ಗೋಣಿಕೊಪ್ಪಲು ಜ. 30 : ಹಲವಾರು ಇಲಾಖೆಗಳು ನಾಗರಿಕರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದರೂ ತಕ್ಷಣಕ್ಕೆ ಸ್ಪಂದಿಸುವ ಇಲಾಖೆಗಳಲ್ಲಿ ಪ್ರಮುಖವಾಗಿ ಪೊಲೀಸ್ ಇಲಾಖೆಯನ್ನು ಮೊದಲ ಸಾಲಿನಲ್ಲಿ ನೋಡಬಹುದಾಗಿದೆ. ಆದರೆ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮಾಯಕರು ಬಲಿಯಾಗುತ್ತಾರೆ. ರಾಜ್ಯ ಹೆದ್ದಾರಿಗಳಲ್ಲಿ ನಿರಂತರ ವಾಹನ ದಟ್ಟಣೆಯಿಂದ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೆತ್ತಿಕೊಂಡರೂ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅತಿ ವೇಗದಿಂದ ಚಲಿಸುವ ವಾಹನಗಳು ಪಾದಚಾರಿಗೆ ಸೇರಿದಂತೆ, ವಿವಿಧ ಬಗೆಯಲ್ಲಿ ಅಪಘಾತಕ್ಕೀಡಾಗಿ ಹಲವು ಜೀವಗಳು ಪ್ರಾಣ ಕಳೆದುಕೊಂಡಿವೆ.

ವೇಗ ನಿಯಂತ್ರಣ ತಹಂಬದಿಗೆ ತರಲು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ಹಿಂದೆ ಅಳವಡಿಸ ಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ರಸ್ತೆ ಉಬ್ಬುಗಳು ಇಲ್ಲದಂತಾದವು. ಇದರಿಂದ ವಾಹನಗಳ ವೇಗಕ್ಕೆ ನಿಯಂತ್ರಣ ಹೇರಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ವೇಗ ನಿಯಂತ್ರಣಕ್ಕೆ ಆಯ್ದ ಅಪಘಾತ ಸ್ಥಳದಲ್ಲಿ ಇಲಾಖೆ ವತಿಯಿಂದ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‍ಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಯುವ ಪ್ರಯತ್ನ ಇಲಾಖೆಯಿಂದ ನಡೆಯುತ್ತಿದೆ.

ಅಪಘಾತವನ್ನು ತಡೆಯಲು ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಗಳಲ್ಲಿ ಕ್ರಮ ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ತಾಕೀತು ಮಾಡುವ ಮೂಲಕ ಇಲಾಖೆಯನ್ನು ಎಚ್ಚರಿಸುತ್ತಿದ್ದರು. ಜನಪ್ರತಿನಿಧಿಗಳ ಮಾತಿಗೆ ಎಚ್ಚೆತ್ತ ಪೊಲೀಸ್ ಇಲಾಖೆ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಪಡೆದು ಆಯಾಕಟ್ಟಿನಲ್ಲಿ ಅಪಘಾತಗಳನ್ನು ತಡೆಯಲು ಬ್ಯಾರಿಕೇಡ್‍ಗಳನ್ನು ಅಳವಡಿಸುವ ಪ್ರಯತ್ನ ಮಾಡಿತ್ತು.

ಇದರಿಂದ ಅಪಘಾತಗಳು ಪ್ರಕರಣಗಳು ಹತೋಟಿಗೆ ಬಂದಿದ್ದವು. ಆದರೆ ಇತ್ತೀಚೆಗೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಹದ ಗೆಟ್ಟಿದ್ದು ಪೊಲೀಸ್ ಇಲಾಖೆಯ ಮೇಲಿಟ್ಟಿದ್ದ ಸಾರ್ವಜನಿಕರ ನಂಬಿಕೆ ಹುಸಿಯಾಗ ತೊಡಗಿದೆ. ಎಲ್ಲೆಂದರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‍ಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಎತ್ತಿಡುವ ಪ್ರಯತ್ನ ಮಾಡದೆ ಇರುವ ಕಾರಣ ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾಗಿದ್ದಾನೆ.!

