ಮಡಿಕೇರಿ, ಜ. 28: ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆ ಇತ್ತೀಚೆಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕಳೆದ ಬಾರಿ ಸಮಯದ ಕೊರತೆಯಿಂದ ನಡೆಸಲು ಸಾಧ್ಯವಾಗದ ‘ಅಪ್ಪಚ್ಚ ಕವಿ 150ನೇ ಜನ್ಮೋತ್ಸವ ಕಾರ್ಯಕ್ರಮವನ್ನು, ದೆಹಲಿಯಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ದೆಹಲಿ ಕರ್ನಾಟಕ ಸಂಘ, ದೆಹಲಿ ಕೊಡವ ಸಮಾಜ ಮತ್ತು ಜವಹರಲಾಲ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ (ಜೆ.ಎನ್.ಯು) ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಅಕಾಡೆಮಿ ಎರಡು ದಿನಗಳ ಕಾರ್ಯಕ್ರಮ ನಡೆಸಲಿದೆ. ಈ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಡಾ. ಐ.ಮಾ. ಮುತ್ತಣ್ಣ ಅವರ ಶತಮಾನೋತ್ಸವವನ್ನು ನಡೆಸಲಾಗುತ್ತದೆ.

ಡಾ. ಐ.ಮಾ. ಮುತ್ತಣ್ಣ ನಾಡಿನ ಶ್ರೇಷ್ಠ ತ್ರಿಭಾಷಾ ಸಾಹಿತಿಯಾಗಿದ್ದು, ಅವರ ‘ಆತ್ಮಕಥನ’ ಪುಸ್ತಕ ಹೊರತರಲಾಗುವುದು. (ಶತಮಾನೋತ್ಸವ ನೆನಪಿಗೆ). ಅಪ್ಪಚ್ಚ ಕವಿ ಬರೆದ ನಾಲ್ಕು ನಾಟಕಗಳನ್ನು ಡಾ. ಐ.ಮಾ. ಮುತ್ತಣ್ಣ ಕನ್ನಡಕ್ಕೆ ಅನುವಾದಿಸಿದ್ದು, ಇದರ ಮುದ್ರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಸಭೆಯಲ್ಲಿ ಮೇಲಿನ ಪ್ರಸ್ತಾವನೆಗಳನ್ನು ಮಂಡಿಸಿದ್ದು, ಅಕಾಡೆಮಿ ಇದಕ್ಕೆ ಅನುಮೋದಿಸಿದೆ. ಸಭೆಯಲ್ಲಿ ಅಕಾಡೆಮಿ ಸಂಚಾಲಕ ಡಾ. ಸಿದ್ಧಲಿಂಗಯ್ಯ, ಸರೂಜ್‍ಕಾಟ್ಕರ್, ಪ್ರೊ. ಹೆಚ್.ಎಸ್. ಶಿವಪ್ರಕಾಶ್ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.