ಸೋಮವಾರಪೇಟೆ,ಜ.28: ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನವನ್ನು ಆಚರಿಸಲಾಯಿತು.

ದೇಶದ ಸೈನ್ಯದಲ್ಲಿಯೇ ವಿಶಿಷ್ಟ ಛಾಪು ಮೂಡಿಸಿದ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಮಾಜೀ ಸೈನಿಕರು ಹಾಗೂ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಜೈಜವಾನ್ ಮಾಜೀ ಸೈನಿಕರ ಸಂಘದ ಗೌರವಾಧ್ಯಕ್ಷ ಮೇಜರ್ ಮಂದಣ್ಣ, ಶಿಸ್ತಿಗೆ ಮತ್ತೊಂದು ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ತಮ್ಮ ಕರ್ತವ್ಯ ಸಂದರ್ಭ ಹಾಗೂ ನಿವೃತ್ತ ಜೀವನದಲ್ಲೂ ಶಿಸ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಅವರ ಜೀವನವೇ ಎಲ್ಲರಿಗೂ ಸ್ಪೂರ್ತಿಯಾಗಬೇಕು. ಇಂದಿನ ಯುವ ಜನಾಂಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದರು.

ತಾವು ಸೈನಿಕ ಸೇವೆಯಲ್ಲಿದ್ದ ಸಂದರ್ಭ ಕಾರ್ಯಪ್ಪ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ ಮೇಜರ್ ಮಂದಣ್ಣ ಅವರು, ಸಮಯ ಪ್ರಜ್ಞೆಯನ್ನು ರೂಢಿಸಿಕೊಂಡಿದ್ದ ಏಕೈಕ ವ್ಯಕ್ತಿಯಾಗಿ ಕಾರ್ಯಪ್ಪ ಅವರು ಜೀವನ ಸಾಗಿಸಿದರು. ಪಾಕಿಸ್ತಾನದ ಸೈನ್ಯ, ಸ್ವತಃ ಕಾರ್ಯಪ್ಪ ಅವರ ಮಗನನ್ನು ಬಂಧಿಸಿ, ಫೀಲ್ಡ್ ಮಾರ್ಷಲ್ ಅವರಿಗೆ ಕರೆ ಮಾಡಿದ ಸಂದರ್ಭ, ಎಲ್ಲ ಸೈನಿಕರ ರೀತಿಯಲ್ಲಿಯೇ ತಮ್ಮ ಮಗನನ್ನೂ ನಡೆಸಿಕೊಳ್ಳುವಂತೆ ಮರು ಉತ್ತರ ನೀಡಿದ್ದರು. ಅಂತಹ ಧೀಮಂತ ವ್ಯಕ್ತಿತ್ವ ಕಾರ್ಯಪ್ಪ ಅವರಲ್ಲಿತ್ತು ಎಂದು ಸ್ಮರಿಸಿದರು.

ಈ ಸಂದರ್ಭ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಸುಕುಮಾರ್, ಪದಾಧಿಕಾರಿಗಳಾದ ಮಾಚಯ್ಯ, ಕಾರ್ಯಪ್ಪ, ತಮ್ಮಣ್ಣ, ರಾಮಪ್ಪ, ಶೇಷಾದ್ರಿ, ಪೂವಯ್ಯ, ಕೆಂಪಯ್ಯ, ಪ್ರಮುಖರಾದ ಭಾಸ್ಕರ್, ದಿವ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.