭೇಟಿ ನೀಡಿ ಹೂಳೆತ್ತುವ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮತ್ತೊಮ್ಮೆ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಬೇಸಿಗೆಯ ಜನವರಿ ತಿಂಗಳು ಅಂತ್ಯವಾಗುತ್ತಿದ್ದರೂ ಈ ವಿಚಾರದ ಬಗ್ಗೆ ಇಲಾಖೆಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ. ಹೂಳೆತ್ತುವ ಯೋಜನೆಯ ಅಂದಾಜು ಪಟ್ಟಿ ತಯಾರಿಸಲಾಗಿದ್ದರೂ ಇದುವರೆಗೂ ಈ ಪ್ರಕ್ರಿಯೆ ಪ್ರಾರಂಭದ ಸೂಚನೆಯೇ ಕಾಣುತ್ತಿಲ್ಲ. ಇನ್ನು ಮೂರು ತಿಂಗಳು ಕಳೆದಲ್ಲಿ ಯಥಾಸ್ಥಿತಿ ಮಳೆಗಾಲ ಪ್ರಾರಂಭವಾಗಲಿದೆ. ಮಳೆಗಾಲದಲ್ಲಿ ಕಳೆದೆರಡು ವರ್ಷಗಳಿಂದ ಅನುಭವಿಸಿದಂತೆ ಈ ಬಾರಿಯು ಇದರ ಪರಿಣಾಮಕ್ಕೆ ಸಿಲುಕಬಹುದು ಎಂದು ಜನವಲಯದಲ್ಲಿ ಮಾತು ಕೇಳಿ ಬರುತ್ತಿದೆ. ಇತ್ತ ಸರ್ಕಾರ ಇದರ ಬಗ್ಗೆ ಅಧಿವೇಶನದಲ್ಲಿ ಕ್ಷೇತ್ರದ ಶಾಸಕರು ಪ್ರಶ್ನಿಸಿದ್ದರೂ ಇದಕ್ಕೆ ಸಮರ್ಪಕವಾದ ಉತ್ತರ ಬಂದಿರುವುದಿಲ್ಲ. ಆದರೆ, ನೀರಾವರಿ ಸಚಿವರು ಮೌಖಿಕವಾಗಿ ಹೂಳೆತ್ತುವ ಯೋಜನೆಯನ್ನು ಕೈಗೊಳ್ಳುವ ಭರವಸೆ ನೀಡಿರುತ್ತಾರೆ.
ಇದಕ್ಕೆ ಸಂಬಂಧಪಟ್ಟಂತೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಯೋಜನೆಯು ಪ್ರಮುಖವಾಗಿದ್ದು, ಈಗಾಗಲೇ ಸರ್ಕಾರಕ್ಕೆ ಕಾವೇರಿ ನೀರಾವರಿ ನಿಗಮದ ಮೂಲಕ ರೂ. 130 ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ಕ್ರಮಕೈಗೊಳ್ಳುವ ಭರವಸೆ ಸಿಕ್ಕಿದೆ. ಇದರನ್ವಯ ಮುಂದಿನ ದಿನಗಳಲ್ಲಿ ನೀರಾವರಿ ಸಚಿವರನ್ನು ಭೇಟಿ ಮಾಡಿ ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಲಾಗುವುದು. ಅಲ್ಲದೆ, ನೀರಿನ ಪ್ರಮಾಣ ಅಣೆಕಟ್ಟೆಯಲ್ಲಿ ಕಡಿಮೆ ಇರುವುದರಿಂದ ಮಳೆಗಾಲ ಪ್ರಾರಂಭವಾಗುವುದರೊಳಗೆ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ಭರವಸೆ ನೀಡಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