(ಕಳೆದ ಸಂಚಿಕೆಯಿಂದ) ಸೂರ್ಯ ಮುಳುಗುತ್ತಿದ್ದಂತೆಯೇ ಪೂರ್ಣಚಂದ್ರನ ಆಗಮನ ಪ್ರವಾಸಿಗರ ಮನಸೂರೆಗೊಂಡಿತ್ತು. ಭಾರತದ ಉದ್ದಗಲದಿಂದಲೂ ಬಂದು ನೆರೆದಿದ್ದ ಜನರು ಹುಣ್ಣಿಮೆ ಚಂದ್ರನ ಸೊಬಗನ್ನು ಆಸ್ವಾದಿಸಿದರು. ಜೀವನದುದ್ದಕ್ಕೂ ಎಷ್ಟೊ ಜನರು ಹುಣ್ಣಿಮೆ ಚಂದ್ರನನ್ನು ನೋಡಿದ್ದರೂ, ಚಂದ್ರನ ಬೆಳಕಲ್ಲಿ ಹೊಳೆಯುವ ಉಪ್ಪಿನ ಮೇಲೆ ಗಂಡನ ಕೈ ಹಿಡಿದು ನಡೆದಾಡಿದ ಕ್ಷಣಗಳು ಮನಃಪಟಲದಲ್ಲಿ ಅಚ್ಚೊತ್ತಿ ನಿಂತಿದೆ.
ಗುಜರಾತೀ ಹೆಂಗಸರ ಕೈಚಳಕದಿಂದ ತಯಾರಾದ ಹಲವಾರು ಕಸೂತಿ ಬಟ್ಟೆಗಳು, ಹಾರಗಳು, ಕಿವಿಯೋಲೆಗಳು, ರಜಾಯಿಗಳು, ಪರ್ಸ್, ಬ್ಯಾಗ್‍ಗಳು, ಚಪ್ಪಲಿಗಳು, ಒಂದೇ, ಎರಡೇ.. ನೂರಾರು ಸಾಮಾನುಗಳು ಈ ಜಾತ್ರೆಯಲ್ಲಿ ಖರೀದಿಗೆ ಲಭ್ಯವಿದೆ. ಯಾವುದನ್ನು ಖರೀದಿಸುವುದು, ಯಾವುದನ್ನು ಬಿಡುವುದೆಂದು ತೋಚುತ್ತಿರಲಿಲ್ಲ.
ರಾತ್ರಿಯ ಝಗಮಗಿಸುವ ಬೆಳಕಿನಲ್ಲಿ ಟೆಂಟ್‍ಸಿಟಿ ಜನಪದ ನೃತ್ಯಗಳು, ಗರ್ಬಾ ನೃತ್ಯ, ಸಂಗೀತ, ಹೀಗೇ.. ಹಲವಾರು ಮನೋರಂಜನಾ ಕಾರ್ಯಕ್ರಮಗಳ ನಡೆಯುತ್ತಿರುತ್ತದೆ. ಅಲ್ಲದೇ ಗೊಂಬೆಯಾಟಗಳು, ದೊಂಬರಾಟಗಳು, ಎಲ್ಲವೂ ಉಲ್ಲಾಸಕರ ವಾತಾವರಣ ಸೃಷ್ಟಿಸಲು ಸಫಲವಾಗಿದೆ.
ಮರುದಿನ ಹಲವಾರು ಬಸ್‍ಗಳು ನಮ್ಮನ್ನೆಲ್ಲ ‘ಕಾಲಾಡುಂಗರ್’ಗೆ ಕರೆದೊಯ್ಯಲು ಸಿದ್ಧಗೊಂಡಿತ್ತು. ಕಾಲಾಡುಂಗರ್, ಎಂದರೆ ಕಪ್ಪುಬೆಟ್ಟ ಎಂದರ್ಥ ಕಾಲಾಡುಂಗರ್ ಕಛ್ ಪ್ರಾಂತ್ಯದ ಅತೀ ಎತ್ತರದ ಜಾಗ. ಹಳೆಯ ಕಾಲದಲ್ಲಿ ವರ್ತಕರು ಪಾಕಿಸ್ತಾನದಿಂದ ತಮ್ಮ ವ್ಯಾಪಾರ ಮುಗಿಸಿ ತಮ್ಮೂರಿಗೆ ಮರುಳುವಾಗ ಊರು ತಲುಪಿತು ಎಂದು ಅರಿಯಲು ಈ ಬೆಟ್ಟವನ್ನು ಗುರುತಾಗಿಸಿದ್ದರು. ದೂರದಿಂದ ಈ ಬೆಟ್ಟ ಕಪ್ಪಗೆ ಕಾಣುತ್ತಿದ್ದುದ ರಿಂದ ಇದನ್ನು ‘ಕಾಲಾಡುಂಗರ್’ ಎಂದು ಕರೆಯುತ್ತಿದ್ದರು. ಈಗಲೂ ಅದೇ ಹೆಸರು ಉಳಿದುಕೊಂಡಿದೆ. ಇಲ್ಲಿರುವ ಪುರಾತನ ದತ್ತಾತ್ರೇಯ ಗುಡಿಗೆ ಪ್ರದಕ್ಷಿಣೆ ಬಂದು ಮೆಟ್ಟಲೇರುತ್ತಾ ಮೇಲೇರಿದಂತೆ ಪ್ರಕೃತಿಯ ಸುಂದರತೆ ತೆರೆದು ಕೊಳ್ಳುತ್ತಾ ಸಾಗುತ್ತದೆ. ತುತ್ತತುದಿಗೇರುವಾಗ ಸುತ್ತಲೂ ಕಾಣುವ ಬೆಟ್ಟಗಳು, ಆ ಬೆಟ್ಟಗಳ ಮಧ್ಯದಲ್ಲಿ ಕರಗಿ ಹೋಗುವ ಸೂರ್ಯ ಎಲ್ಲವೂ ನಮ್ಮನ್ನು ಪ್ರಾಪಂಚಿಕ ದುಃಖ ದುಮ್ಮಾನಗಳನ್ನು ಮರೆಯುವಂತೆ ಮಾಡುವುದರಲ್ಲಿ ಸಂಶಯವಿಲ್ಲ.
