ಮಡಿಕೇರಿ, ಜ. 29: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.
ಬೆಟ್ಟಗೇರಿ: ಬೆಟ್ಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಬೆಟ್ಟಗೇರಿ ಗ್ರಾ.ಪಂ. ಸದಸ್ಯೆ ಕಮಲ ಉತ್ತಯ್ಯ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಮಹತ್ವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕ್ರೀಡೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಿರಿಗನ್ನಡ ಪ್ರತಿಭಾ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಎಸ್. ಪ್ರಜ್ಞಾ , ಜಿಲ್ಲಾ ಮಟ್ಟದಲ್ಲಿ ಸ್ಥಾನ ಪಡೆದ ಫಾತೀಮ ತಸ್ಲಿಮ, ಎಂ.ಎಸ್. ತೇಜಸ್ವಿನಿ ಹಾಗೂ ಬಿ.ಬಿ. ಭವಿತ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಟ್ಟಡ ಪ್ರಭಾಕರ, ಉಪಾಧ್ಯಕ್ಷ ತಳೂರು ಕಾಳಪ್ಪ, ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕ ವೃಂದ ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಅನ್ವಾರುಲ್ ಹುದಾ ಚೆಟ್ಟಳ್ಳಿ: ಇಲ್ಲಿನ ಅನ್ವಾರುಲ್ ಹುದಾದಲ್ಲಿ 71ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಅನ್ವಾರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಲಿಯಾಕತ್ ಅಲಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮುದರ್ರಿಸರಾದ ಶಫೀಕ್ ಸಖಾಫಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಪ್ರಾಂಶುಪಾಲ ಚಂದ್ರಕುಮಾರ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.
ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್, ಜುನೈದ್ ಅನ್ವಾರಿ ಅಲ್ ಅಹ್ಸನಿ, ಮುಬಶ್ಶಿರ್ ಅಝ್ಹರಿ ಶುಭ ಕೋರಿದರು. ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಮಖ್ದೂಮಿಯಾ ಖಮರುದ್ದೀನ್ ಅನ್ವಾರಿ ಅಸ್ಸಖಾಫಿ ಸಖಾಫಿ, ನಿವೃತ್ತ ಸೈನಿಕ ಶಂಷುದ್ದೀನ್ ಉಪಸ್ಥಿತರಿದ್ದರು. ಆಸಿಫ್ ಮಲಗೋಡ್ ಸ್ವಾಗತಿಸಿ, ಜಾಫರ್ ಕೊಳಕೇರಿ ವಂದಿಸಿದರು.
ಎಸ್ಡಿಪಿಐ ಮಡಿಕೇರಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕದ ವತಿಯಿಂದ 71ನೇ ಗಣರಾಜ್ಯೋತ್ಸವವನ್ನು ಮಡಿಕೇರಿಯ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕರ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳನ್ನು ಭದ್ರಪಡಿಸುವ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದರು. ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಕೆ.ಜಿ. ಪೀಟರ್, ನಗರಾಧ್ಯಕ್ಷ ಮನ್ಸೂರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮತ್ತಿತರರು ಹಾಜರಿದ್ದು ರಾಷ್ಟ್ರಧ್ವಜಕ್ಕೆ ಗೌರವ ಅರ್ಪಿಸಿದರು.
ನಗರದ ಹಿಲ್ರಸ್ತೆ ಬಡಾವಣೆ, ತ್ಯಾಗರಾಜ ಕಾಲೋನಿ ಹಾಗೂ ಆಜಾದ್ ನಗರದಲ್ಲೂ ಎಸ್ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಿದ್ದಾಪುರ ಕಾಂಗ್ರೆಸ್ ಕಚೇರಿ: ಗಣರಾಜ್ಯೋತ್ಸವದ ಪ್ರಯುಕ್ತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವೀರಾಜಪೇಟೆ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ಸಿದ್ದಾಪುರ ಆರೋಗ್ಯ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಜಿ.ಪಂ. ಸದಸ್ಯೆ ಲೀಲಾವತಿ, ತಾ.ಪಂ. ಸದಸ್ಯೆ ಚಿನ್ನಮ್ಮ, ಗ್ರಾ.ಪಂ. ಅಧ್ಯಕ್ಷ ಮಣಿ, ಉಪಾಧ್ಯಕ್ಷೆ ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಮೂಸ, ತೋರೆರ ಪೊನ್ನಕ್ಕಿ, ಸಿ.ಎ. ಹಂಸ, ಅಧ್ಯಕ್ಷ ವಿ.ಕೆ. ಬಶೀರ್ ಮುಂತಾದವರು ಹಾಜರಿದ್ದರು.