ನಾಪೋಕ್ಲುವಿನ ಕೆಲವು ಮನೆಯ ಗೋಡೆಗಳಲ್ಲಿ ಚಳಿಗಾಲದ ಹೂವಿನ ಬಳ್ಳಿ ಬಿಗ್ನೋನಿಯ ಹಬ್ಬಿದ್ದು ಕಿತ್ತಳೆ ಹಳದಿ ಬಣ್ಣದ ಹೂಗಳಿಂದ ಮನ ಸೆಳೆಯುತ್ತಿದೆ. ಬಿಗ್ನೋನಿಯ ಚಳಿಗಾಲದಲ್ಲಿ ಅರಳುವ ಹೂಗಳು. ಹೂವಿನ ಆಕಾರ ನಾಳದಂತೆ.ಹೂ ಬಿಡುವಾಗ ಎಲೆಗಳೆಲ್ಲವೂ ಹೂವಿನಿಂದ ಮುಚ್ಚಿ ಹೋಗುತ್ತದೆ. ಹೂವುಗಳು ಗೊಂಚಲು ಗೊಂಚಲಾಗಿ ಹಾರದಂತೆ ಇಳಿಬಿದ್ದು ನೋಡುಗರ ಮನಸೆಳೆಯುತ್ತವೆ. ಬಿಗ್ನೋನಿಯ ಬಳ್ಳಿಗಳನ್ನು ಸ್ಕ್ರೀನ್‍ಗಳಿಗಾಗಿ ಗೋಡೆಗಳನ್ನು ಮುಚ್ಚಲು, ಮನೆಯ ಮುಂದಿನ ಗೇಟುಗಳಲ್ಲಿ ಹಬ್ಬಿಸಲು ಬೆಳೆಸುತ್ತಾರೆ. ಇವು ಹಗುರ ಬಳ್ಳಿಗಳಾಗಿದ್ದು, ಸುಲಭವಾಗಿ ಬೆಳೆದು ಹರಡಬಲ್ಲವು. ನಾಳಾಕಾರದ ಹೂಗಳ ತುದಿಯಲ್ಲಿ ಐದು ದಳಗಳು ಹರಡಿರುತ್ತವೆ. ನಿತ್ಯ ಹಸುರಿನ ಬಳ್ಳಿಯಾಗಿದ್ದು ಬಹುಬೇಗನೆ ಹಬ್ಬಿ ಮುಚ್ಚುತ್ತವೆ. ಚಳಿಗಾಲದಲ್ಲಿ ಎಲೆಗಳೆಲ್ಲಾ ಹೂವಿನಿಂದಲೇ ಮುಚ್ಚಿಹೋಗುವುದರಿಂದ ಅಲಂಕಾರಿಕ ಹೂಗಳು ಸೊಬಗು ತೋರುತ್ತವೆ. ಈ ಬಳ್ಳಿಯನ್ನು ಒಣಗುವುದಕ್ಕೆ ಬಿಡಬಾರದು. ಬಿಗ್ನೋನಿಯ ಬಳ್ಳಿಯ ಕೃಷಿ ಸುಲಭ ತುಂಡುಗಳಿಂದ ಹೆಚ್ಚಿಸಿ ಕೊಳ್ಳಬಹುದು. ಸೂರ್ಯನ ಬೆಳಕು ಧಾರಾಳವಾಗಿ ಸಿಕ್ಕಿದಲ್ಲಿ ರಾಶಿ-ರಾಶಿ ಹೂಗಳು ಬಿಡುತ್ತವೆ. ಮನೆಯ ಗೋಡೆಗಳಲ್ಲಿ ಛಾವಣಿಯಲ್ಲಿ ಕಿತ್ತಳೆ ಬಣ್ಣದ ಬಿಗ್ನೋನಿಯ ಹಬ್ಬಿ ಹೂ ಅರಳಿತೆಂದರೆ ಸೌಂದರ್ಯರಾಶಿಯೇ ಮೈದಳೆದಂತೆ ಕಂಡುಬರುತ್ತವೆ.

-ದುಗ್ಗಳ ಸದಾನಂದ