ಶ್ರೀಮಂಗಲ, ಜ. 30 : ಕೊಡಗು ಜಿಲ್ಲೆಯ ಕಾಫಿ ಬೆಳೆಗೆ ನೀರಾವರಿ ಒದಗಿಸಲು ಹತ್ತು ಹೆಚ್‍ಪಿ ವರೆಗಿನ ವಿದ್ಯುತ್ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಯಾವುದೇ ಪ್ರಸ್ತಾವನೆ ಇಲಾಖೆಗೆ ಬಂದಿಲ್ಲ. ಸರಕಾರ ಕಾಫಿ ಬೆಳೆಗೆ ಉಪಯೋಗಿಸುವ ಹತ್ತು ಹೆಚ್‍ಪಿ ವರೆಗಿನ ಪಂಪ್‍ಸೆಟ್‍ಗಳ ಶುಲ್ಕವನ್ನು ಭರಿಸಲು ಮುಂದಾದರೆ ಮಾತ್ರ ಉಚಿತ ವಿದ್ಯುತ್ ನೀಡಲು ಸಾಧ್ಯ ಎಂದು ಕೊಡಗು ಚಾಮರಾಜನಗರ ವೃತ್ತದ ಚೆಸ್ಕಾಂ ಸೂಪರಿಟೆಂಡೆಂಟ್ ಆಫ್ ಇಂಜಿನಿಯರ್ ಮಹಾದೇವಸ್ವಾಮಿ ಪ್ರಸನ್ನ ತಿಳಿಸಿದ್ದಾರೆ.ಅವರನ್ನು ಮಡಿಕೇರಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ನಿಯೋಗದೊಂದಿಗೆ

(ಮೊದಲ ಪುಟದಿಂದ) ಸಮಾಲೋಚನೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಸರಕಾರದಿಂದ ಕಾಫಿ ಬೆಳೆಗೆ ಉಚಿತ ವಿದ್ಯುತ್ ನೀಡಬೇಕೆನ್ನುವ ಬೇಡಿಕೆ ಹಲವು ವರ್ಷದಿಂದ ಇದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಅಧಿಕೃತ ಸುತ್ತೋಲೆ ಸರಕಾರದಿಂದ ಬಂದಿಲ್ಲ. ಸರಕಾರ ಬೇರೆ ಜಿಲ್ಲೆಗಳ ಕೃಷಿ ಹಾಗೂ ಇತರ ತೋಟಗಾರಿಕಾ ಬೆಳೆಗಳಿಗೆ ಹತ್ತು ಹೆಚ್‍ಪಿವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಇದನ್ನು ಸರಕಾರವೇ ಭರಿಸುತ್ತಿರುವುದರಿಂದ ಉಚಿತ ವಿದ್ಯುತ್ ನೀಡಲು ಇಲಾಖೆಗೆ ಸಾಧ್ಯವಾಗಿದೆ ಎಂದು ಹೇಳಿದರು.

ಕೊಡಗು- ಚಾಮರಾಜನಗರ ಎರಡು ಜಿಲ್ಲೆಗಳಲ್ಲಿ 276 ಕೋಟಿ ರೂ. ಹಣ ವಿದ್ಯುತ್ ಶುಲ್ಕ ಬಾಕಿ ಕಟ್ಟಲು ಗ್ರಾಹಕರು ಉಳಿಸಿಕೊಂಡಿದ್ದಾರೆ. ಚೆಸ್ಕಾಂ 2500 ಕೋಟಿಯಷ್ಟು ಸಾಲ ಹೊಂದಿದೆ. ಸರಕಾರದಿಂದ ಹತ್ತು ಹೆಚ್‍ಪಿವರೆಗೆ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಯಾವುದೇ ಸುತ್ತೋಲೆ ಇಲ್ಲಿಯವರೆಗೆ ಬಾರದಿರುವು ದರಿಂದ ಇಂತಹ ಬಾಕಿ ವಸೂಲಾತಿ ಮಾಡುವುದು ಇಲಾಖೆಗೆ ಅನಿವಾರ್ಯ ವಾಗಿದೆ ಎಂದು ಅವರು ಹೇಳಿದರು.

ಚೆಸ್ಕಾಂ ಕೆಪಿಟಿಸಿಎಲ್ ನಿಂದ ವಿದ್ಯುತ್ ಪಡೆದು ಅದನ್ನು ಸರಬರಾಜು ಮಾಡುತ್ತಿದೆ. ಕೆಇಆರ್‍ಸಿ ವಿದ್ಯುತ್ ದರ ನಿಗದಿಪಡಿಸುತ್ತಿದೆ ಎಂದು ಹೇಳಿದರು.

ಕಾಫಿ ಬೆಳೆಗಾರರ ಒತ್ತಾಯದ ಮೇರೆಗೆ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 10 ಹೆಚ್.ಪಿ. ವರೆಗಿನ ಕಾಫಿ ಕೃಷಿಗೆ ಬೇಕಾದ ಉಚಿತ ವಿದ್ಯುತ್‍ಚ್ಛಕ್ತಿಯನ್ನು ನೀಡುವ ಭರವಸೆ ನೀಡಿದ್ದರು. ತದನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ವಿದ್ಯುತ್‍ಚ್ಛಕ್ತಿ ಮಂಡಳಿಗೆ ಪತ್ರ ಬರೆದು ಈ ಒಂದು ಸೌಲಭ್ಯವನ್ನು ಅನುಷ್ಠಾನಗೊಳಿಸಲು ಪತ್ರಬರೆ ದಿದ್ದಾರೆ. ಆದರೆ ಇದುವರೆಗೂ ಇದು ಕಾರ್ಯಗತ ವಾಗಿಲ್ಲ. ಕೂಡಲೇ ಕೆ.ಇ.ಆರ್.ಸಿ. ಇದನ್ನು ಕಾರ್ಯಗತ ಗೊಳಿಸಿ ಆದೇಶ ಮಾಡಬೇಕಾಗಿ ಕೊಡಗು ಬೆಳೆಗಾರರ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಪ್ರ.ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಕಾರ್ಯದರ್ಶಿ ಬೊಳ್ಳೇರ ರಾಜಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ಕೊಡಗು ಜಿಲ್ಲಾ ಮುಖ್ಯ ಕಾರ್ಯಪಾಲಕ ಇಂಜಿನಿ ಯರ್ ಸೋಮಶೇಖರ್ ಹಾಜರಿದ್ದರು.