ಪೌರತ್ವ ಕಾಯ್ದೆ : ಪ್ರಧಾನಿ ಸಮರ್ಥನೆ

ನವದೆಹಲಿ, ಜ. 28: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬಿಜೆಪಿ ನೀಡಿದ್ದ ಆಶ್ವಾಸನೆ ಈಡೇರಿಸಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾರ್ಷಿಕ ಪ್ರಧಾನ ಮಂತ್ರಿಗಳ ಎನ್‍ಸಿಸಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರವೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಸ್ಯೆ ಮುಂದುವರೆದಿತ್ತು. ಕೆಲ ಕುಟುಂಬಗಳು ಮತ್ತು ರಾಜಕೀಯ ಪಕ್ಷಗಳು ಈ ಪ್ರದೇಶದಲ್ಲಿನ ಸಮಸ್ಯೆಗಳನ್ನು ಜೀವಂತವಾಗಿ ಇಟ್ಟುಕೊಂಡಿದ್ದರ ಪರಿಣಾಮವಾಗಿ ಅಲ್ಲಿ ಭಯೋತ್ಪಾದನೆ ಬೆಳೆದಿತ್ತು ಎಂದರು. ಪ್ರಸ್ತುತ ಸರ್ಕಾರವು ದೇಶವನ್ನು ಬಾಧಿಸುತ್ತಿರುವ ದಶಕಗಳಷ್ಟು ಹಳೆಯದಾದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ನೆರೆಯ ಪಾಕಿಸ್ತಾನ ದೇಶವು ಮೂರು ಯುದ್ಧಗಳಲ್ಲಿ ಸೋತಿದೆ. ಆದರೆ ಭಾರತದ ವಿರುದ್ಧ ಶೀತಲ ಸಮರವನ್ನು ಮುಂದುವರೆಸಿದೆ ಎಂದು ವಾಗ್ದಾಳಿ ನಡೆಸಿದರು.

ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹ

ಬಾಗಲಕೋಟೆ, ಜ. 28: ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ಮಹಿಳೆಯರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ನದಿಯಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ. ನೂರಾರು ಜನ ಪ್ರತಿಭಟನಾ ನಿರತ ಮಹಿಳೆಯರು ನದಿಯಲ್ಲೇ ಅರ್ಧ ಭಾಗ ಮುಳುಗಿ ಜಲಸತ್ಯಾಗ್ರಹ ಕೈಗೊಂಡಿದ್ದಾರೆ. 200ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮದ್ಯ ನಿಷೇಧ ಆಂದೋಲನದ ನೇತೃತ್ವದಲ್ಲಿ ನಡೆದ ಜಲಸತ್ಯಾಗ್ರಹಕ್ಕೆ ರಾಜ್ಯದಲ್ಲಿ 51 ನಾನಾ ಸಂಘಟನೆಗಳು ಸಾಥ್ ನೀಡಿವೆ. ನದಿಯಲ್ಲೇ ಮಹಿಳೆಯರು ನಿಂತು ನೀರು ಬೇಕು ಬೀರು ಬೇಡಾ, ಸರಾಯಿ ಬೇಡಾ ಶಿಕ್ಷಣ ಬೇಕು ಎಂದು ಘೋಷಣೆಗಳೊಂದಿಗೆ ಜಲಸತ್ಯಾಗ್ರಹ ಮುಂದುವರಿಸಿದ್ದಾರೆ.

