ಮಡಿಕೇರಿ, ಜ. 28: ರಾಷ್ಟ್ರದ ಪ್ರಪ್ರಥಮ ಮಹಾನ್ ದಂಡನಾಯಕ, ವೀರ ಸೇನಾನಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ 121ನೇ ಜನ್ಮದಿನಾಚರಣೆಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ವೀರ ಪುತ್ರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಸಕಲ ಗೌರವ ಸಲ್ಲಿಸಿ ವೀರ ಪುತ್ರನ ಸ್ಮರಣೆ ಮಾಡಲಾಯಿತು.ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಜಿಲ್ಲಾಡಳಿತ ಹಾಗೂ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸಹಕಾರದೊಂದಿಗೆ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಆಯೋಜಿತಗೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ (ನಿವೃತ್ತ), ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ನಿವೃತ್ತ ಸೇನಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಸಿ. ಕಾರ್ಯಪ್ಪ ಅವರು, ಜಾತಿ, ಮತ, ಬೇಧಗಳನ್ನು ದೂರವಿರಿಸಿದ್ದ ಫೀ.ಮಾ. ಕಾರ್ಯಪ್ಪ ಅವರು ಎಲ್ಲರೂ ಭಾರತೀಯರು ಎಂಬ ಮನೋಭಾವ ಹೊಂದಿದ್ದವರು. ಎಲ್ಲೇ ಇದ್ದರೂ ಎಂದಿಗೂ ನಾವೆಲ್ಲರೂ ಭಾರತೀಯರಾಗಿ ಬದುಕಬೇಕೆಂದು ಹೇಳಿದರು. ಭಾರತ ಅತ್ಯುತ್ತಮ ರಾಷ್ಟ್ರವಾಗಿದ್ದು, ದೇಶಕ್ಕೆ ಗೌರವ ನೀಡಬೇಕೆಂದರು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಕೊಡಗು ಎಂದಾಕ್ಷಣ ನೆನಪಿಗೆ ಬರುವುದು ಫೀ.ಮಾ. ಕಾರ್ಯಪ್ಪ ಅವರ ಹೆಸರು. ಪ್ರವಾಸಿಗರ ಸ್ವರ್ಗವಾಗಿರುವ ಈ ಸಣ್ಣ ಜಿಲ್ಲೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ ಎಂದರು. ಭಾರತ ದೇಶದಲ್ಲಿ ಕಾರ್ಯಪ್ಪ ಅವರು (ಮೊದಲ ಪುಟದಿಂದ) ಹೆಸರುವಾಸಿ, ಅವರ ಹೆಸರು ಶಾಶ್ವತವಾಗಿ ಎಲ್ಲರಲ್ಲೂ, ಎಲ್ಲಾ ಪೀಳಿಗೆಯರ ಮನಸ್ಸಲ್ಲೂ ಉಳಿಯುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕಾರ್ಯಪ್ಪ ಅವರು ಎಲ್ಲಿ ಹೋದರೂ ಎಲ್ಲರಲ್ಲೂ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನ ಇರಬೇಕು. ಕರ್ತವ್ಯಪ್ರಜ್ಞೆಯೊಂದಿಗೆ ಸಮಯ ಪ್ರಜ್ಞೆ, ಶಿಸ್ತು ಇರಬೇಕು. ಪ್ರಾಮಾಣಿಕತೆ ಇರಬೇಕೆಂದು ಕರೆ ಕೊಡುತ್ತಿದ್ದರು. ರಾಷ್ಟ್ರವನ್ನು ಮಹಾನ್ ದಂಡ ನಾಯಕನಾಗಿ ಮುನ್ನಡೆಸಿದ ಕೀರ್ತಿ ಅವರದ್ದೆಂದು ಹೇಳಿದರು.

