ಕಾಫಿ ಕೊಯ್ಲು ಸಮಯ ಬಂತೆಂದರೆ, ಅದನ್ನು ಸಮರ್ಪಕವಾಗಿ ಸಕಾಲಿಕವಾಗಿ ಒಣಗಿಸುವುದೇ ಬಹು ದೊಡ್ಡ ಸಮಸ್ಯೆ. ಇದು ದೊಡ್ಡ, ಸಣ್ಣ ಮತ್ತು ಅತಿಸಣ್ಣ ಬೆಳೆಗಾರರನ್ನು ಪ್ರತೀ ವರ್ಷ ಕಾಡುವುದು ಸಹಜ. ಇದರ ಮೇಲೆಯೇ ಕಾಫಿಯ ಬೆಲೆ ನಿರ್ಧರಿತ. ಹಾಗಾಗಿಯೇ ಇದಕ್ಕೆ ಬೆಳೆಗಾರರು ಅಧಿಕ ಒತ್ತು ನೀಡುವುದು ಅಗತ್ಯ. ಈಗ ಹಲವರು ನೆರಳಿನ ಪರದೆ ಅಥವಾ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಕಾಫಿಯನ್ನು ಒಣಗಿಸುತ್ತಿರುವರು. ಇದರಿಂದ ಕಾಫಿಯ ಬಣ್ಣ ಚೆನ್ನಾಗಿ ಇರುತ್ತದೆಯೇ ವಿನಃ , ಅದು ಬೇಗ ಒಣಗಲಾರದು. ಸಣ್ಣ ಮತ್ತು ಅತಿಸಣ್ಣ ಬೆಳೆಗಾರರಿಗೂ ಪ್ರಯೋಜನಕಾರಿಯಾಗುವ ವಿನೂತನ ಅತ್ಯಂತ ಸರಳ ತಂತ್ರಜ್ಞಾನದ ಬಗ್ಗೆ ವಿವರಿಸಲಾಗಿದೆ.
ಸರಳ ಪ್ಲಾಸ್ಟಿಕ್ ಮನೆ : ಇದರ ಬಳಕೆ ಅತ್ಯಂತ ಸುಲಭ. ದುಬಾರಿಯೂ ಅಲ್ಲ. ಆದರೆ, ಒಂದಿಷ್ಟು ಬಂಡವಾಳ ತೊಡಗಿಸುವುದು ಅಗತ್ಯ. ಬೆಳೆಗಾರರು ತಮ್ಮ ಅನುಕೂಲಕ್ಕೆ ತಕ್ಕ ಅಳತೆಯ ಚೌಕಾಕೃತಿ ಅಥವಾ ಆಯತಾಕಾರದ ಹಸಿರು ಮನೆಯನ್ನು ನಿರ್ಮಿಸಬೇಕು. ಸೂಕ್ತವೆನಿಸಿದಲ್ಲಿ ವೃತ್ತಾಕಾರವೂ ಆಗಬಹುದು. ಇಂತಹ ಹಸಿರು ಮನೆಗಳು ಈಗಾಗಲೇ ವಿವಿಧ ಸಸ್ಯಕ್ಷೇತ್ರ(ನರ್ಸರಿ)ಗಳಲ್ಲಿ ಬಳಕೆಯಲ್ಲಿವೆ. ಹಲವಾರು ಕಡೆ ತೋಟಗಾರಿಕಾ ಇಲಾಖೆಯವರು ಇಂತಹ ಆಧುನಿಕ ಕ್ರಮದಲ್ಲಿಯೂ( ಕಾಳುಮೆಣಸು)ಸಸಿಗಳನ್ನು ಬೆಳೆಸುತ್ತಿರುವರು. ಅಲ್ಲಿ ಸಸಿಗಳ ಬೆಳವಣಿಗೆಗೆ ಬಳಸಲಾಗುವ ಹಸಿರು ಮನೆಯನ್ನು ಕಾಫಿ ಒಣಗಿಸಲು ಯಶಸ್ವಿಯಾಗಿ ಬಳಸಲಾಗುತ್ತದೆ, ಇದರಂತೆ ಕಾಫಿಯನ್ನು ಒಣಗಿಸಲು ಸಹಾ ಹಸಿರುಮನೆಗಳನ್ನು ಬಳಸಬಹುದು. ಇದು ಅಕಾಲಿಕ ಮಳೆಯಿಂದ ಕಾಫಿಯನ್ನು ರಕ್ಷಿಸುತ್ತದೆ.
