ಮಡಿಕೇರಿ, ಜ. 30: ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತು ಉಪ ಪರಿಸರ ಅಧಿಕಾರಿ ಡಾ. ಎಂ.ಕೆ. ಸುಧಾ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಶ್ರೂಷಕಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ಸೋಂಕು ನಿರ್ವಹಣೆ ಮತ್ತು ಪರಿಸರ ಯೋಜನೆ (ಐಎಂಇಪಿ) ತರಬೇತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸಾಮಾನ್ಯ ವೈದ್ಯಕೀಯ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಿ ಘಟಕಕ್ಕೆ ಒದಗಿಸಬೇಕಿದೆ, ಆ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು. ಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಆಸ್ಪತ್ರ್ರೆಗಳಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದು ಎಂದು ಡಾ. ಸುಧಾ ತಿಳಿಸಿದರು.
ಆಸ್ಪತ್ರೆಯನ್ನು ಸ್ವಚ್ಛವಾಗಿಡುವಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದಾಗಿರುತ್ತದೆ. ಸಮರ್ಪಕವಾಗಿ ತ್ಯಾಜ ನಿರ್ವಹಣೆ ಮಾಡುವುದರಿಂದ ಆಸ್ಪತ್ರೆಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದರು. ತರಬೇತಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎಂ. ಶಿವಕುಮಾರ್, ಮಹಿಳಾ ಅರೋಗ್ಯ ಕೇಂದ್ರದ ಬೋಧಕರಾದ ಲೂಯಿಸ್, ಆರೋಗ್ಯ ಶಿಕ್ಷಣಾಧಿಕಾರಿ ಪುಟ್ಟಪ್ಪ ಇತರರು ಉಪಸ್ಥಿತರಿದ್ದರು.