ಮಡಿಕೇರಿ, ಜ.28 : ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ತರಬೇತಿ ಕೇಂದ್ರದ ವತಿಯಿಂದ ನಗರದ ಬಾಲಕಿಯರ ಕ್ರೀಡಾ ಹಾಸ್ಟೆಲ್‍ಗೆ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ಫೆ. 4 ಮತ್ತು 5 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಾಯಿ ಟರ್ಫ್ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಥ್ಲೆಟಿಕ್ಸ್ ಕ್ರೀಡೆಗೆ ಫೆ. 4 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ 10 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾ, ವಿಭಾಗ ಮಟ್ಟದಲ್ಲಿ ಪದಕ ವಿಜೇತರು, ರಾಜ್ಯ ಹಾಗೂ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಥ್ಲೆಟಿಕ್ಸ್ ಕ್ರೀಡೆಗೆ 12 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾ ಮಟ್ಟದ ಶಾಲಾ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್, ದಸರಾ ಕ್ರೀಡಾಕೂಟ ಹಾಗೂ ಸಿಬಿಎಸ್‍ಇ ಕ್ರೀಡಾಕೂಟದಲ್ಲಿ ಪದಕ ವಿಜೇತರು ಹಾಗೂ ರಾಜ್ಯ ಅಥವಾ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿಯವರಿಂದ, ಕ್ರೀಡಾ ಸಾಧನೆಯ ಸರ್ಟಿಫಿಕೇಟ್, ಜನನ-ಮರಣ ನೋಂದಣಾಧಿಕಾರಿಗಳಿಂದ ಜನ್ಮ ದಿನಾಂಕ ಪ್ರಮಾಣಪತ್ರ, ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಳಾಸ ಧೃಢೀಕರಣಗೊಳಿಸಲು ಪಡಿತರ ಚೀಟಿ ಅಥವಾ ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್‍ನ್ನು ತರುವಂತೆ ಸಾಯಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಬಿ.ಎಸ್.ರಮಾಮಣಿ ಅವರು ತಿಳಿಸಿದ್ದಾರೆ.