24 ಘಂಟೆಯೂ ಒಣಗುವಿಕೆ: ಬಿಸಿಲನ್ನು ಆಧರಿಸಿ, ಹಸಿರು ಮನೆಯೊಳಗೆ ಅಧಿಕ ಉಷ್ಣಾಂಶವಿರುತ್ತದೆ. ಇದರ ಒಳಗಿನ ಗಾಳಿಯು ಸದಾ ಬಿಸಿಯಾಗಿರುವುದರಿಂದ 24 ಘಂಟೆಯು ಕಾಫಿ ಒಣಗುತ್ತದೆ. ಹಸಿರುಮನೆಯಲ್ಲಿ ಕೃತಕವಾಗಿ ಒಣಗಿಸುವ ಸಂಭಾವ್ಯ ವಿಧಾನಗಳಲ್ಲಿ ಇದೂ ಒಂದು. ಪರಿಸರ ಸ್ನೇಹಿ, ಖರ್ಚು ಕಡಿಮೆಯಂತಹ ಉತ್ತಮ ಗುಣಗಳಿಂದ ಈ ವಿಧಾನವು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಇದರಲ್ಲಿ ಮೂರು ವಿಭಾಗಗಳಿವೆ. ದುಬಾರಿ, ಅಗ್ಗದ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿಯೂ ಪ್ಲಾಸ್ಟಿಕ್ ನೆರಳಿನ ಮನೆಗಳನ್ನು ರೈತರು ನಿರ್ಮಿಸಬಹುದು. ಅದರ ನಿರ್ಮಾಣಕ್ಕೆ ಬಳಸಲಾಗುವ ವಸ್ತುಗಳ ಮೇಲೆ ಅದರ ಬೆಲೆ ನಿರ್ಧರಿತ.
ಸಂಶೋಧನಾ ಸಂಸ್ಥೆಯ ಅಭಿವೃದ್ಧಿ : ಇಂಡೋನೇಶಿಯಾದ ಕಾಫಿ ಮತ್ತು ಕೋಕೋ ಸಂಶೋಧನಾ ಸಂಸ್ಥೆಯು ಚೆರಿ ಕಾಫಿ ಒಣಗಿಸಲು ದೊಡ್ಡ ಪ್ರಮಾಣದ ಹಸಿರುಮನೆ ಮಾದರಿಯನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿದೆ. ಇದಕ್ಕೆ ಫೈಬರ್ ರೀನ್ ಫೋರ್ಡ್(ಎಫ್‍ಆರ್‍ಸಿ) ಅನ್ನು ಬಳಸಿದೆ.ದೊಡ್ಡ ಪ್ರಮಾಣದ ಹಸಿರು ಮನೆಯು 29.9 ಯಿಂದ 58.2 ಡಿಗ್ರಿ ಸೆಂಟಿಗ್ರೇಡ್ ನಡುವೆ ಶಾಖ ನೀಡುವ ಶಕ್ತಿ ಹೊಂದಿದೆ ಎಂದು ಅಲ್ಲಿನ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಬಿಸಿಲಿನ ಪ್ರಮಾಣಕ್ಕೆ ಅನುಗುಣವಾಗಿ ಹಸಿರುಮನೆಯ ಒಳಾಂಗಣದಲ್ಲಿ ತಾಪಮಾನ ಏರಿಳಿತವಾಗುತ್ತದೆ.
