ಚೆಟ್ಟಳ್ಳಿ, ಜ. 30: ಮಾಲ್ದಾರೆಯ ಜನಪರ ಕಲಾ ಮತ್ತು ಕ್ರೀಡಾ ಯುವ ಜನ ಸಂಘ ಹಾಗೂ ನೆಹರು ಯುವ ಕೇಂದ್ರ ಮಡಿಕೇರಿಯ ಸಂಯುಕ್ತ ಆಶ್ರಯದಲ್ಲಿ ಮಾಲ್ದಾರೆಯ ಪ್ರೌಢ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನವನ್ನು ಗುಂಡಿಗೆರೆ ತಂಡ ತನ್ನದಾಗಿಸಿಕೊಂಡಿದೆ.
ಮಾಲ್ದಾರೆಯ ಸಿದ್ದಪ್ಪಾಜಿ ದೇವಸ್ಥಾನದ ಆರ್ಚಕ ಬಾಲಾ ಪೂಜಾರಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ದೈಹಿಕ ಶಿಕ್ಷಕಿ ಈಶ್ವರಿ, ಮಾಜಿ ಯೋಧ ಸುನಿಲ್, ಪತ್ರಕರ್ತರಾದ ಅಜೀಜ್ ಮತ್ತು ಎಸ್.ಎಂ ಮುಬಾರಕ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ ಕ್ರೀಡಾಕೂಟದ ಫೈನಲ್ ಪಂದ್ಯಾಟದಲ್ಲಿ ಹೊದವಾಡ ತಂಡವನ್ನು ಮಣಿಸಿ ಗುಂಡಿಗೆರೆ ತಂಡ ಜನಪರ ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿದೆ. ಕ್ರೀಡಾಕೂಟದ ಉತ್ತಮ ತಂಡ ಮಾಪಿಳತೋಡು ಹಾಗೂ ಆಲ್ ರೌಂಡರ್ ಆಟಗಾರನಾಗಿ ಗುಂಡಿಗೆರೆ ತಂಡದ ಸಿಯಾಬ್ ಪ್ರಶಸ್ತಿಯನ್ನು ಪಡೆದುಕೊಂಡರು. ಸಂಘಟನೆಯ ಸಮಾಜ ಮುಖಿ ಸೇವೆಯಾಗಿ ವಿಕಲಚೇತನ ಮಹಿಳೆಗೆ ವೀಲ್ ಚೇರ್ ನೀಡಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಪ್ರೋ ಕಬಡ್ಡಿ ಆಟಗಾರ ಅವಿನಾಶ್, ರಾಜ್ಯದ ಪ್ರಥಮ ಅಂತರಾಷ್ಟ್ರೀಯ ಮಹಿಳಾ ಹಾಕಿ ತೀರ್ಪುಗಾರ್ತಿ ಅನುಪಮ, ಶೌರ್ಯ ಪ್ರಶಸ್ತಿ ವಿಜೇತ ಸಿದ್ದಾಪುರದ ಆಟೋ ಚಾಲಕ ಜಲೀಲ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಮಾಲ್ದಾರೆಯ ಆಯಿಷಾ ಮತ್ತು ಜಿಲ್ಲೆಯ ಪ್ರಮುಖ ವೀಕ್ಷಕ ವಿವರಣೆಗಾರ ಅಮ್ಮತ್ತಿಯ ಆಶಿಫ್ ಅವರನ್ನು ಸನ್ಮಾನಿಸಲಾಯಿತು.
ಮಾಲ್ದಾರೆಯ ಶಾಜಿ ನೇತೃತ್ವದ ಪುರುಷ ಹಾಗೂ ಮಹಿಳಾ ತಂಡಗಳಿಂದ ಆಕರ್ಷಣೀಯವಾದ ಚಂಡೆ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಚಂಡೆ ತಂಡದ ಸದಸ್ಯರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಮಾಲ್ದಾರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಣಿ, ಜನಪರ ಸಂಘಟನೆಯ ಅಧ್ಯಕ್ಷ ಆಂಟೋನಿ, ಡೋಮಿನಾಸ್ ಯುವಕ ಸಂಘದ ನೌಫಲ್, ಸಿಟಿ ಬಾಯ್ಸ್ ಸಂಘದ ಮುಸ್ತಫ, ಪ್ರಮುಖರಾದ ಮುನ್ನ, ರಘು ಕರುಂಬಯ್ಯ, ಚುಮ್ಮಿ ಪೂವಯ್ಯ, ಮಣಿ, ನಿಯಾಸ್, ವರ್ಗೀಸ್, ಈಶ್ವರಿ, ಟೋಮಿ ಥಾಮಸ್, ಜನಪರ ಸಂಘಟನೆಯ ಅಸೀಸ್, ಶೌಕತ್ ಅಲಿ, ರಜೀಸ್, ಪ್ರವೀಣ್, ಅಬುತ್ತಾಲಿಬ್, ಮಂಜು, ಇಸ್ಮಾಯಿಲ್, ಅಕ್ಷಿತ್, ಹರಿಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು. ಬಾವ ಮಾಲ್ದಾರೆ ಕಾರ್ಯಕ್ರಮ ನಿರೂಪಣೆ ಮಾಡಿದರು.