ಪ್ರಕೃತಿಯ ಸುಂದರತೆಯನ್ನು ನೋಡುತ್ತ ಮೈಮರೆತರೆ ಅದೊಂದು ಕಣ್ಣುಮುಚ್ಚಿ ಮಾಡುವ ಧ್ಯಾನಕ್ಕಿಂತಲೂ ಸುಂದರ ಅನುಭೂತಿ ನೀಡುವುದರಲ್ಲಿ ಸಂಶಯವಿಲ್ಲ.
ಈ ಬೆಟ್ಟದ ಮೇಲಿನಿಂದ ಕಣ್ಣಳತೆಯಲ್ಲೇ ಪಾಕಿಸ್ತಾನದ ಗಡಿರೇಖೆಯಿರುವುದರಿಂದ ಆರ್ಮಿ ಪೋಸ್ಟ್ ಕಾರ್ಯನಿರ್ವಹಿಸುತ್ತದೆ. ಇದರಾಚೆ ನಮಗೆ ಪ್ರವೇಶವಿಲ್ಲ.
ಕಾಲಾಡುಂಗರ್ ಮಾರ್ಗದ ಮಧ್ಯದಲ್ಲಿ ‘ಮ್ಯಾಗ್ನೆಟಿಕ್ ಹಿಲ್’ ಇದೆ. ಈ ಜಾಗದಲ್ಲಿ ವಾಹನಗಳು ನ್ಯೂಟ್ರಲ್‍ನಲ್ಲಿ ಕೆಳಗಿಳಿಯುವ ಬದಲು ಮೇಲೇರುತ್ತದೆ. ಎಲ್ಲರೂ ಈ ವಿಸ್ಮಯವನ್ನು ನೋಡಿ ಸಂಭ್ರಮಿಸಿದೆವು. ಇಲ್ಲಿಗೆ ನಮ್ಮ 2 ದಿನಗಳ ರಣೋತ್ಸವದ ಸಂಭ್ರಮ ಮುಗಿದು, ಮರುದಿನ ಭುಜ್ ವಸ್ತುಸಂಗ್ರಹಾಲಯ, ಸ್ವಾಮಿನಾರಾಯಣ ಮಂದಿರವನ್ನು ನೋಡಿಕೊಂಡು ಅಹಮದಾಬಾದ್ ರೈಲನ್ನೇರಿದೆವು. 6 ಗಂಟೆಗಳ ಪ್ರಯಾಣದಲ್ಲಿ ಕಛ್, ರಣೋತ್ಸವ್‍ವನ್ನೇ ಮೆಲುಕು ಹಾಕುತ್ತಾ, ಅನಿಸಿಬಿಟ್ಟಿತು ‘ಕಛ್ ನಹೀಂ ದೇಖಾ ತೋ ಕುಛ್ ನಹೀಂ ದೇಖಾ’ ನಿಜವಾಗಿಯೂ. ವರ್ಷದ 3 ತಿಂಗಳು ಮಾತ್ರ ನಡೆಯುವ ಈ ಉತ್ಸವವನ್ನು ಒಮ್ಮೆ ನೋಡಿ ಸಂತಸಪಡಲೇಬೇಕು.