ನಿನ್ನೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದ ಸಂದರ್ಭ ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನಾಚರಣೆ ಯನ್ನು ರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಿ ಒತ್ತಡ ಹೇರಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ. ರವಿ ಅವರೂ ಕೂಡ ಈ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಕಾರ್ಯಪ್ಪ ಶಿಸ್ತಿನ ಸಿಪಾಯಿಯಾಗಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಫೀ.ಮಾ. ಕಾರ್ಯಪ್ಪ ಅವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ಫೋರಂನ ಅಧ್ಯಕ್ಷ ಕೆ. ಸುಬ್ಬಯ್ಯ, ಸಂಚಾಲಕ, ಬಿ.ಎ. ನಂಜಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಸ್ವಾಗತಿಸಿದರೆ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆ ಹಾಡಿದರು. ಜ. ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರೆ, ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ರಾಷ್ಟ್ರಗೀತೆ ಹಾಡಿದರು. ಡಿಎಆರ್‍ನ ಎಆರ್‍ಎಸ್‍ಐ ಸಿದ್ದೇಶ್ ನೇತೃತ್ವದ ತಂಡ ಬ್ಯಾಂಡ್ ಬಾರಿಸಿದರೆ, ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ವಂದಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯ ವಿಜೇತರ ವಿವರ ಇಂತಿವೆ.

ಪ್ರಬಂಧ ಸ್ಪರ್ಧೆಯಲ್ಲಿ ಕಳತ್‍ಮಾಡು ಲಯನ್ಸ್ ಪ್ರೌಢಶಾಲೆಯ ಕಾಂಚನ್ ಕಮಲಾಕ್ಷಿ ಸಿ.ಕೆ. (ಪ್ರಥಮ), ನಾಪೋಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ದೀಪ್ನ ದೇವಯ್ಯ ಎ. (ದ್ವಿತೀಯ), ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ಕೃತಿಕ ಬಿಕ್. (ತೃತೀಯ) ಸ್ಥಾನ ಪಡೆದುಕೊಂಡರು.

ಸಮಾಧಾನಕರ ಬಹುಮಾನವನ್ನು ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ರೋಶನ ಜಿ.ಸಿ., ಕಳತ್‍ಮಾಡು ಲಯನ್ಸ್ ಪ್ರೌಢಶಾಲೆಯ ಪೊನ್ನಮ್ಮ ಕೆ.ಎಂ., ಮೂರ್ನಾಡು ಜನನ ಜ್ಯೋತಿ ಶಿಕ್ಷಣ ಸಂಸ್ಥೆಯ ವರ್ಷಿನಿ ಚಂಗಪ್ಪ ಸಿ.ಸಿ. ಅವರು ಪಡೆದುಕೊಂಡರು

ಚಿತ್ರಕಲೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ಶ್ರೇಯ ಮರಿಯಾ ಆಂಟೋನಿ (ಪ್ರಥಮ), ನಾಪೋಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಿ. ತಾನ್ಯ ಅಯ್ಯಪ್ಪ (ದ್ವಿತೀಯ), ಮಡಿಕೇರಿಯ ಜಿ.ಎಂ.ಪಿ. ಪ್ರೌಢಶಾಲೆಯ ವಿನಯ್ ಎನ್. (ತೃತೀಯ) ಸ್ಥಾನ ಪಡೆದುಕೊಂಡರು.

ಸಮಾಧಾನಕರ ಬಹುಮಾನವನ್ನು ವೀರಾಜಪೇಟೆ ತ್ರಿವೇಣಿ ಶಾಲೆಯ ಸಿ.ಪಿ.ತುಶ್ಯಂತ್, ಚೇರಂಬಾಣೆ ಶ್ರೀ ರಾಜೇಶ್ವರಿ ಪ್ರೌಢಶಾಲೆಯ ಕುಶನ್ ಎ.ಎಲ್. ಅವರು ಪಡೆದುಕೊಂಡರು.

ದೇಶ ಕಂಡ ಅಪ್ರತಿಮ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ವಿಚಾರಧಾರೆ ಹಾಗೂ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೂಶ್ ಪೂವಯ್ಯ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳವಾರ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 121ನೇ ಜನ್ಮದಿನ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ, ವ್ಯಾಂಡಮ್ ಎಂಟರ್‍ಪ್ರೈಸಸ್‍ನ ಮಾಲೀಕ ದಾಮೋದರ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಾದ ಸಿ.ಡಿ. ಕಾಳಪ್ಪ, ಶಾಲೆಯ ಪ್ರಾಂಶುಪಾಲೆ ಸರಸ್ವತಿ ಬಿ.ಎಂ, ಆಡಳಿತಾಧಿಕಾರಿಗಳಾದ ಎನ್.ಎ. ಪೊನ್ನಮ್ಮ ಮತ್ತು ಕೆ.ಟಿ. ಮುತ್ತಪ್ಪ ಇತರರು ಇದ್ದರು.