ಸೋಮವಾರಪೇಟೆ, ಜ.28: ಇಲ್ಲಿಗೆ ಸಮೀಪದ ಗರ್ವಾಲೆ ಗ್ರಾಮದಲ್ಲಿರುವ ಭಾರತೀಯ ವಿದ್ಯಾಭವನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸಮನ್ವಯತೆಯಿಂದ ಕೆಲಸ ಮಾಡಿದರೆ ಆ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಿಸಿದರು.
ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರೆತರೆ ಮಾತ್ರ ಜೀವನದಲ್ಲಿ ಸಾಧನೆ ಯನ್ನು ಮಾಡಬಹುದು ಎಂದರು.
ಮುಖ್ಯ ಅತಿಥಿ ತಾಲೂಕು ಸರಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಹೆಚ್.ಎಸ್. ಶಿವಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಹೊರೆಯಾಗಬಾರದು. ಅವರ ಆಯ್ಕೆಯ ವಿಷಯಗಳಿಗೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ನುಡಿದರು.
ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಪಿ.ಕೆ.ಸೋಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಗಂಡ ಸುಭಾಶ್, ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಆಡಳಿತ ಮಂಡಳಿ ಸದಸ್ಯರಾದ ಗೀಜಿಗಂಡ ಕುಶಾಲಪ್ಪ, ಗಣಪತಿ, ಹಿರಿಯರಾದ ಗೀಜಿಗಂಡ ಮಂದಣ್ಣ, ಗೀಜಿಗಂಡ ಕಾಮವ್ವ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಪಥ ಸಂಚಲನ, ಸಾಂಸ್ಕøತಿಕ ಪ್ರದರ್ಶನ ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.