ಅಮಾಯಕ ದುರ್ಮರಣ

ಗೋಣಿಕೊಪ್ಪ, ವೀರಾಜಪೇಟೆ ಮುಖ್ಯ ರಸ್ತೆಯ ವಿದ್ಯಾಸಂಸ್ಥೆಗಳ ಮುಂಭಾಗದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ವಿದ್ಯಾಸಂಸ್ಥೆಗಳ ಮನವಿ ಮೇರೆಗೆ ಪೊಲೀಸ್ ಇಲಾಖೆಯು ತನ್ನಲ್ಲಿದ್ದ ಬ್ಯಾರಿಕೇಡ್‍ಗಳನ್ನು ರಸ್ತೆಯಲ್ಲಿ ಅಳವಡಿಸಿ ಸಹಕರಿಸಿತ್ತು. ಇದರ ಜವಾಬ್ದಾರಿಯನ್ನು ಬ್ಯಾರಿಕೇಡ್‍ಗಳನ್ನು ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ರಸ್ತೆ ಬದಿಗೆ ಸರಿಸುವ ಆಯಾಯ ವಿದ್ಯಾಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ ಇವುಗಳ ಜವಾಬ್ದಾರಿ ನಿಭಾಯಿಸಬೇಕಾದ ಸಂಸ್ಥೆಯ ನೌಕರರು ನಿರ್ಲಕ್ಷ್ಯ ವಹಿಸಿದ್ದರಿಂದ ಅಮಾಯಕನೊಬ್ಬ ಪ್ರಾಣ ಕಳೆದುಕೊಳ್ಳುವಂತಾಗಿದೆ.

ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ವಿಪರೀತ ಮಂಜು ಮುಸುಕಿದ ವಾತಾವರಣದ ನಡುವೆ ಕೈಕೇರಿ ಗ್ರಾಮದ ಕಾರ್ಮಿಕ ಮನೋಜ್ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕೈಕೇರಿ ಸಮೀಪವಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಮುಂಭಾಗದಲ್ಲಿಟ್ಟಿದ್ದ ಬ್ಯಾರಿಕೇಡ್ ಕಾಣದೆ ಡಿಕ್ಕಿ ಪಡಿಸಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಮಾಯಕ ಮೃತಪಟ್ಟಿದ್ದಾನೆ. ಬೈಕ್‍ನಲ್ಲಿದ್ದ ಈತನ ಸ್ನೇಹಿತ ಹಿಂಬದಿ ಸವಾರ ಗಣೇಶ್ ಎಂಬಾತ ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾತ್ರಿ ವೇಳೆಯಲ್ಲಿ ಬ್ಯಾರಿಕೇಡ್ ರಸ್ತೆಯಲ್ಲಿದ್ದ ಕಾರಣ ಈ ಅಪಘಾತ ಸಂಭವಿಸಿ ಅಮಾಯಕ ಪ್ರಾಣ ಕಳೆದುಕೊಳ್ಳುವಂತಾಗಿದೆ ಎನ್ನಲಾಗಿದೆ. ಅಮಾಯಕನ ಬಲಿಗೆ ಕಾರಣವಾದ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕಾದ ಇಲಾಖೆ ದಿವ್ಯ ಮೌನವಹಿಸಿದೆ. ಕನಿಷ್ಟ ಮಾನವೀಯತೆ ಹಿತದೃಷ್ಟಿಯಿಂದ ಕಾರ್ಮಿಕನ ಕುಟುಂಬಕ್ಕೆ ಇಂತಹ ಸಂಸ್ಥೆಯಿಂದ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆಯು ಮುಂದಾಗದಿರುವ ಬಗ್ಗೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪೊನ್ನಂಪೇಟೆ ರಸ್ತೆಯ ವಿದ್ಯಾಸಂಸ್ಥೆಯ ಮುಂಭಾಗ ಇದೇ ರೀತಿಯ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ಶಾಲೆ ಮುಂಭಾಗ ಬ್ಯಾರಿಕೇಡ್‍ಗಳನ್ನು ಅಳವಡಿಸಲು ಸ್ಥಳೀಯ ಸಂಘ ಸಂಸ್ಥೆಗಳೇ ಮುಂದೆ ಬಂದಿದ್ದವು. ಇವುಗಳನ್ನು ಪ್ರತಿನಿತ್ಯ ಮುಂಜಾನೆ ವೇಳೆಯಲ್ಲಿ ರಸ್ತೆಯಲ್ಲಿ ಇಡುವುದು ಹಾಗೂ ಸಂಜೆಯ ವೇಳೆಯಲ್ಲಿ ರಸ್ತೆಯಿಂದ ತೆಗೆದು ಬದಿಯಲ್ಲಿ ಸರಿಸುವ ಕೆಲಸವನ್ನು ಕಳೆದ ಮೂರು ವರ್ಷದಿಂದ ಚಾಚು ತಪ್ಪದೆ ಇಲ್ಲಿಯ ಸಾರ್ವಜನಿಕರೊಬ್ಬರು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಆಗುತ್ತಿದ್ದ ಅಪಘಾತಗಳು ಇಲ್ಲದಂತಾಗಿದೆ.

