ಮಡಿಕೇರಿ, ಜ. 29: ಯಾವುದೇ ಪೂಜಾ ಮಂದಿರ ಹಾಗೂ ಪ್ರಾರ್ಥನಾ ಮಂದಿರಗಳಿಂದ ಜಾಗ ಅತಿಕ್ರಮಣ ನಡೆದಿರುವ ಸುಳಿವು ಲಭಿಸಿದರೆ ಕಂದಾಯ ಇಲಾಖೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಿಂದ ನಿರ್ದೇಶನ ಹೊರ ಬಿದ್ದಿದ್ದು, ಇಂತಹ ಸ್ಥಳಗಳಿಗೆ ಸಂಬಂಧಿಸಿದ ಜಾಗ ಅತಿಕ್ರಮಣ ಅಥವಾ ಯಾವುದೇ ಕಾಮಗಾರಿ ಕೈಗೊಂಡಿದ್ದರೆ ತೆರವಿಗೆ ಕ್ರಮಕೈಗೊಳ್ಳಬೇಕೆಂದು ನ್ಯಾಯಾಲಯದಿಂದ ಸೂಚಿಸಲಾಗಿದೆ.ಆ ಮೇರೆಗೆ ಈ ಮೊದಲು ಮಾಹಿತಿ ಸಂಗ್ರಹಿಸಿದ ವೇಳೆ, ಕೊಡಗಿನಲ್ಲಿ ಅಂತಹ ಅತಿಕ್ರಮಣ ಕಂಡುಬಂದಿಲ್ಲವೆಂದು ಜಿಲ್ಲಾಡಳಿತದಿಂದ ಸಂಬಂಧಿಸಿ ದವರಿಗೆ ವರದಿ ನೀಡಲಾಗಿತ್ತು. ಈ ವರದಿ ಪುನರ್ ಪರಿಶೀಲಿಸುವಂತೆ ಮರು ಸೂಚನೆ ಮೇರೆಗೆ ಜಿಲ್ಲಾಡಳಿತ ಸಮೀಕ್ಷೆಗೆ ಮುಂದಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.
ಪ್ರಸ್ತುತ ಕೊಡಗಿನ ಮೂರು ತಾಲೂಕುಗಳ ತಹಶೀಲ್ದಾರರಿಗೆ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಜಂಟಿಯಾಗಿ ಸರ್ವೆ ಕೈಗೊಂಡು ವರದಿ ನೀಡುವಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಅಲ್ಲದೆ ಆಯಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಹಿತ ಇತರರು ಈ ಮಾಹಿತಿ ಸಂಗ್ರಹಿಸಲು ಮತ್ತು ಸೂಕ್ತ ವರದಿಗೆ ಆದೇಶಿಸಿದ್ದು, ಇದೇ ತಾ. 31ರೊಳಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಿರುವುದಾಗಿ ಅವರು ನೆನಪಿಸಿದ್ದಾರೆ.
ಈ ಬಗ್ಗೆ ಯಾವುದೇ ಸುಳಿವು ಇದ್ದಲ್ಲಿ ಕೊಡಗಿನ ಜನತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಥವಾ ನೇರವಾಗಿ ತಮಗೆ ಮಾಹಿತಿ ನೀಡುವಂತೆಯೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ನೀಡಿದ್ದಾರೆ.