ಪಾಲಿಬೆಟ್ಟ, ಜ. 28: ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸು- ಕರುವನ್ನು ಹಾಡಹಗಲೇ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಪಾಲಿಬೆಟ್ಟ ಸಮೀಪ ಅಬ್ಬೂರು ಗ್ರಾಮದಲ್ಲಿ ನಡೆದಿದ್ದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೆ ದಿಢೀರ್ ಪ್ರತಿಭಟನೆ ನಡೆಸಿದರು.ತೆಕ್ಕಡ ಶ್ರೀನಿವಾಸ್ ಎಂಬವರಿಗೆ ಸೇರಿದ ಹಸು ದೇವಯ್ಯ ಎಂಬವರಿಗೆ ಸೇರಿದ ಕರುವನ್ನು ಬೆಳಗ್ಗೆ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ದಾಳಿ ಮಾಡಿ ಹಸು ಹಾಗೂ ಕರುವನ್ನು ಕೊಂದು ಹಾಕಿದೆಹಸುವಿನ ಕಿರುಚಾಟ ಕೇಳಿ ಸ್ಥಳಕ್ಕೆ ತೆರಳಿದ ಸಂದರ್ಭ ಹುಲಿ ಪರಾರಿಯಾಗಿದ್ದು ವಿಷಯ ತಿಳಿದ ಗ್ರಾಮಸ್ಥರು ಭಯಭೀತರಾಗಿ ಸ್ಥಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕೆಂದು ಒತ್ತಾಯಿಸಿದರು. (ಮೊದಲ ಪುಟದಿಂದ) ಅರಣ್ಯಾಧಿಕಾರಿ ಶಿವಾನಂದ ಹಾಗೂ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಮೇಲಧಿಕಾರಿಗಳು ಬರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಕ್ಷಣ ಕ್ಯಾಮೆರಾ ಅಳವಡಿಸಿ ಹುಲಿ ಚಲನವಲನ ಪತ್ತೆ ಹಚ್ಚುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮೇಕೇರಿರ ಅರುಣ್, ಪ್ರಮುಖರಾದ ಬಬ್ಬು ಉತ್ತಪ್ಪ, ಅಶೋಕ್, ವಿಠ್ಠಲ್, ಕುಮಾರ್ ಸೇರಿದಂತೆ ಮತ್ತಿತರರು ಇದ್ದರು. - ಪುತ್ರಂ ಪ್ರದೀಪ್