ಗೋಣಿಕೊಪ್ಪ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದಿದ್ದ ಈ ಹಿಂದಿನ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ ಪೊಲೀಸ್ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದರು. ಇದರಿಂದ ಏಕಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನದಲ್ಲಿ ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಹದ ಗೆಟ್ಟಿದ್ದು ಕೇಳುವವರಿಲ್ಲದಂತಾಗಿದೆ. ನಗರದ ಮಸೀದಿ ಮುಂಭಾಗದಲ್ಲಿ ಏಕಮುಖ ಸಂಚಾರವಿದ್ದರೂ. ಇಲ್ಲಿ ಯಾವುದೇ ಬದಲಾವಣೆ ಇನ್ನೂ ಮಾಡಿದಂತಿಲ್ಲ. ವೀರಾಜಪೇಟೆಯಿಂದ ಬರುವ ನಾಲ್ಕು ಚಕ್ರ ವಾಹನಗಳು ಉಮಾಮಹೇಶ್ವರಿ ದೇವಸ್ಥಾನ ಸಮೀಪದ ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣ ತಲುಪುವ ವ್ಯವಸ್ಥೆ ಕಲ್ಪಿಸಿದ್ದರೂ ಈ ರಸ್ತೆಯಲ್ಲಿ ವಕ್ರ್ಸ್ ಶಾಪ್‍ಗೆ ಬರುವ ವಾಹನಗಳು ರಸ್ತೆಯನ್ನು ಅತಿಕ್ರಮಿಸಿಕೊಂಡು ಕೆಲಸ ನಿರ್ವಹಿಸುತ್ತಿವೆ. ಇದರಿಂದ ವಾಹನ ಸಂಚಾರರಿಗೆ ತೊಂದರೆ ಉಂಟಾಗಿದೆ. ಠಾಣೆಯ ಸಮೀಪವಿರುವ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಮರದ ನೆರಳಿನ ವ್ಯವಸ್ಥೆ ಇರುವುದರಿಂದ ವಾಹನಗಳ ಪಾರ್ಕಿಂಗ್ ತಾಣವಾಗಿದೆ.! ಇವುಗಳ ಅನತಿ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ. ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಶಾಲೆ ಬಿಡುವ ಸಂದರ್ಭ ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ವಾಹನಗಳು ಬಂತೆಂದರೆ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದಾಡುವುದೇ ದೊಡ್ಡ ಸಮಸ್ಯೆಯಾಗಿದೆ.

ಬೈಪಾಸ್ ರಸ್ತೆಯಲ್ಲಿ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆಗೆ ಸೂಚನೆ ಇದ್ದರೂ ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ಪೊಲೀಸ್ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಕೇವಲ ಆಯಕಟ್ಟಿನಲ್ಲಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡ ವಿಧಿಸುತ್ತ ಸಮಯ ಕಳೆಯುತ್ತಿರುವ ಪೊಲೀಸ್ ಅಧಿಕಾರಿಗಳು ಕನಿಷ್ಟ ಮಟ್ಟದಲ್ಲಿ ಬಗೆಹರಿಯಬಹುದಾದ ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲು ನಿಯೋಜಿಸುವ ಇತ್ತೀಚೆಗೆ ಆಗಮಿಸಿದ ಕೆಲವು ಪೊಲೀಸರು ಹಾಗೂ ಕೆಲವು ಹೋಂಗಾರ್ಡ್‍ಗಳು ರಸ್ತೆಯಲ್ಲಿ ವಾಹನ ದಟ್ಟಣೆಯಿದ್ದರೂ ತಮ್ಮ ಮೊಬೈಲ್ ಗಳೊಂದಿಗೆ ಸಮಯ ಕಳೆದುಕೊಂಡು ಸಮೀಪದ ಅಂಗಡಿಯ ಮುಂಭಾಗ, ಹೊಟೇಲ್ ಕ್ಯಾಂಟೀನ್ ಮುಂಭಾಗ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೌನ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. - ಹೆಚ್.ಕೆ. ಜಗದೀಶ್