ಪ್ರಾಚೀನ ಕಾಲದಲ್ಲಿ ಗ್ರೀಕರು ಭರ್ಜಿಯನ್ನು ಮುಖ್ಯ ಆಯುಧವನ್ನಾಗಿ ಉಪಯೋಗಿಸುತ್ತಿದ್ದರು. ಅದಕ್ಕಾಗಿಯೇ ಇದನ್ನು ಭಲ್ಲೆ ಎಂದೂ ಎಸೆತವನ್ನು ಭಲ್ಲೆ ಎಸೆತವೆಂದು ಕರೆದರು. ಆದಿ ಕಾಲದ ಮಾನವನು ಲೋಹಗಳ ಉಪಯೋಗವನ್ನು ಅರಿತ ನಂತರ ಭಲ್ಲೆಯನ್ನು ಪ್ರಾಣಿಗಳನ್ನು ಬೇಟೆಯಾಡಲು ಪ್ರಮುಖ ಅಸ್ತ್ರವಾಗಿ ಬಳಸುತ್ತಿದ್ದರು. ಕ್ರಿ.ಪೂ. 708ರಲ್ಲಿ ಪೆಂಟಥ್ಲಾನ್ ಕ್ರೀಡೆಯಲ್ಲಿ ಭರ್ಜಿ ಎಸೆತವಿತ್ತು. ಜಾವೆಲಿನ್ ಎಸೆತವೆಂದು ಇಂಗ್ಲೀಷ್‍ನಲ್ಲಿ ಕರೆಯಲಾಗುತ್ತದೆ.

ಈ ಎಸೆತಕ್ಕೆ ಓಡುವ ಹಾದಿಬೇಕಿದ್ದು (ರನ್‍ವೇ) ಇದು ಮೂರು ಭಾಗಗಳನ್ನು ಹೊಂದಿರುತ್ತದೆ. ತುದಿ, ಕಾಂಡ, ಹಗ್ಗದ ತುದಿ, ಹಗ್ಗದ ಹಿಡಿತವು ಒಂದೇ ದಪ್ಪವನ್ನು (ನಮೂನೆಯನ್ನು) ಹೊಂದಿರಬೇಕು. ಹುರಿಯು ಜಾವಲಿನ್‍ನ ಗುರುತ್ವಾಕರ್ಷಣ ಮಧ್ಯ ಬಿಂದುವನ್ನು ಮುಟ್ಟಿರುತ್ತದೆ. ಕಾಂಡ ಸಂಪೂರ್ಣವಾಗಿ ಮಧ್ಯಭಾಗದ ಕೊಳವೆಯಾಕಾರದಲ್ಲಿ ಮತ್ತು ಅದರ ಹಿಂದಿನ ತುದಿ ಮತ್ತು ಮುಂದಿನ ತುದಿ ಚೂಪಾದ ಆಕೃತಿ ಹೊಂದಿರುವದು ಕಾಂಡವನ್ನು ಸಂಪೂರ್ಣವಾಗಿ ಲೋಹದಿಂದ ತಯಾರಿಸಿದ್ದು, ಚೂಪಾದ ತುದಿಯನ್ನು ಹೊಂದಿರುವಂತಹ ಲೋಹದ ತಲೆಗೆ ಬಿಗಿಯಾಗಿ ಸ್ಥಿರ ಗೊಳಿಸಿರುತ್ತಾರೆ. ಜಾವನಿಲ್ ಎಸೆಯುವದು ಒಂದು ಕಲೆ.

ಓಟದ ಹಾದಿಯಲ್ಲಿ ‘ರನ್‍ವೇ’ಯಲ್ಲಿ ಈಟಿಯೊಂದಿಗೆ ಓಡಿ ಬಂದು ಗೆರೆಯ ಬಳಿಯಿಂದ ಅತೀ ದೂರ ಎಸೆಯುವ ಕಲೆಗೆ ಕಠಿಣ ಅಭ್ಯಾಸ, ತರಬೇತಿ, ಜಾಣ್ಮೆ, ಕೌಶಲ್ಯಗಳು, ಪ್ರತಿಭೆ ಇರಬೇಕು. ಅಥ್ಲೆಟಿಕ್ಸ್‍ನಲ್ಲಿ ಬರುವ ಭಲ್ಲೆ ಎಸೆತ ಒಲಿಂಪಿಕ್ಸ್‍ನಲ್ಲಿ ಒಂದು ಆಕರ್ಷಕ ಕ್ರೀಡೆಯೂ ಹೌದು. ಈ ಸ್ಪರ್ಧೆಯಲ್ಲಿ ಪ್ರತಿಯೊಂದು ದೇಶವು ಪದಕಗಳ ಬೇಟೆಗಾಗಿ ಶತಪ್ರಯತ್ನವನ್ನು ಮಾಡುತ್ತಿರುತ್ತೇವೆ. ಇಂತಹ ರೋಚಕ ಇತಿಹಾಸವುಳ್ಳ ಭರ್ಜಿ ಎಸೆತ ಸ್ಪರ್ಧೆಯಲ್ಲಿ ಭಾರತದ ಜಝಾರಿಯಾ ತನ್ನ ಒಂಟಿ ಕೈಯಲ್ಲಿ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಭರ್ಜಿ ಎಸೆತದ ಸ್ಪರ್ಧೆಗಳಲ್ಲಿ ಅನೇಕ ಪದಕಗಳನ್ನು ಗಿಟ್ಟಿಸಿಕೊಂಡು ಸಾಧನೆಗಳನ್ನು ಮಾಡಿರುತ್ತಾರೆ.

