ವೀರಾಜಪೇಟೆ, ಜ. 24: ವೀರಾಜಪೇಟೆ ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ವಿಳಂಬ ಸೇರಿದಂತೆ ಅನೇಕ ನ್ಯೂನತೆಗಳಿದ್ದು ಇವುಗಳನ್ನು ಹಂತ ಹಂತವಾಗಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆಗೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದಲ್ಲಿ ರೂ. 87 ಲಕ್ಷ ವೆಚ್ಚದಲ್ಲಿ ಪನ್ನÀಂಗಾಲತ್ತಮ್ಮೆ ದೇವಾಲಯದ ವರೆಗಿನ ಕಾಮಗಾರಿ ಪೂರ್ಣಗೊಂಡ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಈ ಹಿಂದೆಯೂ ಬಿಜೆಪಿ ಸರಕಾರವಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳು ಆಗಿದ್ದವು. ಮುಂದೆಯೂ ಅದೇ ರೀತಿ ಜನಪರ ಅಗತ್ಯ ಕಾಮಗಾರಿಗೆ ಸರಕಾರ ಸ್ಪಂದಿಸಲಿದೆ. ಮಳೆ ಹಾನಿ ಪರಿಹಾರವಾಗಿ ಎಲ್ಲರಿಗೂ ಪರಿಹಾರ ದೊರೆಯಲಿದೆ. ಹಿಂದಿನ ಸರಕಾರ ಕೈಗೊಂಡಿದ್ದ ಸಾಲ ಮನ್ನಾ ಯೋಜನೆಯನ್ನು ಈ ಸರಕಾರವು ಮುಂದುವರೆಸಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿಸುಬ್ರಮಣಿ ಮಾತನಾಡಿ, ಅರಮೇರಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗೆ ರೂ. 40 ಲಕ್ಷ, ಚಾಮಿಯಾಲ ರಸ್ತೆಗೆ ರೂ. 5 ಲಕ್ಷ, ಮೈತಾಡಿ, ಮಲ್ಲಂಬಟ್ಟಿ ದೇವಣಗೇರಿ ರಸ್ತೆಗೆ ರೂ. 5 ಲಕ್ಷ, ಬೆಳ್ಳರಿಮಾಡು ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷ, ಪಾಲೇಕಂಡ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ, ಮೈತಾಡಿ ಕಾರ್ಗಿಲ್ ಕಾವೇರಪ್ಪ ರಸ್ತೆಗೆ ರೂ. 5 ಲಕ್ಷ, ಮೈತಾಡಿ ದವಸ ಭಂಡಾರ ರಸ್ತೆ ರೂ. 10 ಲಕ್ಷ, ಅರಮೇರಿ ಕಾಲೋನಿಯಿಂದ ಭಗವತಿ ದೇವಾಲಯದ ರಸ್ತೆಗೆ ರೂ. 3 ಲಕ್ಷ, ಬೆಪ್ಪುನಾಡು ಭಗವತಿ ರಸ್ತೆ ಅಭಿವೃದ್ಧಿಗೆ ರೂ. 3 ಲಕ್ಷ, ಪೂಳಂಡ ಕುಟುಂಬದ ಐನ್ ಮನೆ ರಸ್ತೆಗೆ ರೂ. 1.65 ಲಕ್ಷ, ಮೈತಾಡಿ ಮಂದಲತಮ್ಮ ದೇವಾಲಯ ರಸ್ತೆಗೆ ರೂ. 3.08 ಲಕ್ಷ, ಮೈತಾಡಿ ಉಲುಗುಂದ ದೇವಾಲಯದ ರಸ್ತೆಗೆ ರೂ. 2.20 ಲಕ್ಷ, ಬೋಯಿಕೇರಿ ಜಪ್ಪೆರ ಗುಡ್ಡುಕುಟುಂಬಸ್ಥರ ಮನೆ ರಸ್ತೆಗೆ ರೂ. 1.65 ಲಕ್ಷ, ಬೋಯಿಕೇರಿಯ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ರೂ. 1 ಲಕ್ಷ, ಕಟ್ಟೆರ ರಾಜಪ್ಪ ಮನೆಗೆ ಹೋಗುವ ರಸ್ತೆಯ ಮೋರಿಗೆ ರೂ. 50 ಸಾವಿರ, ಕದನೂರು ಮೈತಾಡಿ ಗ್ರಾಮಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ರೂ. 100 ಲಕ್ಷ ಸೇರಿ ರೂ. 196.08 ಲಕ್ಷ ರೂ.ಗಳ ಅಭಿವೃದ್ಧಿ ಕೆಲಸ ನಡೆಯಲಿದೆ ಎಂದರು.
ಈ ಸಂದರ್ಭ ಆರ್.ಎಂ.ಸಿ. ನಾಮ ನಿರ್ದೇಶಿತ ಸದಸ್ಯ ಕುಂಬೇರ ಗಣೇಶ್, ಕೇಂದ್ರ ಸಹಕಾರ ಬ್ಯಾಂಕ್ ಸದಸ್ಯ ಪಟ್ರಪಂಡ ರಘು ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಕಟ್ಟೆರ ದೇವಕ್ಕಿ, ಸ್ಥಳೀಯರಾದ ಕುಂಬೇಯಂಡ ಸುರೇಶ್ ಮತ್ತಿತರ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.