ವೀರಾಜಪೇಟೆ, ಜ. 30: ಪ್ರಕಾಶಕರಾಗಲಿ ಅಥವಾ ಲೇಖಕರಾಗಲಿ ವ್ಯಕಿ,್ತ ಜಾತಿ, ಲಿಂಗ, ಧರ್ಮ ಹಾಗೂ ರಾಷ್ಟ್ರದ ವಿರುದ್ಧ ಅವಹೇಳನ ಮಾಡುವ ಪುಸ್ತಕ ಮತ್ತು ಬರಹಗಳ ಪ್ರಕಟ ಮಾಡದೆ ಸಮಾಜದ ಸಾಮರಸ್ಯ ಕಾಯುವುದರ ಜೊತೆಗೆ ದೇಶದ ಘನತೆ ಹೆಚ್ಚಿಸುವ ಸಾಹಿತ್ಯವನ್ನು ಪ್ರಕಟಿಸಲು ಮುಂದಾಗಬೇಕೆಂದು ಲೇಖಕ ಹಾಗೂ ಪ್ರಕಾಶಕ ಸಾತನೂರು ದೇವರಾಜು ಕರೆ ನೀಡಿದರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ವಿಭಾಗದ ಜಾಣ-ಜಾಣೆಯರ ಬಳಗದ ವತಿಯಿಂದ ನಡೆದ “ಪುಸ್ತಕ ಪ್ರಕಾಶನ ಹಾಗೂ ಕರಡಚ್ಚು ತಿದ್ದುವಿಕೆ” ಕುರಿತು ಕಮ್ಮಟ ಹಾಗೂ ಸಂವಾದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸಾಹಿತ್ಯ ಸಾಮಾಜಿಕ ಅಶಾಂತಿಗೆ ಕಾರಣವಾಗದೆ, ಸಾಮರಸ್ಯ, ಸಹಿಷ್ಣುತೆ ಬೆಳೆಸಿ ಆರೋಗ್ಯಕರವಾದ ವಾತಾವರಣ ನಿರ್ಮಿಸಬೇಕು. ಇಂದು ಪುಸ್ತಕ ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಹೊ¸ ತಂತ್ರಜ್ಞಾನದ ಆವಿಷ್ಕಾರದಿಂದ ಪುಸ್ತಕ ಮುದ್ರಣ ಕಲಾತ್ಮಕಗೊಂಡಿದೆ. ಆದರೆ, ಪುಸ್ತಕ ಪ್ರಕಾಶನ ದುಬಾರಿಯಾಗಿದೆ. ಪ್ರಕಾಶಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಪುಸ್ತಕ ಪ್ರಕಾಶಕರ ನೆರವಿಗೆ ಧಾವಿಸಬೇಕು. ಆ ಮೂಲಕ ಜ್ಞಾನದ ಆಗರ ವಾಗಿರುವ ಪುಸ್ತಕ ಸಂಸ್ಕøತಿಯನ್ನು ಬೆಳೆಸಬೇಕು ಎಂದರಲ್ಲದೆ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೊತೆಗೆ ತಮ್ಮ ವಿಚಾರ, ಅನಿಸಿಕೆ, ಭಾವನೆಗಳನ್ನು ಕತೆ, ಕಾವ್ಯ, ನಾಟಕ, ಕಾದಂಬರಿಗಳ ಮೂಲಕ ಅಭಿವ್ಯಕ್ತಿ ಮಾಡಬೇಕು. ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಮ್ಮಟಗಳಲ್ಲಿ ಭಾಗವಹಿಸಿ ಪ್ರತಿಭೆ ಉತ್ತಮ ಪಡಿಸಿಕೊಂಡು, ಯುವಲೇಖಕರು ಪ್ರೋತ್ಸಾಹ ಧನಸಹಾಯ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಕಾಶಕರು ಸಹ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಕಮ್ಮಟವನ್ನು ಉದ್ಘಾಟಿಸಿದ ಪ್ರಸಕ್ತ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕøತ ಲೇಖಕಿ ಸುನಿತಾ ಕುಶಾಲನಗರ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಫೇಸ್ಬುಕ್, ವಾಟ್ಸಾಪ್, ಟ್ವಿಟರ್ಗಳ ಪ್ರಲೋಭನೆಗೆ ಒಳಗಾಗದೆ, ಪಠ್ಯ ಪುಸ್ತಕದ ಓದಿನ ಜೊತೆಗೆ ಸಾಹಿತ್ಯದ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಅಭಿರುಚಿಯೊಂದಿಗೆ ಆತ್ಮವಿಶ್ವಾಸ ಬೆಳೆಯುತ್ತದೆ. ಸಮಾಜದ ಜೊತೆಗೆ ನಂಟನ್ನು ವೃದ್ಧಿಸಿ, ಕ್ರಿಯಾಶೀಲತೆ ಮತ್ತು ಅರಿವನ್ನು ವಿಸ್ತರಿಸುತ್ತದೆ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿಯೇ ಜಡವಾಗಿ ಉಳಿಯದೆ, ಓದು-ಬರಹವನ್ನು ಧ್ಯಾನಸ್ಥವಾಗಿ ರೂಢಿಸಿಕೊಳ್ಳಬೇಕು. ಆಗ ಮನದಲ್ಲಿ ಮೂಡುವ ಭಾವನೆ ಮತ್ತು ಆಲೋಚನೆಗಳನ್ನು ಬರಹಕ್ಕಿಳಿಸುವ ಮೂಲಕ ಸಮಾಜಕ್ಕೆ ಮುಖಾಮುಖಿಯಾಗಬಹುದು. ನಮ್ಮ ಬರಹ ಶಾಶ್ವತವಾಗಿ ಉಳಿಯಬೇಕೆಂದರೆ, ಪುಸ್ತಕ ರೂಪದಲ್ಲಿ ಪ್ರಕಟವಾಗುವುದು ತುಂಬಾ ಅಗತ್ಯ. ಇದಕ್ಕಾಗಿ ಇರುವ ಅವಕಾಶವನ್ನು ವಿದ್ಯಾರ್ಥಿ ಲೇಖಕರು ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಡಿ.ಕೆ. ಉಷಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ರಘುರಾಜು, ಕನ್ನಡ ಉಪನ್ಯಾಸಕರಾದ ಎ.ಎಂ. ಧರ್ಮಶೀಲ, ಕೆ.ಶಿವಣ್ಣ ಉಪಸ್ಥಿತರಿದ್ದರು.
ಪುಸ್ತಕ ಪ್ರಕಾಶನ ಹಾಗೂ ಕರಡಚ್ಚು ತಿದ್ದುವಿಕೆ ಕುರಿತ ಹಲವು ಹಂತಗಳು, ಸವಾಲುಗಳು, ಸಾಧ್ಯತೆಗಳು ಹಾಗೂ ಯುವ ಲೇಖಕರಿಗೆ ಇರುವ ಅವಕಾಶಗಳ ಬಗ್ಗೆ ಸಾತನೂರು ದೇವರಾಜ್ ಅವರು ಸಾದ್ಯಂತವಾಗಿ ವಿವರಿಸಿದರು. ಬಳಿಕ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರಕಾಶನ ಮತ್ತು ಪುಸ್ತಕ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಿದರು.
- ವರದಿ: ಈಶಾನಿ