ದಹನ ಪ್ರಕರಣ : 17 ಮಂದಿಗೆ ಜಾಮೀನು

ನವದೆಹಲಿ, ಜ. 28: 2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ಅದಕ್ಕೆ ಪ್ರತೀಕಾರವಾಗಿ 33 ಮಂದಿ ಮುಸಲ್ಮಾನರನ್ನು ಸಜೀವ ದಹನಗೊಳಿಸಿದ ಸರ್ದಾರ್‍ಪುರ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 17 ಮಂದಿ ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಈ ಅಪರಾಧಿಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಿ ಸಮುದಾಯ ಸೇವೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಬಿ.ಆರ್. ಗವೈ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠ ಅಪರಾಧಿಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿ ಒಂದು ಗುಂಪಿಗೆ ಗುಜರಾತ್‍ನಿಂದ ಮಧ್ಯಪ್ರದೇಶದ ಇಂದೋರ್‍ಗೆ ಹೋಗಿ ಅಲ್ಲಿ ನೆಲೆಸುವಂತೆ ಹೇಳಿದೆ. ಮತ್ತೊಂದು ಗುಂಪಿಗೆ ಮಧ್ಯ ಪ್ರದೇಶದಿಂದ ಜಬಲ್‍ಪುರ್‍ಗೆ ಸ್ಥಳಾಂತರಗೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ. ಇಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‍ನ ನ್ಯಾಯಪೀಠ, ವಾರದಲ್ಲಿ 6 ಗಂಟೆಗಳ ಕಾಲ ಅಪರಾಧಿಗಳು ಸಮುದಾಯ ಸೇವೆಯಲ್ಲಿ ನಿರತರಾಗಿ ಪ್ರತಿ ವಾರ ಸ್ಥಳೀಯ ಪೆÇಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ. ನ್ಯಾಯಾಲಯ ವಿಧಿಸಿರುವ ಜಾಮೀನು ಷರತ್ತುಗಳನ್ನು ನಿಷ್ಠೆಯಿಂದ ಅಪರಾಧಿಗಳು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ನೋಡಿಕೊಳ್ಳಲು ಇಂದೋರ್ ಮತ್ತು ಜಬಲ್‍ಪುರದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.

ಕೊರೋನಾ ವೈರಸ್:ಭಾರತೀಯರ ಸ್ಥಳಾಂತರ

ನವದೆಹಲಿ, ಜ. 28: ಚೀನಾದ ಹುಬೈ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಕಂಡು ಬಂದಿರುವುದರಿಂದ ಅಲ್ಲಿನ ಭಾರತೀಯರನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಹುಬೆ ಪ್ರಾಂತ್ಯದಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬೀಜಿಂಗ್ ನಲ್ಲಿರುವ ಭಾರತೀಯ ರಾಯಬಾರಿಗಳು ಚೀನಾ ಸರ್ಕಾರ, ಆಡಳಿತ ಸಂಸ್ಥೆ ಮತ್ತು ಪ್ರಜೆಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಕೊರೋನಾ ವೈರಸ್‍ನಿಂದ ಚೀನಾದಲ್ಲಿ ಮೃತ ಪಟ್ಟವರ ಸಂಖ್ಯೆ 106ಕ್ಕೆ ಏರಿಕೆ ಆಗಿದ್ದು, 1300 ಹೊಸ ಪ್ರಕರಣಗಳು ದೃಢಪಟ್ಟಿವೆ. ಚೀನಾದಿಂದ ಆಗಮಿಸುವ ಪ್ರಯಾಣಿಕರಲ್ಲಿ ಸೋಂಕು ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ. ಕೊರೋನಾ ವೈರಸ್ ಒಂದು ಹೊಸ ರೀತಿಯ ನ್ಯೂಮೊನಿಯಾವಾಗಿದೆ. 2019ರಲ್ಲಿ ಇದನ್ನು ಅಧಿಕೃತವಾಗಿ ಎನ್‍ಸಿಒವಿ ಎಂದು ಕರೆಯಲಾಗುತಿತ್ತು. ಚೀನಾದ ವುಹಾನ್ ಮತ್ತಿತರ 17 ಕಡೆಗಳಲ್ಲಿ ಈ ಸೋಂಕು ಹೆಚ್ಚಾಗಿದೆ. 250 ರಿಂದ 300 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವುಹಾನ್‍ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜೆಎನ್‍ಯು ವಿದ್ಯಾರ್ಥಿ ಶಾರ್ಜೀಲ್ ಬಂಧನ

