ಭಾಗಮಂಡಲ, ಜ. 30: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ 2020-25ರ ಸಾಲಿನ ಐದು ವರ್ಷಗಳಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಸಹಕಾರ ಸಂಘದ ಆವರಣದಲ್ಲಿ ನಡೆಯಿತು. ಚುನಾವಣೆಗೆ ಸಾಲಗಾರರ ಕ್ಷೇತ್ರದಿಂದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಲಗಾರರ ಕ್ಷೇತ್ರಕ್ಕೆ ಆರು ಸ್ಥಾನಗಳಿಗೆ ಹದಿನೆಂಟು ಮಂದಿ ಸ್ಪರ್ಧಿಸಿದ್ದರು. ಪರಿಶಿಷ್ಟ ವರ್ಗದ ಮೀಸಲು ಒಂದು ಸ್ಥಾನಕ್ಕೆ ಮೂರು ಮಂದಿ, ಮಹಿಳಾ ಮೀಸಲು ಎರಡು ಸ್ಥಾನಕ್ಕೆ ಆರು ಮಂದಿ, ಸಾಲಗಾರರ ಕ್ಷೇತ್ರದ ಹಿಂದುಳಿದ ವರ್ಗಗಳ ಎರಡು ಸ್ಥಾನಗಳಿಗೆ ನಾಲ್ಕು ಮಂದಿ ಹಾಗೂ ಸಾಲಗಾರರ ಪರಿಶಿಷ್ಟ ಪಂಗಡ ಒಂದು ಸ್ಥಾನಕ್ಕೆ ಮೂರು ಮಂದಿ ಸ್ಪರ್ಧಿಸಿದ್ದರು. ಸಾಲಗಾರರಲ್ಲದ ಕ್ಷೇತ್ರಕ್ಕೆ ಮೂರು ಮಂದಿ ಸ್ಪರ್ಧಿಸಿದ್ದರು. ಸಾಲಗಾರರ ಎಲ್ಲಾ ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, ಹೊಸೂರು ಸತೀಶ್ಕುಮಾರ್, ಜಂಗಮರ ನಂಜುಂಡಪ್ಪ, ಕುರುಂಜಿ ಪ್ರೇಮನಾಥ್, ಹೊಸಗದ್ದೆ ವೆಂಕಟರಮಣ, ಕುದುಪಜೆ ಹರೀಶ್, ಕೆ.ಎಸ್. ಸೀತಾರಾಮ್ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ನಂಗಾರು ಪೂರ್ಣಿಮ ಹಾಗೂ ಬಾರಿಕೆ ಪುಷ್ಪ, ಹಿಂದುಳಿದ ಸಾಲಗಾರರ ಪ್ರವರ್ಗ ಎ ಸ್ಥಾನಕ್ಕೆ ಅಯ್ಯಣೀರ ದಿನೇಶ್, ಬಿ.ಕೆ. ಪ್ರಭಾಕರ್, ಸಾಲಗಾರರ ಸದಸ್ಯರ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಎಂ.ವಿ. ಜಯರಾಂ, ಸಾಲಗಾರರ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಸ್ಥಾನಕ್ಕೆ ಬೆಳ್ಯಪ್ಪ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಭಾನುಪ್ರಕಾಶ್ ಪಾಂಡಿ ಗೆಲವು ಸಾಧಿಸಿದ್ದಾರೆ.