ಛಲವೇ ಬಲವೆಂಬ ಮಂತ್ರದೊಡನೆ ಭರ್ಜಿ ಎಸೆತದ ಅಖಾಡಕ್ಕೆ ದುಮುಕಿದ ಜಝಾರಿಯಾ ಪ್ಯಾರಾಥ್ಲೀಟ್ ಇಟ್ಟ ದಿಟ್ಟ ಗುರಿಯನ್ನು ಸಾಧಿಸಿದ ಧೀರ. ದೇವೇಂದ್ರ ಜಝಾರಿಯಾ ರಿಯೋ ಒಲಿಂಪಿಕ್ಸ್‍ನಲ್ಲಿ ಐತಿಹಾಸಿಕ ಸ್ವರ್ಣ ಪದಕ ಗೆದ್ದು, ಖೇಲ್ ರತ್ನ ಪ್ರಶಸ್ತಿಯನ್ನು ಗಳಿಸಿ ಕೊಂಡಿದ್ದು ಒಂದು ಹೆಮ್ಮೆಯ ಸಾಧನೆ. ಇದೀಗ 36 ವರ್ಷದ ದೇವೇಂದ್ರ ಜಝಾರಿಯಾ ರಿಯೋ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಎಫ್ 46 ಜಾವೆಲಿನ್ ಥ್ರೋ ವಿಭಾಗದ ಫೈನಲ್‍ನಲ್ಲಿ 63.97 ಮೀಟರ್ ದೂರ ಎಸೆದು ತಮ್ಮದೇ ಆದ ವಿಶ್ವದಾಖಲೆ ನಿರ್ವಹಣೆಯನ್ನು ಉತ್ತಮ ಪಡಿಸಿಕೊಳ್ಳುವ ಮೂಲಕ ಸ್ವರ್ಣ ಗೆದ್ದ ಸಾಧನೆ ಮಾಡಿ ಪ್ಯಾರಾಒಲಿಂಪಿಕ್ಸ್‍ನಲ್ಲಿ ಎರಡು ಸ್ವರ್ಣಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನಿಸಿಕೊಂಡರು. 2004ರ ಅಥೆನ್ಸ್ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಇದೇ ವಿಭಾಗದಲ್ಲಿ 62.15 ಮೀಟರ್ ದೂರ ಜಾವೆಲಿನ್ ಎಸೆದು ವಿಶ್ವದಾಖಲೆಯೊಂದಿಗೆ ಸ್ವರ್ಣ ಜಯಿಸಿದ್ದು ಹಿಂದಿನ ದಾಖಲೆ.

ವಿದ್ಯುತ್‍ಶಾಖ್‍ನ ಆಘಾತ : ರಾಜಸ್ತಾನದ ಮರು ಜಿಲ್ಲೆಯ ದೇವೇಂದ್ರ ಜಝಾರಿಯಾ, 8ನೇ ವಯಸ್ಸಿನಲ್ಲಿ ಮರ ಹತ್ತುವ ಸಂದರ್ಭ 11 ಸಾವಿರ ವೋಲ್ಟ್‍ನ ವಿದ್ಯುತ್ ತಂತಿ ತಗುಲಿಸಿಕೊಂಡು ಭಾರೀ ಶಾಕ್‍ನ ಆಘಾತಕ್ಕೆ ಒಳಗಾಗಿ ಒಂದು ಕೈಯನ್ನೇ ಕಳೆದುಕೊಂಡರು. ವೈದ್ಯರ ಪರಿಶ್ರಮದ ಚಿಕಿತ್ಸೆಯ ನಂತರವು ಅವರ ಎಡಗೈಯನ್ನು ಕತ್ತರಿಸದೇ ವಿಧಿ ಇರಲಿಲ್ಲ. ಆದರೂ ಎದೆಗುಂದದ ಜಝಾರಿಯಾ ಅದನ್ನು ಲೆಕ್ಕಿಸದೆ ತನ್ನ ಕ್ರೀಡಾ ಪ್ರೀತಿ, ಸ್ಫೂರ್ತಿಯನ್ನು ತುಂಬಿಕೊಂಡು, ಕ್ರೀಡಾಭ್ಯಾಸದಲ್ಲಿ ನಿರತರಾದರು. ಸಾಧಿಸಬೇಕೆಂಬ ಛಲ ಅವರಲ್ಲಿ ಹೆಡೆ ಬಿಚ್ಚಿತ್ತು.

