ಸೋಮವಾರಪೇಟೆ, ಜ.29: ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯ ಐಗೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿಯ ಶವ, ನೆರೆಯ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಬಿದಿರುಮೊಳೆಕೊಪ್ಪಲು ಕೆರೆ ಸಮೀಪದ ಮರದಲ್ಲಿ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಐಗೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿ, ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ ನಿವಾಸಿ ತಿಮ್ಮಯ್ಯ (52) ಎಂಬವರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಿದಿರುಮೊಳೆಕೊಪ್ಪಲು ಗ್ರಾಮದಲ್ಲಿ ನಿನ್ನೆ ದಿನ ಪತ್ತೆಯಾಗಿದೆ.

ಕಳೆದ ಒಂದು ವಾರದ ಹಿಂದೆ ಮನೆಯಿಂದ ತೆರಳಿದ್ದ ತಿಮ್ಮಯ್ಯ ಅವರ ಬಗ್ಗೆ ಯಾವದೇ ಮಾಹಿತಿ ಇರಲಿಲ್ಲ. ಆದರೆ ನಿನ್ನೆ ದಿನ ಕೆರೆ ಸಮೀಪದ ಮರದಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸ್ಥಳಕ್ಕೆ ಅರಕಲಗೂಡು ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ನಂತರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ವಗ್ರಾಮ ಮೆಣಸ ಬೆಟ್ಟದಳ್ಳಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಯಿತು.

ಕಳೆದ ಒಂದು ವಾರದ ಹಿಂದೆ ಮನೆಯಿಂದ ತೆರಳಿದ್ದ ತಿಮ್ಮಯ್ಯ ಅವರು, ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದ್ದು, ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.