ಕಳೆದ ವರ್ಷ ಪ್ರಯಾಗ್‍ರಾಜ್-ಕುಂಭಮೇಳದ ಬಗ್ಗೆ ಶಕ್ತಿಯಲ್ಲಿ ಬರೆದಾಗ, ನನ್ನ ಲೇಖನ ಓದಿದ ಹಲವಾರು ಜನ ಕುಂಭಮೇಳಕ್ಕೆ ಭೇಟಿ ಕೊಟ್ಟಿದ್ದನ್ನು. ನೆನೆದಾಗ ಖುಷಿ ಎನಿಸುತ್ತದೆ. ಹಾಗೆಯೇ ಈ ಬಾರಿ ‘ಕಛ್ ರಣೋತ್ಸವ್’ಕ್ಕೆ ಭೇಟಿ ನೀಡುವಿರಲ್ಲಾ?
ಕಳೆದಬಾರಿ ಗುಜರಾತಿಗೆ ಹೋಗಿದ್ದಾಗ, ದ್ವಾರಕಾ, ಸೋಮನಾಥ, ಗೀರ್ ನ್ಯಾಷನಲ್ ಪಾರ್ಕ್ ಎಲ್ಲಾ ನೋಡಿದ್ದೆವು. ಸರ್ದಾರ್ ವಲ್ಲಭ ಭಾಯಿ ಪಟೇಲರ ಮೂರ್ತಿ ನೋಡದೆ ಹಿಂತಿರುಗಲು ಮನಸ್ಸಾಗಲಿಲ್ಲ.
ಬೆಳಿಗ್ಗೆ 9 ಗಂಟೆಗೆ ಅಹಮದಾಬಾದಿನಿಂದ ವಡೋದರಕ್ಕೆ ‘ಸ್ಟಾಚ್ಯೂ ಆಫ್ ಯೂನಿಟಿ’ ನೋಡಲು ಹೊರಟೆವು. 3.30 ಗಂಟೆಗಳ ಪ್ರಯಾಣದ ಬಳಿಕ ದೂರದಿಂದಲೇ ಕಾಣುವ ಅತೀ ಎತ್ತರದ ಪ್ರತಿಮೆ ಕಂಡಾಗ ರೋಮಾಂಚನವಾಯಿತು. ಸುತ್ತಲೂ ಬೆಟ್ಟಗಳು. ನರ್ಮದಾ ನದಿಗೆ ಕಟ್ಟಿದ ಡ್ಯಾಂ ಮಧ್ಯದಲ್ಲಿ ಬೆಟ್ಟಗಳಿಂದಲೂ ಎತ್ತರಕ್ಕೆ ಭಾರತ ಮಾತೆಯ ಹೆಮ್ಮೆಯ ಪುತ್ರ, ಉಕ್ಕಿನ ಮನುಷ್ಯನ ಮೂರ್ತಿ ನೋಡಲು ಹೆಮ್ಮೆ ಎನಿಸುತ್ತದೆ.
182 ಮೀಟರ್ ಎತ್ತರದ ಪ್ರತಿಮೆ ಪ್ರಪಂಚದಲ್ಲಿ ಮೊದಲ ಸ್ಥಾನ ಪಡೆದಿದೆ. ಇದು ನಮಗೆಲ್ಲ ಹೆಮ್ಮೆಯ ಸಂಗತಿ. ಎಲ್.ಅಂಡ್.ಟಿ ಕಂಪನಿಯ ನೇತೃತ್ವದಲ್ಲಿ ನಿರ್ಮಾಣಗೊಂಡ ಉಕ್ಕಿನ ಮನುಷ್ಯನ ಪ್ರತಿಮೆಯನ್ನು ಉಕ್ಕಿನಿಂದಲೇ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದಾರೆ. ರಾತ್ರಿಯಲ್ಲಿ ಸುಂದರ ಬೆಳಕಿನ ಸಂಯೋಜನೆಯೊಂದಿಗೆ ನಡೆಯುವ ಲೇಸರ್ ಶೋ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೊಗುತ್ತದೆ.
ಸಂಜೆಯ ಇಳಿಬಿಸಿಲಿನಲ್ಲಿ ಡ್ಯಾಂ ಬಳಿಗೆ, ಕೆಲವಾರು ಪಾರ್ಕ್‍ಗಳಿಗೆ ನಮ್ಮನ್ನು ಕರೆದೊಯ್ಯಲು ಹಲವಾರು ಬಸ್‍ಗಳು ಕಾರ್ಯನಿರ್ವಹಿಸುತ್ತದೆ. ಎಲ್ಲವನ್ನೂ ನೋಡಿ ಮರೆಯಲಾಗದ ಅನುಭವ ಗಳೊಂದಿಗೆ ನಮ್ಮ ಗೆಳೆಯರಿಂದ ವಿದಾಯ ಕೋರಿ ನಮ್ಮೂರಿಗೆ ಮರಳಿದೆವು. (ಮುಗಿಯಿತು)
?ವೀಣಾ ಪುರುಷೋತ್ತಮ
ಮಡಿಕೇರಿ.