1997ರಲ್ಲಿ ಶಾಲಾ ಕ್ರೀಡಾಕೂಟದ ದಿನ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕøತ ಕೋಚ್ ಆರ್.ಡಿ. ಸಿಂಗ್ ದೇವೇಂದ್ರರ ನಿರ್ವಹಣೆಯನ್ನು ಗಮನಿಸಿ, ತರಬೇತಿ ನೀಡಿದರು. ಅಥೆನ್ಸ್ ಪ್ಯಾರಾಒಲಿಂಪಿಕ್ಸ್‍ನಲ್ಲಿ ಸ್ವರ್ಣಕ್ಕೆ ಕೊರಳೊಡ್ಡಿದ ಇವರ ಅದ್ಭುತ ಸಾಧನೆಗೆ 2004ರಲ್ಲಿ ಅರ್ಜುನ ಪ್ರಶಸ್ತಿ ಗೌರವ 2012ರಲ್ಲಿ ಪದ್ಮಶ್ರೀ ಪಡೆದರು. ಈ ಗೌರವ ಪಡೆದ ಮೊದಲ ಪ್ಯಾರಾ ಒಲಿಂಪಿಯನ್ ಎನ್ನಿಸಿದರು. 2013ರಲ್ಲಿ ಲ್ಯಾನ್‍ನಲ್ಲಿ ನಡೆದ ಐಸಿಸಿ ಅಥ್ಲೆಟಿಕ್ಸ್ ವಿಶ್ವಚಾಂಪಿಯನ್‍ಷಿಪ್‍ನಲ್ಲಿ ಸ್ವರ್ಣ ಪದಕದ ಸಾಧನೆ ಮಾಡಿದ್ದರು. ಸಧ್ಯ ವಿಶ್ವ ರ್ಯಾಂಕಿಂಗ್‍ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದ ಉದ್ಯೋಗಿಯಾಗಿರುವ ದೇವೇಂದ್ರ ಮಾಜೀ ರಾಷ್ಟ್ರೀಯಾ ಕಬಡ್ಡಿ ಆಟಗಾರ್ತಿಯಾದ ಮಂಜು ಅವರನ್ನು ವರಿಸಿದ್ದಾರೆ. ಪುತ್ರಿ ಜಿಯಾ ಹಾಗೂ ಕವ್ಯನ್ ಎಂಬ ಈರ್ವರು ಮಕ್ಕಳನ್ನು ಹೊಂದಿದ್ದಾರೆ. ಜಝಾರಿಯಾ ಸಾಧನಾ ಸಾಹಸಗಳು : 2016ರಲ್ಲಿ ರಿಯೋ ಪ್ಯಾರಾಒಲಿಂಪಿಕ್ಸ್‍ನಲ್ಲಿ ಸ್ವರ್ಣ, ಅಥೆನ್ಸ್ ಪ್ಯಾರಾ ಒಲಿಂಪಿಕ್ಸ್‍ನಲ್ಲಿ 2004ರಲ್ಲಿ ಸ್ವರ್ಣ ಪದಕ. ಐಸಿಸಿ ವಿಶ್ವಚಾಂಪಿಯನ್‍ಷಿಪ್ ನಲ್ಲಿ ಲಿಯಾನ್‍ನಲ್ಲಿ 2013ರಲ್ಲಿ ಚಿನ್ನ, ದೋಹಾದಲ್ಲಿ 2015ರಲ್ಲಿ ಬೆಳ್ಳಿ, ಏಷ್ಯನ್ ಪ್ಯಾರಾಗೇಮ್ಸ್‍ನಲ್ಲಿ 2014ರಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿ ಸಾಧನೆಗಳನ್ನು ಮಾಡಿದ್ದಾರೆ.

ಹೀಗೆ ಜಝಾರಿಯಾರ ಸಾಧನೆಗಳು ಅಮೋಘ. ಈ ಒಂಟಿ ಕೈ ವೀರ ಮುಂಬರುವ ಮಹಾ ಸ್ಪರ್ಧೆಗಳಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳನ್ನು ತಂದು, ಭಾರತದ ಹೆಸರು ಜಾವಲಿನ್ ಥ್ರೋದಲ್ಲಿ ರಾರಾಜಿಸುವಂತೆ ಮಾಡಲಿ, ವಿಶ್ವ ಸಾಹಸಿಯಾಗಿ ಮೆರೆಯಲಿ ಎಂದು ಹಾರೈಸೋಣ.

?ಹರೀಶ್‍ಸರಳಾಯ,

ಮಡಿಕೇರಿ.