ಮಡಿಕೇರಿ, ಜ.28 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಧರ್ಮ ಆಧಾರಿತವಾಗಿದೆ ಎಂದು ಆರೋಪಿಸಿರುವ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ಕಾನೂನುಗಳು ಮಾನವೀಯತೆಯ ಆಧಾರದಲ್ಲಿ ರಚನೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ಕಾಯ್ದೆ ಮತ್ತು ಪೌರತ್ವ ನೋಂದಣಿಗೆ ನಮ್ಮ ವಿರೋಧವಿಲ್ಲ, ಆದರೆ ಅದಕ್ಕಾಗಿ ಮಾಡಿರುವ ತಿದ್ದುಪಡಿಯ ಬಗ್ಗೆ ನಮ್ಮ ಆಕ್ಷೇಪವಿದೆ ಎಂದು ಸ್ಪಷ್ಟಪಡಿಸಿದರು. ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಜ.30ರವರೆಗೆ “ಸಂವಿಧಾನ ಉಳಿಸಿ, ಪೌರತ್ವ ರಕ್ಷಿಸಿ” ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪೌರತ್ವ
ಪೌರತ್ವ ತಿದ್ದುಪಡಿ ಕಾಯ್ದೆಯ ಅನ್ವಯ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಗಳಲ್ಲಿ ಕಿರುಕುಳಕ್ಕೆ ಒಳಗಾಗಿ, ಭಾರತಕ್ಕೆ ಬರುವ ಹಿಂದೂ ಸೇರಿದಂತೆ ಆರು ಸಮುದಾಯಗಳಿಗೆ ಪೌರತ್ವ ನೀಡಲು ಉದ್ದೇಶಿಸಲಾಗಿದೆ. ಆದರೆ, ವಿಶ್ವದ ಇನ್ನಿತರ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ ಬರುವವರಿಗೆ ಪೌರತ್ವ ನೀಡಲು ಇದರಲ್ಲಿ ಅವಕಾಶವಿಲ್ಲ. ಅಲ್ಲದೆ, 2014ರ ಡಿ.31 ನ್ನು ಅಂತಿಮ ದಿನವೆಂದು ಘೋಷಿಸಿ ರುವುದರಿಂದ ಆ ನಂತರ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ನೀಡಲು ಅವಕಾಶ ಇರುವುದಿಲ್ಲ. ಇದೇ ಕಾರಣಕ್ಕೆ ಕಾಯ್ದೆಯ ಬಗ್ಗೆ ದೇಶದ ಜನರಲ್ಲಿ ಸಂಶಯ ಮೂಡಿದೆ ಎಂದು ತಾಹೀರ್ ಹುಸೇನ್ ಆರೋಪಿಸಿದರು.
ಕೇಂದ್ರ ಸೂಚಿಸಿರುವ ಅಂತಿಮ ದಿನಾಂಕವೇ ಒಂದು ಹುನ್ನಾರ ವಾಗಿದ್ದು, ಈ ಹಿಂದೆ ಅಸ್ಸಾಂ ರಾಜ್ಯದಲ್ಲಿ ನಡೆದ ಎನ್‍ಆರ್‍ಸಿಯಡಿ ದಾಖಲೆಗಳಿಲ್ಲದ 19 ಲಕ್ಷ ಜನರಲ್ಲಿ 13 ಲಕ್ಷ ಹಿಂದುಗಳೆ ಇದ್ದಾರೆ. ಇವರಿಗೆ ಪೌರತ್ವವನ್ನು ನೀಡುವ ಸಲುವಾಗಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ ಯಷ್ಟೆ. ಪ್ರಸ್ತುತ ಕೇವಲ 3.50 ಕೋಟಿ ಜನಸಂಖ್ಯೆ ಇರುವ ಅಸ್ಸಾಂ ರಾಜ್ಯವೊಂದರಲ್ಲೆ ಇಷ್ಟೊಂದು ಪ್ರಮಾಣದ ಜನರು ದಾಖಲೆಗಳಿಂದ ವಂಚಿತ ರಾಗಿರುವಾಗ, ಈ ಕಾಯ್ದೆಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸಿದಲ್ಲಿ ಕೋಟ್ಯಂತರ ಮಂದಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದರ ಭಾಗವಾಗಿ ಕೊಡಗಿನಲ್ಲಿ ಈಗಾಗಲೆ ಮನೆ ಮನೆ ಭೇಟಿ ಆರಂಭಿಸಲಾಗಿದ್ದು, ತಾ.30 ರಂದು ಮಡಿಕೇರಿಯ ಗಾಂಧಿ ಮಂಟಪದ ಬಳಿ ಪಕ್ಷದ ವತಿಯಿಂದ ಸತ್ಯಾಗ್ರಹ ನಡೆಸಲಾಗುವುದು ಎಂದು ತಾಹಿರ್ ಹುಸೇನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಕಲ್ಲರ್ಪೆ, ಜಿಲ್ಲಾ ಕಾರ್ಯದರ್ಶಿ ಎ.ಎಂ.ಅರ್ಶದ್, ಸದಸ್ಯರಾದ ಅಬ್ದುಲ್ ರವೂಫ್ ಹಾಗೂ ಕೆ.ಪಿ.ಹನೀಫ್ ಉಪಸ್ಥಿತರಿದ್ದರು.