ಪಾಟ್ನಾ, ಜ. 28: ಶಾಹೀನ್ ಬಾಗ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಬೆಳಕಿಗೆ ಬಂದಿರುವ ವಿವಾದಾತ್ಮಾಕ ಜೆಎನ್‍ಯು ವಿದ್ಯಾರ್ಥಿ ಹಾಗೂ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಜಿಹಾನ್ ಬಾದ್‍ನಲ್ಲಿಂದು ಬಂಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕರಿ ಭಾಷಣದ ಆರೋಪದ ಮೇರೆಗೆ ದೇಶದ್ರೋಹ ಪ್ರಕರಣ ದಾಖಲಿಸಿದ್ದ ದೆಹಲಿ ಪೆÇಲೀಸರು ತಲೆಮರೆಸಿಕೊಂಡಿದ್ದ ಇಮಾಮ್ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಮುಂಬೈ, ದೆಹಲಿ, ಪಾಟ್ನಾ ಮತ್ತಿತರ ಕಡೆಗಳಲ್ಲಿ ದೆಹಲಿ ಪೆÇಲೀಸರ ತಂಡ ಬಹುಹಂತದ ದಾಳಿ ನಡೆಸಿ ಇಮಾಮ್ ಅವರನ್ನು ಹುಡುಕುತ್ತಿದ್ದರು.

ಬಂಡೀಪುರದಲ್ಲಿ ರಜನಿಕಾಂತ್ ಚಿತ್ರೀಕರಣ

ಬೆಂಗಳೂರು, ಜ. 28: ಸೂಪರ್‍ಸ್ಟಾರ್ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್‍ನಲ್ಲಿ ನಿರತರಾಗಿದ್ದಾರೆ. ಇಂದು ಆರು ಗಂಟೆಗಳ ಕಾಲ ಅವರ ಜೊತೆ ಮತ್ತು ಗುರುವಾರ ಇನ್ನೊಬ್ಬ ಸೆಲೆಬ್ರಿಟಿ ಜೊತೆ ಶೂಟಿಂಗ್‍ಗೆ ಇಲ್ಲಿ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತು ನಾಡಿದ್ದು ಗುರುವಾರ 6 ಗಂಟೆಗಳ ಶೂಟಿಂಗ್‍ಗೆ ಸಮಯ ನೀಡಲಾಗಿದೆ. ಇಂದು ರಜನಿಕಾಂತ್ ಮತ್ತು ನಾಡಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗಿಯಾಗಲಿದ್ದಾರೆ ಎಂದರು. ಕೇರಳದ ಸುಲ್ತಾನ್‍ಬತ್ತೆರಿ ಹೆದ್ದಾರಿ, ಮುಲ್ಲೆಹೊಲೆ, ಮದ್ದೂರು ಮತ್ತು ಕಲ್ಕೆರೆ ಅರಣ್ಯ ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. ಪ್ರವಾಸಿಗರು ಬಾರದಿರುವ ಪ್ರದೇಶಗಳನ್ನು ನೋಡಿಕೊಂಡು ಶೂಟಿಂಗ್ ಮಾಡುತ್ತಿದ್ದಾರೆ. ಕರ್ನಾಟಕದ ವನ್ಯಜೀವಿ ಸಂಕುಲಗಳ ಶೂಟಿಂಗ್‍ಗೆ ಸಮಯ ನೀಡಿದಂತೆ ಇದಕ್ಕೆ ಸಹ ನೀಡಲಾಗಿದೆ. ಇದರಿಂದ ಪ್ರವಾಸಿಗರಿಗೆ, ಅರಣ್ಯ ಗಸ್ತು ತಿರುಗುವವರಿಗೆ, ಅಗ್ನಿಶಾಮಕ ಸಿಬ್ಬಂದಿ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ, ಅರಣ್ಯ ಇಲಾಖೆಯ ವಿಶೇಷ ಭದ್ರತೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.