ಮಡಿಕೇರಿ, ಜ.30: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆ ಯನ್ನು ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲಾಡಳಿತ ಭವನದ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್, ಸ್ಕೌಟ್ ಮತ್ತು ಗೈಡ್ಸ್, ಸೇವಾದಳ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಗಾಂಧಿ ಮಂಟಪದಲ್ಲಿರಿಸಿ; ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು.
ಇದೇ ವೇಳೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸರ್ವೋದಯ ಸಮಿತಿಯ ಸದಸ್ಯ ಲಿಯಾಕತ್ ಅಲಿ ಗಾಂಧೀಜಿಯವರ ಮೆಚ್ಚಿನ ವೈಷ್ಣವ ಜನತೋ ಗೀತೆಯನ್ನು ಹಾಡಿದರು.
ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನ ಕಾರ್ಯಕ್ರಮವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಭಗವದ್ಗೀತೆ, ಬೈಬಲ್, ಕುರಾನ್ ಸಂದೇಶಗಳ ಪಠಣ ಮಾಡಲಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮಾಜಿ ಸಚಿವ ಯಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ಜಿಲ್ಲಾ ಖಜಾನಾಧಿಕಾರಿ ಪಿ.ಪದ್ಮಜಾ, ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಪೌರಾಯುಕ್ತ ಎಂ.ಎಲ್.ರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ, ತಹಶೀಲ್ದಾರ್ ಮಹೇಶ್, ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತ ಜಿಮ್ಮಿ ಸಿಕ್ವೇರಾ, ಪ್ರಮುಖರುಗಳಾದ ಕೆ.ಟಿ.ಬೇಬಿಮ್ಯಾಥ್ಯೂ, ಸ್ವರ್ಣಲತಾ, ಮುನೀರ್ ಅಹ್ಮದ್, ಕೋಡಿ ಚಂದ್ರಶೇಖರ್, ವಾಸುದೇವ್, ಸುಬ್ರಮಣಿ, ಚುಮ್ಮಿ ದೇವಯ್ಯ, ಅಂಬೆಕಲ್ಲು ನವೀನ್, ಸುರಯ್ಯ ಅಬ್ರಾರ್, ವಿಲ್‍ಫ್ರೆಡ್ ಕ್ರಾಸ್ತ, ಸ್ಕೌಟ್ ಅಂಡ್ ಗೈಡ್‍ನ ದಮಯಂತಿ, ರಂಜಿತ್ ಕೆ.ಯು., ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಸೇರಿದಂತೆ ಇತರ ಸಂಘ ಸಂಸ್ಥೆಯ ಸದಸ್ಯರು ಮತ್ತು ಗಣ್ಯರು ಗೌರವ ನಮನ ಸಲ್ಲಿಸಿದರು.
ಹುತಾತ್ಮರ ದಿನಾಚರಣೆಯ ಕಾರ್ಯಕ್ರಮವನ್ನು ಸರ್ವೋದಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ನಿರ್ವಹಿಸಿದರು.