ಮಳೆಯಿಂದ ರಕ್ಷಣೆ : ಇದರ ಬಳಕೆಯಿಂದ ಕಾಫಿಗೆ ಶಿಲೀಂಧ್ರಗಳ ಸೇರ್ಪಡೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ಇದರ ಬಳಕೆಯಿಂದ ಕಾಫಿ ಸುಗ್ಗಿಯ ಸಂದರ್ಭ ಬೀಳಬಹುದಾದ ಮಳೆಯಿಂದ ಕಾಫಿಯನ್ನು ರಕ್ಷಿಸುತ್ತದೆ. ಇದರ ಒಳಗೆ ಬಿಸಿ ಗಾಳಿ ಇರುವುದರಿಂದ ಕಾಫಿಯು ಒಂದೇ ಸಮನಾಗಿ ಒಣಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಹಾಳೆಗಳು ಹೆಚ್ಚಿನ ತಾಪಮಾನವನ್ನು ಕಾಪಾಡಿಕೊಳ್ಳುತ್ತದೆ. ಇದರ ಬಳಕೆಯಿಂದಾಗಿ ಕಾಫಿಯ ಗುಣಮಟ್ಟವು ಗಣನೀಯವಾಗಿ ವರ್ಧಿಸುತ್ತದೆ. ಕಾಫಿಯ ಬಣ್ಣ, ಸುವಾಸನೆ, ರುಚಿಯ ಗುಣಮಟ್ಟದ ದೃಷ್ಟಿಯಿಂದ ಇದನ್ನು ಬಳಸುವುದು ಉತ್ತಮವೆಂದು ತಜ್ಞರು ಅಭಿಪ್ರಾಯ.
ಸಹಾಯಧನ ಅಗತ್ಯ : ಬೆಳೆಗಾರರು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಹಾಳೆಗಳನ್ನು ಹಸಿರು ಮನೆಗಳಿಗೆ ಬಳಸಿದಲ್ಲಿ ಸುದೀರ್ಘ ಬಾಳಿಕೆ ಬರುತ್ತದೆ. ಹಸಿರು ಮನೆಗಳನ್ನು ನಿರ್ಮಿಸುವ ಮುನ್ನ ಸಮೀಪವಿರುವ ಹಸಿರು ಮನೆಗಳುಳ್ಳ ಸಸ್ಯಕ್ಷೇತ್ರಕ್ಕೆ ಭೇಟಿ ನೀಡುವುದು ಉತ್ತಮ. ಇಂತಹ ಸರಳ ತಂತ್ರಜ್ಞಾನದ ಬಳಕೆಗೆ ಬೆಳೆಗಾರರಿಗೆ ಸಂಬಾರ ಮಂಡಳಿ, ಕಾಫಿ ಮಂಡಳಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಹಸಿರು ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವಂತಾಗಬೇಕು. ಹಸಿರು ಮನೆ ನಿರ್ಮಾಣ ಮಾಡಬಯಸುವ ಆಸಕ್ತರು ಮಾಹಿತಿಗಾಗಿ ಮೇಲ್ಕಂಡ ಇಲಾಖೆ ಅಥವಾ ಮಂಡಳಿಗಳ ಕಛೇರಿಗಳನ್ನು ಸಂಪರ್ಕಿಸಬಹುದು.
ಪ್ಲಾಸ್ಟಿಕ್ ಮನೆಗಳ ನಿರ್ಮಾಣಕ್ಕೆ ಸರಕಾರದ ಸಹಾಯಧನಕ್ಕಾಗಿ ಬೆಳೆಗಾರರು, ಜನಪ್ರತಿನಿಧಿಗಳು ಸರಕಾರವನ್ನು ಒತ್ತಾಯಿಸುವ ಅಗತ್ಯವಿದೆ. ಹಾಗಾದಲ್ಲಿ, ಬೆಳೆಗಾರರು ಮುಂಬರುವ ದಿನಗಳಲ್ಲಿ ಉತ್ತಮ ಗುಣಮಟ್ಟದ ಕಾಫಿಯನ್ನು ಉತ್ಪಾದಿಸುವ ಸಾಮಥ್ರ್ಯ ಪಡೆಯಲು ನೆರವಾಗಬಹುದು.
-ಕೂಡಂಡ ರವಿ, ಹೊದ್ದೂರು.