ಗೋಣಿಕೊಪ್ಪ ವರದಿ, ಜ. 28: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಣ್ಣು ಪರೀಕ್ಷಾ ಅಭಿಯಾನದ ಫಲವಾಗಿ 2 ಕೋಟಿಗೂ ಹೆಚ್ಚಿನ ರೈತರು ಮಣ್ಣು ಪರೀಕ್ಷೆ ಮಾಡಿಕೊಂಡಿದ್ದು, ನಂತರದ ಸಾಧಕ-ಭಾದಕಗಳ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಧಾರವಾಡ ಯುಎಹೆಚ್‍ಎಸ್‍ನ ಕುಲಪತಿ ಡಾ. ಎಂ.ಬಿ ಚೆಟ್ಟಿ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಆಯೋಜನೆ ಗೊಂಡಿರುವ ಇಂಜಿನಿಯರಿಂಗ್ ದೃಷ್ಠಿಕೋನದಲ್ಲಿ ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನವನ್ನು ಕಾವೇರಿ ಮಾತೆಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣು ಪರೀಕ್ಷೆಯ ನಂತರ ರೈತರು ಅನುಸರಿಸುತ್ತಿರುವ ಕ್ರಮಗಳ ಮಾಹಿತಿ ಸಂಗ್ರಹಿಸಿ ಮಣ್ಣಿನ ಆರೋಗ್ಯವನ್ನು ಕಾಪಾಡುವ ದಿಕ್ಕಿನಲ್ಲಿ ಸಂಶೋಧನೆಗಳನ್ನು ಕೈಗೊಂಡರೆ ಮಾತ್ರ ನೈಸರ್ಗಿಕ ಸಂಪನ್ಮೂಲಗಳ ಸೂಕ್ತ ಬಳಕೆಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ರೈತರು ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರನ್ನು ಬಳಕೆ ಮಾಡಬೇಕು ಎಂಬ ಮಾಹಿತಿಯನ್ನು ತರಬೇತಿ ಮೂಲಕ ನೀಡಬೇಕು. ದೇಶದಲ್ಲಿ ಕೃಷಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲಾಗುತ್ತಿದೆ. ಹೆಚ್ಚಿನ ನೀರು ಬಳಕೆಯಿಂದ ತಾತ್ಕಾಲಿಕವಾಗಿ ಉತ್ತಮ ಇಳುವರಿ ಪಡೆಯಬಹುದು. ಆದರೆ ಭವಿಷ್ಯದಲ್ಲಿ ಮಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದರು.
ಉಪಗ್ರಹ ಆಧಾರಿತ ಹವಾಮಾನ ಮುನ್ಸೂಚನೆ ಕೃಷಿ ಹಾಗು ಅರಣ್ಯ ಸಂರಕ್ಷಣೆಯ ಕ್ಷೇತ್ರದಲ್ಲಿ ಬಳಕೆಯಾದರೆ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ತೆಗೆದುಕೊಳ್ಳುವ ಕ್ರಮಗಳು ಫಲ ನೀಡಲಿದೆ ಎಂದು ಹೇಳಿದರು.
ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಎಸ್ ಶೋಭ
ಶಿವಮೊಗ್ಗ ಯುಎಹೆಚ್‍ಎಸ್ ಮಂಡಳಿ ಸದಸ್ಯ ಡಾ. ವಿ. ವೀರಭದ್ರಯ್ಯ ಮಾತನಾಡಿ, ರೈತರಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡುವ ಮಹತ್ವದ ವಿಷಯದಲ್ಲಿ ತರಬೇತಿ ನೀಡಬೇಕು. ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಮಣ್ಣಿನ ಆರೋಗ್ಯದ ಪಾತ್ರ ಬಹಳ ಮುಖ್ಯವಾಗಿದೆ. ನೀರಿನ ಸೂಕ್ತ ಬಳಕೆ ಕೂಡ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಶಿವಮೊಗ್ಗ ಯುಎಹೆಚೆಸ್ ಕುಲಪತಿ ಡಾ. ಮಂಜುನಾಥ್ ನಾಯಕ್ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ರೈತರು ಪ್ರಿಸೀಸನ್ ಮಾದರಿಯ ಕೃಷಿ ಕೈಗೊಳ್ಳಬೇಕು. ಅಹಾರ ಭದ್ರತಾ ಕಾಯ್ದೆ ಹೊಂದಿರುವ ಏಕೈಕ ರಾಷ್ಟ್ರ ಭಾರತ ಎಂಬುದು ಹೆಮ್ಮೆಯ ವಿಚಾರ. ಆದರೆ, ಬಹಳಷ್ಟು ಜನರು ಅನೀಮಿಯಾದಿಂದ ಬಳಲುತ್ತಿರುವುದು ಕಂಡುಬಂದಿದೆ. ಹಸಿರು ಕ್ರಾಂತಿ ದೇಶದಲ್ಲಿ ಉತ್ತಮ ಫಲಿತಾಂಶ ನೀಡಿದೆ.
ಆದರೆ ಕೆಲವು ತಪ್ಪುಗಳು ಕೂಡ ನಡೆದಿದೆ. ಅದನ್ನು ಸರಿಪಡಿಸುವ ಮೂಲಕ ಅಭಿವೃದ್ದಿ ಸಾಧಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸುವದ ರೊಂದಿಗೆ ರೈತರಿಗೆ ತಂತ್ರಜ್ಞಾನಗಳ ಬಳಕೆ ಕುರಿತು ಮಾಹಿತಿ ನೀಡಿ ಪ್ರೋತ್ಸಾಹಿಸಬೇಕಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ. ಜಿ ಕುಶಾಲಪ್ಪ, ಪ್ರೊ. ರಾಮಕೃಷ್ಣ ಹೆಗ್ಡೆ, ಪ್ರಗತಿಪರ ರೈತ ಎಂ. ಹೆಚ್ ಚಂದ್ರಪ್ಪ, ಧಾರವಾಡ ಯುಎಹೆಚ್‍ಎಸ್ ಅಲುಮ್ನಿ ಸದಸ್ಯ ಡಾ. ಎಂ. ಹೆಚ್. ಕೃಷ್ಣಮೂರ್ತಿ, ಕಾರ್ಯಾಗಾರ ಸಂಚಾಲಕ ಡಾ. ಜಿ.ಎಂ ದೇವಗಿರಿ ಇದ್ದರು.
- ಸುದ್ದಿಮನೆ